ಬುಧವಾರ, ಸೆಪ್ಟೆಂಬರ್ 18, 2019
26 °C
ನಗರದಾದ್ಯಂತ ಸಂಭ್ರಮದ ಓಣಂ ಆಚರಣೆ

‘ಸರ್ವ ಧರ್ಮ ಸಮನ್ವತೆಯ ಓಣಂ’

Published:
Updated:
Prajavani

ಮಂಗಳೂರು: ನಗರದಾದ್ಯಂತ ಓಣಂ ಹಬ್ಬವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು. ಪೂಕಳಂ, ವಿಶೇಷ ಖಾದ್ಯಗಳ ಮೂಲಕ ಶಾಲಾ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಂಭ್ರಮಿಸಿದರು.

ಸೇಂಟ್‌ ಅಲೋಶಿಯಸ್‌ ಕಾಲೇಜು: ನಗರದ ಸೇಂಟ್‌ ಅಲೋಶಿಯಸ್‌ ಪದವಿಪೂರ್ವ ಕಾಲೇಜಿನಲ್ಲಿ ಮಲೆಯಾಳಂ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂಶುಪಾಲ ರೆ.ಫಾ. ಕ್ಲಿಫರ್ಡ್ ಸಿಕ್ವೇರಾ, ‘ತುಳುನಾಡು ಮತ್ತು ಕೇರಳ ರಾಜ್ಯದ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳಲ್ಲಿ ಸಾಮ್ಯತೆ ಇದೆ. ತುಳುನಾಡಿನಲ್ಲಿ ದೀಪಾವಳಿ ಹಬ್ಬದ ಸಂದರ್ಭ ಬಲಿಚಕ್ರವರ್ತಿ ಭೂಮಿಗೆ ಬರುವಂತೆ, ಕೇರಳದಲ್ಲಿ ಓಣಂ ಹಬ್ಬದ ಸಂದರ್ಭ ಬಲಿ ಚಕ್ರವರ್ತಿ ಬರುತ್ತಾನೆ ಎಂಬ ನಂಬಿಕೆ ಇದೆ. ಓಣಂ ಹಬ್ಬ ಸರ್ವಧರ್ಮ ಸಮಾನತೆಯ ಸಂಕೇತ’ ಎಂದು ಹೇಳಿದರು.

ಮಲೆಯಾಳಂ ಭಾಷಾ ವಿಭಾಗದ ಉಪನ್ಯಾಸಕಿ ರೆತ್ನಮ್ಮ ಕಾರ್ಯಕ್ರಮ ಸಂಯೋಜಿಸಿದ್ದರು. ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಲೀಂದ್ರ ಆಗಮನದ ಹಿನ್ನೆಲೆ ಸಾರುವ ಪ್ರಹಸನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಎಕ್ಸ್‌ಪರ್ಟ್‌ ಕಾಲೇಜು: ನಗರದ ಕೊಡಿಯಾಲಬೈಲ್‌ನ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ಓಣಂ ಆಚರಣೆಯನ್ನು ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್. ನಾಯಕ್ ಉದ್ಘಾಟಿಸಿದರು.

ದೀಪಿಕಾ ಎ. ನಾಯಕ್, ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್, ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕಿ ಶ್ವೇತಾಕುಮಾರಿ, ಕಾರ್ಯಕ್ರಮ ಸಂಯೋಜಕಿ ಸುಭಾಷಿತ, ಕನ್ನಡ ವಿಭಾಗದ ಮುಖ್ಯಸ್ಥ ಕರುಣಾಕರ ಬಳ್ಕೂರು, ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಮನೋಜ್ ಶ್ಯಾನುಭೋಗ್, ಭೌತವಿಜ್ಞಾನ ವಿಭಾಗದ ಮುಖ್ಯಸ್ಥೆ ರಾಧಿಕಾ ಭಟ್, ಇಂಗ್ಲಿಷ್‌ ವಿಭಾಗ ಮುಖ್ಯಸ್ಥ ಝೀಟಾ ಡಿಸೋಜ, ಉಪನ್ಯಾಸಕರು ಉಪಸ್ಥಿತರಿದ್ದರು.

ಓಣಂ ಆಚರಣೆಯ ಪ್ರಯುಕ್ತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವರ್ಣರಂಜಿತ ಪೂಕಳಂ ಅನ್ನು ರಚಿಸಿದರು.

ವಳಚ್ಚಿಲ್: ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್.ನಾಯಕ್ ಉದ್ಘಾಟಿಸಿದರು. ದೀಪಿಕಾ ಎ.ನಾಯಕ್, ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್ ಕರಿಪ್ಪಾಲ್, ಉಪಪ್ರಾಂಶುಪಾಲ ರಾಘವೇಂದ್ರ ಶೆಣೈ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಓಣಂ ಹಬ್ಬದ ಪ್ರಯುಕ್ತ ಹಾಕಿದ ಹೂಗಳ ರಂಗೋಲಿ ವಿಶೇಷ ಗಮನಸೆಳೆಯಿತು. ಹಬ್ಬದ ಅಂಗವಾಗಿ ವಿಶೇಷ ಸಹಭೋಜನ(ಓಣಂ ಸದ್ಯ)ವನ್ನೂ ಆಯೋಜಿಸಲಾಗಿತ್ತು.

Post Comments (+)