ಮಂಗಳವಾರ, ಜೂನ್ 22, 2021
29 °C
ವೆನ್ಲಾಕ್: ₹1.37 ಕೋಟಿ ವೆಚ್ಚದಲ್ಲಿ ಆನ್‌ಸೈಟ್‌ ಆಮ್ಲಜನಕ ಘಟಕ ನಿರ್ಮಾಣ

ಇಂದು ಕಾಮಗಾರಿ ಪ್ರಾರಂಭ: ಕಾಮತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಯಲ್ಲಿ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ₹1.37 ಕೋಟಿ ವೆಚ್ಚದಲ್ಲಿ ವಿಎಸ್ಎ ತಂತ್ರಜ್ಞಾನವುಳ್ಳ 500 ಎಲ್.ಪಿ.ಎಂ ಸಾಮರ್ಥ್ಯದ ಆನ್‌ಸೈಟ್ ಆಕ್ಸಿಜನ್ ಜನರೇಟರ್ ಘಟಕ ನಿರ್ಮಾಣ ಕಾಮಗಾರಿ ಗುರುವಾರ ಪ್ರಾರಂಭವಾಗಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣದ ಸ್ಥಳ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಂಸದ ನಳಿನ್‌ಕುಮಾರ್ ಕಟೀಲ್ ಅವರ ಪ್ರಯತ್ನದಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಎಂಆರ್‌ಪಿಎಲ್‌ ಸಂಸ್ಥೆಯ ವತಿಯಿಂದ ಆಮ್ಲಜನಕ ಉತ್ಪಾದನಾ ಘಟಕದ ಕಾಮಗಾರಿ ಆರಂಭವಾಗಿದೆ. ಕೆಲವೇ ದಿನಗಳಲ್ಲಿ ಎರಡೂ ಘಟಕಗಳು ಜನರ ಸೇವೆಗೆ ಲಭ್ಯವಾಗಲಿದೆ. ಈ ಹಿಂದೆ ವೆನ್ಲಾಕ್ ಆಸ್ಪತ್ರೆಯಲ್ಲಿ ನಿತ್ಯ 2.5 ಕೆಎಲ್ ಆಮ್ಲಜನಕ ಬೇಕಾಗುತ್ತಿತ್ತು. ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಬೇಡಿಕೆ ಹೆಚ್ಚಾಗಿದ್ದು, ಸುಮಾರು 5 ಕೆಎಲ್ ಆಮ್ಲಜನಕದ ಬೇಡಿಕೆಯಿದೆ ಎಂದರು.

ಆನ್‌ಸೈಟ್ ಆಕ್ಸಿಜನ್ ಜನರೇಟರ್ ಘಟಕದಿಂದ ನಿತ್ಯ 1 ಟನ್ ಆಮ್ಲಜನಕ ಉತ್ಪಾದಿಸಬಹುದು. ವೈದ್ಯಕೀಯ ಆಮ್ಲಜನಕ ಸರಬರಾಜುದಾರರ ಮೇಲೆ ಅವಲಂಬಿತ ಆಗುವುದನ್ನು ಕಡಿಮೆ ಮಾಡಬಹುದು ಎಂದರು.

ವೆನ್ಲಾಕ್ ಆಸ್ಪತ್ರೆಗೆ ಘಟಕವನ್ನು ನೀಡಿದ ಸಿ.ಎಂ ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಸುಧಾಕರ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ಕುಮಾರ್ ಕಟೀಲ್ ಅವ ರನ್ನು ಅಭಿನಂದಿಸುವುದಾಗಿ ಹೇಳಿದರು.

ವೆನ್ಲಾಕ್ ಅಧಿಕಾರಿಗಳೊಂದಿಗೆ ಸಭೆ: ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗಾಗಿ ನೀಡುವ ಚಿಕಿತ್ಸೆ ಹಾಗೂ ಆಸ್ಪತ್ರೆಯ ವ್ಯವಸ್ಥೆಯ ಕುರಿತು ಶಾಸಕ ವೇದವ್ಯಾಸ ಕಾಮತ್ ಬುಧವಾರ ವೆನ್ಲಾಕ್ ಆಸ್ಪತ್ರೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಪಾಲಿಕೆ ಸಚೇತಕ ಸುಧೀರ್‌ ಶೆಟ್ಟಿ ಕಣ್ಣೂರು, ಪಾಲಿಕೆ ಸದಸ್ಯ ರಾಧಾಕೃಷ್ಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಎಂ., ವೈದ್ಯಕೀಯ ಪ್ರಕೋಷ್ಠದ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ಜಿಲ್ಲಾ ವಕ್ತಾರ ಜಗದೀಶ್ ಶೇಣವ, ಮುಖಂಡರಾದ ಸಚಿನ್ ರಾಜ್ ರೈ, ಮೋಹನ್ ಆಚಾರ್ಯ ಇದ್ದರು.

ಪ್ರತಿಯೊಬ್ಬರಿಗೂ ಲಸಿಕೆ: ಕಾಮತ್

ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಜವಾಬ್ದಾರಿ ಸರ್ಕಾರ, ಜಿಲ್ಲಾಡಳಿತದ ಮೇಲಿದೆ.‌ ವದಂತಿಗಳಿಗೆ ಕಿವಿಗೊಡಬೇಡಿ ಹಂತ ಹಂತವಾಗಿ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಶಾಸಕ ‌ವೇದವ್ಯಾಸ ಕಾಮತ್ ಹೇಳಿದರು.

ಪ್ರಥಮ ಹಂತದ ಕೋವಿಶೀಲ್ಡ್ ಲಸಿಕೆ ಪಡೆದವರಿಗೆ 84 ದಿನಗಳ ನಂತರ ಎರಡನೇ ಡೋಸ್‌ ನೀಡಲಾಗುತ್ತದೆ. ಲಸಿಕೆ ನೀಡುವ ಒಂದು ದಿನ ಮೊದಲು ಎಸ್ಎಂಎಸ್ ಅಥವಾ ಕರೆ ಮಾಡಿ ಮಾಹಿತಿ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಗಾಬರಿ ಪಡಬೇಕಿಲ್ಲ ಎಂದರು.

ಪ್ರಾರಂಭದ ದಿನಗಳಲ್ಲಿ ಲಸಿಕೆಯ ಕುರಿತು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡಿದ ಕಾಂಗ್ರೆಸ್‌ ಮುಖಂಡರು, ಇಂದು ಲಸಿಕೆ ಸಿಗುತ್ತಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಜನರಲ್ಲಿ ಭೀತಿ ಹುಟ್ಟಿಸಿ ಜನರು ಲಸಿಕೆ ಪಡೆಯಲು ಬಾರದಂತೆ ಮಾಡಿದ ಕಾಂಗ್ರೆಸ್‌ ಮುಖಂಡರು ಇಂದು ಲಸಿಕೆ ಪಡೆಯುತ್ತಿದ್ದಾರೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.