ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಯೂರು ಶ್ರೀಗಳ ಜನ್ಮದಿನೋತ್ಸವ - ಗ್ರಾಮೋತ್ಸವ, ಅನ್ನಛತ್ರದ ಉದ್ಘಾಟನೆ

ಅರಿವಿನೊಂದಿಗೆ ಮಾಡುವ ಸೇವೆ ದೇವರಿಗೆ ಪ್ರಿಯವಾದುದು: ಗುರುದೇವಾನಂದ ಸ್ವಾಮೀಜಿ
Last Updated 8 ಆಗಸ್ಟ್ 2022, 14:15 IST
ಅಕ್ಷರ ಗಾತ್ರ

ವಿಟ್ಲ: ತ್ಯಾಗ ತುಂಬಿದ ಸೇವೆ ದೇಶವನ್ನು ಬೆಳಗಿಸುತ್ತದೆ, ಮಾತ್ರವಲ್ಲದೆ ವ್ಯಕ್ತಿತ್ವವನ್ನು ಹೆಚ್ಚುಗೊಳಿಸುತ್ತದೆ. ತ್ಯಾಗ ಮತ್ತು ಸೇವೆ ಬದುಕಿನಲ್ಲಿ ಬಹುಮುಖ್ಯ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ವತಿಯಿಂದ ಸೋಮವಾರ ಒಡಿಯೂರು ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀಗಳ ಜನ್ಮದಿನೋತ್ಸವ - ಗ್ರಾಮೋತ್ಸವ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ, ನೂತನವಾಗಿ ನಿರ್ಮಿಸಲಾದ ಶ್ರೀಮಾತಾ ಅನ್ನಛತ್ರದ ಉದ್ಘಾಟನೆಯ ಬಳಿಕ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

‘ಅರಿವಿನೊಂದಿಗೆ ಮಾಡುವ ಸೇವೆ ದೇವರಿಗೆ ಪ್ರಿಯವಾದುದು. ತಿಳಿದು ಸೇವೆ ಮಾಡುವ ಮನಸ್ಸು ನಮ್ಮದಾಗಬೇಕು. ಅರಿತು ಮಾಡಿದ ಸೇವೆ ಅರ್ಥಪೂರ್ಣವಾಗಿರುತ್ತದೆ. ಅಹಂಕಾರ, ಮಮಕಾರವಿಲ್ಲದ ಸೇವೆ ಭಗವಂತನಿಗೆ ಸಲ್ಲುತ್ತದೆ. ಜ್ಞಾನಪೂರ್ಣತೆಯಿಂದ ಸಂಪತ್ತನ್ನು ಸದ್ವಿನಿಯೋಗಿಸಿದಾಗ ಅದಕ್ಕೆ ಮೌಲ್ಯ ತುಂಬುತ್ತದೆ. ಸತ್ಕರ್ಮದಿಂದ ಮಾಡಿದ ಸೇವೆಗೆ ಪ್ರತಿಫಲವಿದೆ’ ಎಂದು ಹೇಳಿದರು.

ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಒಡಿಯೂರು ಶ್ರೀಗಳು ಹೃದಯ ವೈಶಾಲ್ಯ ಹೊಂದಿರುವ ಸಂತ. ಸಮಾಜದಲ್ಲಿ ಐಕ್ಯಮತ್ಯ ಅಗತ್ಯ. ನಮ್ಮಲ್ಲಿ ಧರ್ಮನಿಷ್ಠೆ ಮುಖ್ಯ. ಶ್ರೀಗಳು ಸಮಾಜಕ್ಕಾಗಿ ಮಾಡಿರುವ ತ್ಯಾಗ ಅವಿಸ್ಮರಣೀಯವಾಗಿದೆ. ಸತ್ಯದ ಅರಿವು ನಮ್ಮಲ್ಲಿ ಅಗತ್ಯ. ಭಕ್ತಿ, ಭಾವ ಒಂದಾಗಬೇಕು. ಎಲ್ಲರು ಒಂದೇ ಎನ್ನುವ ದೃಷ್ಟಿಕೋನ ನಮ್ಮದಾಗಬೇಕು. ಆಗ ದೇಶಕ್ಕೂ ಸುಭೀಕ್ಷೆ ಎಂದರು.

ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತ ಚಿಂತನ್ ಎಸ್.ಶೆಟ್ಟಿ, ಜಮ್ಮದಮನೆ ಹಾಗೂ ಶ್ರೀಮದ್ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತೆ ಸಾನ್ವಿ ಸಿ.ಎಸ್. ಅವರಿಗೆ ಬಾಲಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಗ್ರಾಮೋತ್ಸವದ ಅಂಗವಾಗಿ ನಡೆದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಕಡೆಗಳ ಭಕ್ತರಿಂದ ಶ್ರೀಗಳಿಗೆ ಗುರುವಂದನೆ ನಡೆಯಿತು. ವಿವಿಧ ಫಲಾನುಭವಿಗಳಿಗೆ ಸೇವಾ ರೂಪದಲ್ಲಿ ಸವಲತ್ತುಗಳನ್ನು ನೀಡಲಾಯಿತು.

ಮುಂಬೈನ ಹೇರಂಬ ಇಂಡಸ್ಟ್ರೀಸ್‌ನ ನಿರ್ದೇಶಕರಾದ ಸದಾಶಿವ ಕೆ. ಶೆಟ್ಟಿ ಕೂಳೂರು ಕನ್ಯಾನ ಅವರು ಶ್ರೀಮಾತಾ ಅನ್ನಛತ್ರವನ್ನು ಉದ್ಘಾಟಿಸಿದರು. ಸಾಧ್ವಿ ಮಾತಾನಂದಮಯೀರವರು ಸಾನ್ನಿಧ್ಯ ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್ ಪ್ರಕಾಶ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು, ಪುತ್ತೂರು ಶಾಸಕ ಸಂಜೀವ ಮಠಂದೂರು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ, ಮೂಲ್ಕಿ-ಮೂಡುಬಿದಿರೆ ಕ್ಷೇತ್ರ ಶಾಸಕ ಉಮಾನಾಥ ಎ.ಕೋಟ್ಯಾನ್, ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯಾ ಕಿಶೋರ್ ಶೆಟ್ಟಿ, ಉದ್ಯಮಿ ಪ್ರವೀಣ್ ಭೋಜ ಶೆಟ್ಟಿ ಮುಂಬೈ, ಮಂಗಳೂರಿನ ಕಾಂಚನ ಆಟೊಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಪ್ರಸಾದ್ ರಾಜ್ ಕಾಂಚನ್, ಮುಂಬೈಯ ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ದಯಾನಂದ ಹೆಗ್ಡೆ ಮುಂಬೈ, ಯಮುನಾ ಬೋರ್‌ವೆಲ್ಸ್‌ನ ಮಾಲೀಕ ಪುರುಷೋತ್ತಮ ಶೆಟ್ಟಿ, ಒಡಿಯೂರು ವಿವಿಧೋದ್ದೇಶ ಸಹಕಾರಿಯ ಅಧ್ಯಕ್ಷ ಸುರೇಶ್ ರೈ, ಜನ್ಮದಿನೋತ್ಸವ ಸಮಿತಿ ಕಾರ್ಯದರ್ಶಿ ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿಗುತ್ತು ಇದ್ದರು.

ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಜನ್ಮದಿನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ವಂದಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT