ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | ಶಿಕ್ಷಣ ಕ್ಷೇತ್ರದ ಪ್ರಮುಖರ ಮಾತು: ಶಿಕ್ಷಣ ನೀತಿ ಜಾರಿ ಮುಖ್ಯ

Last Updated 30 ಜುಲೈ 2020, 16:28 IST
ಅಕ್ಷರ ಗಾತ್ರ

ಶಾಲಾ ಶಿಕ್ಷಣಕ್ಕೆ ಒತ್ತು, ಮಾತೃಭಾಷೆ, ಸ್ಥಳೀಯ ಭಾಷೆ, ಆಡಳಿತ ಭಾಷೆಗೆ ಪ್ರಾತಿನಿಧ್ಯ, ವೃತ್ತಿಪರ ತರಗತಿಗಳು, ಮೇಜರ್ ಮತ್ತು ಮೈನರ್ ವಿಷಯಗಳು, ಆಡಳಿತದ ಒಂದು ಕೇಂದ್ರೀಯ ಸಂಸ್ಥೆ, ಏಕರೂಪದ ಮೌಲ್ಯಮಾಪನದ ಕ್ರಮ, ಸೂಕ್ತ ಶಿಕ್ಷಕ ತರಬೇತಿ, ಶಿಕ್ಷಣ ಸಂಸ್ಥೆಗಳ ನಿರ್ವಹಣೆಯ ಮೇಲೆ ಅವುಗಳಿಗೆ ಶ್ರೇಯಾಂಕ, ಶಿಕ್ಷಣದಲ್ಲಿ ಅನುಭವ ಮತ್ತು ಪ್ರಯೋಗಗಳಿಗೆ ಆದ್ಯತೆ, ಪದವಿಯಲ್ಲಿ ಪೂರೈಸಿದ ವರ್ಷಗಳಿಗೆ ಅನುಗುಣವಾಗಿ ಸಿಗುವ ಪ್ರಮಾಣಪತ್ರಗಳು ಹೀಗೆ ಎಲ್ಲವೂ ಚೆನ್ನಾಗಿವೆ. ಇವುಗಳ ಯಶಸ್ಸು ಅನುಷ್ಠಾನ ಯಶಸ್ಸನ್ನು ಅವಲಂಬಿಸಿದೆ.

ನಮ್ಮ ವರ್ತಮಾನದ ಶಿಕ್ಷಣ ಮಟ್ಟ ಕುಸಿದಿದ್ದು ಸರಳವಾಗಿ, ನೇರವಾಗಿ ಹೇಳಬೇಕಾದರೆ ನೀತಿಯ ಕೊರತೆಯಿಂದಲ್ಲ, ಮೂಲಸೌಕರ್ಯಗಳನ್ನು ಕಲ್ಪಿಸದಿರುವುದರಿಂದ; ಶಿಕ್ಷಕರನ್ನು ನೇಮಿಸದೆ ಇರುವುದರಿಂದ, ವ್ಯಾಪಾರ ಬುದ್ಧಿಯನ್ನು ತೋರಿಸಿದ್ದರಿಂದ. ಹೊಸ ಶಿಕ್ಷಣ ನೀತಿಗೆ ಹಾಗಾಗದಿರಲಿ ಎಂದು ಹಾರೈಸುತ್ತೇನೆ.

ಡಾ.ಕೆ. ಚಿನ್ನಪ್ಪಗೌಡ, ಜಾನಪದ ವಿವಿ ವಿಶ್ರಾಂತ ಕುಲಪತಿ

***

ಹೊಸ ಶಿಕ್ಷಣ ನೀತಿ ಸ್ವಾಗತಾರ್ಹ

ದೇಶಾದ್ಯಂತ ಏಕರೂಪದ ಶಿಕ್ಷಣ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಹೊಸ ಶಿಕ್ಷಣ ನೀತಿ ಜಾರಿಗೊಳಿಸಿರುವುದನ್ನು ಸ್ವಾಗತಾರ್ಹ.

ಸಮಾನ ಶಿಕ್ಷಣ ಜಾರಿಗೊಳಿಸುವಂತೆ ಆಗ್ರಹಿಸಿ ನವದೆಹಲಿಯಲ್ಲಿ ಧರಣಿ ನಡೆಸಿ ಒಂದು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಇಂತಹ ಮಹತ್ವದ ತೀರ್ಮಾನ ಪ್ರಕಟಿಸಿದೆ. ಇದು ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯ ಹೋರಾಟಕ್ಕೆ ಸಿಕ್ಕ ಜಯ.

2018 ರಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ಮಂಗಳೂರಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು. ಆ ಬಳಿಕ ಕಳೆದ ವರ್ಷ ಜುಲೈ ತಿಂಗಳ ಅಂತ್ಯದ ವೇಳೆಗೆ ಭಾರತ ರಥಯಾತ್ರೆ ದೆಹಲಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡು ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಹರ್ಯಾಣ, ದೆಹಲಿ ರಾಜ್ಯಗಳನ್ನು ರಥಯಾತ್ರೆಯ ಮೂಲಕ ಸಂಪರ್ಕಿಸಿ ವಿಶೇಷವಾಗಿ ಅಲ್ಲಿನ ಕೊಳೆಗೇರಿ, ಬೀದಿಗಳಲ್ಲಿ ಸಮಾನ ಶಿಕ್ಷಣ ಜಾರಿ ಹಾಗೂ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗಿತ್ತು. ಈ ಎಲ್ಲ ಹೋರಾಟದ ಬಹುತೇಕ ಆಶಯಗಳು ಹೊಸ ಶಿಕ್ಷಣ ನೀತಿಯಲ್ಲಿರುವುದು ಖುಷಿ ಕೊಟ್ಟಿದೆ.

ಪ್ರಕಾಶ್ ಅಂಚನ್, ಸರ್ಕಾರಿ ಶಾಲೆ ಉಳಿಸಿ– ಬೆಳೆಸಿ ರಾಜ್ಯ ಅಧ್ಯಕ್ಷ

***

ಕೌಶಲ ಅಭಿವೃದ್ಧಿಗೆ ಒತ್ತು ನೀಡುವ ಶಿಕ್ಷಣ

ನಮ್ಮಲ್ಲಿ ಇದುವರೆಗಿದ್ದ ಶಿಕ್ಷಣ ವ್ಯವಸ್ಥೆ ಅಂಕ ಮತ್ತು ಉದ್ಯೋಗಕ್ಕೆ ಸೀಮಿತವಾಗಿದ್ದರೆ, ಹೊಸ ನೀತಿಯಲ್ಲಿ ಮಾತೃಭಾಷೆಯಲ್ಲಿ ಕಲಿಕೆ ಸೇರಿದಂತೆ ಬಹು ಆಯ್ಕೆಗಳಿಗೆ ಅವಕಾಶ ಕಲ್ಪಿಸಿರುವುದರಿಂದ ಉನ್ನತ ಶಿಕ್ಷಣದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದಕ್ಕೆ ಪ್ರೌಢಶಿಕ್ಷಣದಲ್ಲೇ ಅಡಿಪಾಯ ಸಿಗಲಿದೆ. ಪ್ರಾಥಮಿಕ ಹಂತದಲ್ಲಿ ತಾಂತ್ರಿಕ, ವೃತ್ತಿಪರ ಶಿಕ್ಷಣ ಕಲಿಕೆಗೂ ಅವಕಾಶವಿದೆ. 9 ರಿಂದ 12 ತರಗತಿವರೆಗಿನ ಶಿಕ್ಷಣಕ್ಕೆ ಇಲ್ಲಿ ಹೆಚ್ಚು ಮಹತ್ವ ನೀಡಲಾಗಿದೆ. ಅಡಿಪಾಯ ಗಟ್ಟಿ ಇರುವ ಶಿಕ್ಷಣ ವ್ಯವಸ್ಥೆ ಇಲ್ಲಿ ಸಿಗಲಿದೆ.

ಈಗಿನ ಶಿಕ್ಷಣ ವ್ಯವಸ್ಥೆ ಅನುಷ್ಠಾನದ ಹಂತದಲ್ಲಿ ಸವಾಲು ಎದುರಾಗಲಿದ್ದರೂ ಶಿಕ್ಷಕರನ್ನು ಈ ವ್ಯವಸ್ಥೆಗೆ ಮೇಲ್ದರ್ಜೆಗೆ ಏರಿಸಬೇಕು. ಅವರಿಗೆ ಗುಣಮಟ್ಟದ ತರಬೇತಿ ಕೂಡ ಅಗತ್ಯ. ಅದಕ್ಕೆ ಸರ್ಕಾರ ಅವಕಾಶವನ್ನು ಕಲ್ಪಿಸಿಕೊಡಬೇಕು. ವಿದೇಶಗಳಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಭಾರತದಲ್ಲಿ ಶಾಖೆಗಳನ್ನು ತೆರೆದು, ಬೋಧನೆಗೆ ಅವಕಾಶ ನೀಡಿರುವುದು ಒಳ್ಳೆಯ ಕ್ರಮ. ಶಿಕ್ಷಣದಲ್ಲೂ ಆರೋಗ್ಯಕರ ಪೈಪೋಟಿ ಇರಬೇಕು.

ವಿವೇಕ ಆಳ್ವ, ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಟ್ರಸ್ಟಿ

***

ಸ್ವಾವಲಂಬಿ ಭಾರತ ನಿರ್ಮಾಣ

ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನ ಆಧಾರಿತ, ಉದ್ಯೋಗ ಆಧಾರಿತ, ತಂತ್ರಜ್ಞಾನ ಆಧಾರಿತ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲವಾಗಲಿದೆ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ. ಭಾರತೀಯ ಮೌಲ್ಯಗಳಿಗೆ ಅನುಗುಣವಾಗಿ ಮತ್ತು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯ ಅವಶ್ಯಕತೆ ದೇಶಕ್ಕೆ ತುಂಬಾ ಸಮಯದಿಂದ ಇತ್ತು. ಭಾರತಿಯರಿಗೆ ದೀರ್ಘಕಾಲದಿಂದ ಅಗತ್ಯವಿರುವ ಪ್ರಮುಖ ಸುಧಾರಣೆಗಳ ಬಗ್ಗೆ ಸರ್ಕಾರ ಈಗ ಗಮನ ಹರಿಸಿದೆ.

ಈ ಬದಲಾವಣೆಯು ಬಹು ಶತಕೋಟಿ ಭಾರತೀಯ ವಿದ್ಯಾರ್ಥಿ ಸಮುದಾಯದ ಕನಸುಗಳಿಗೆ ಶಕ್ತಿಯುತವಾದ ರೆಕ್ಕೆ ನೀಡಲಿದೆ ಎಂದು ನಾವು ಭಾವಿಸುತ್ತೇವೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಲು ಕಾರ್ಯನಿರ್ವಹಿಸಿದ ಸಮಿತಿಯ ಎಲ್ಲ ಸದಸ್ಯರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಅಭಿನಂದನೆ.

ಬಸವೇಶಕುಮಾರ್‌, ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT