ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ ಹಿಂಸಾಚಾರ: ಸಮಾನ ಮನಸ್ಕ ಸಂಘಟನೆಗಳ ಪ್ರತಿಭಟನೆ

Published 7 ಜೂನ್ 2023, 6:44 IST
Last Updated 7 ಜೂನ್ 2023, 6:44 IST
ಅಕ್ಷರ ಗಾತ್ರ

ಮಂಗಳೂರು: ‘ಮಣಿಪುರದಲ್ಲಿ ಕ್ರೈಸ್ತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ’ ಎಂದು ಆರೋಪಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟವು ಈ ಕೃತ್ಯ ಖಂಡಿಸಿ ಇಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.

ಮಂಗಳೂರು ಕಥೊಲಿಕ್ ಸಭಾ ಮತ್ತು ಯುನೈಟೆಡ್ ಕ್ರಿಶ್ಚಿಯನ್ ಫೋರಂ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ರಾಯ್ ಕ್ಯಾಸ್ಟಲಿನೊ, ‘ಮಣಿಪುರದ ಬುಡಕಟ್ಟು ಜನರು ಮೀಸಲಾತಿಗೆ ಒತ್ತಾಯಿಸಿ ಶಾಂತಿಯುತವಾಗಿ ಮೆರವಣಿಗೆ ನಡೆಸಿದ್ದರು. ಆದರೆ ಇದನ್ನು ಸಮಾಜ ವಿರೋಧಿ ಶಕ್ತಿಗಳು ಹಿಂಸಾಚಾರಕ್ಕೆ ತಿರುಗಿಸಿವೆ’ ಎಂದು ಆರೋಪಿಸಿದರು.

‘ಅಲ್ಪ ಜನಸಂಖ್ಯೆಯನ್ನು ಹೊಂದಿರುವ ಮಣಿಪುರ ರಾಜ್ಯವು ರಾಜಕೀಯ ಮತ್ತು ಸಾಮಾಜಿಕವಾಗಿ ಅಸಮತೋಲನದಿಂದ ಬಳಲುತ್ತಿದೆ. ಇಲ್ಲಿನ ಗಲಭೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ, ಶಾಂತಿ ಸುವ್ಯವಸ್ಥೆಯನ್ನು ಮರುಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು’ ಎಂದು ಒತ್ತಾಯಿಸಿದರು. 

‘ಮಣಿಪುರ ರಾಜ್ಯದಲ್ಲಿ ಬುಡಕಟ್ಟು ಜನರ ಮೀಸಲಾತಿ ವಿಚಾರವಾಗಿ ಭುಗಿಲೆದ್ದ ಹಿಂಸಾಚಾರದ ವೇಳೆ ಚರ್ಚ್‌ಗಳನ್ನು ಗುರಿಯಾಗಿಸಿ ವಿನಾಕಾರಣ ದಾಳಿ ನಡೆಸಲಾಗುತ್ತಿದೆ. ಕ್ರೈಸ್ತರ ಮೇಲೆ ವ್ಯಾಪಕ ಹಿಂಸಾಚಾರ ನಡೆಯುತ್ತಿದೆ. ಮಣಿಪುರದಲ್ಲಿ ಬಹುಸಂಖ್ಯಾತರಾಗಿರುವ ಕ್ರೈಸ್ತರು ಮತ್ತು ಇತರ ಸಮುದಾಯದ ನಡುವೆ ಸೌಹಾರ್ದ ವಾತಾವರಣವನ್ನು ಸಾಧಿಸುವ ಬದಲು, ಅಲ್ಲಿನ  ಸರ್ಕಾರವು ದ್ವೇಷದ ರಾಜಕಾರಣವನ್ನು ನಡೆಸುತ್ತಿದೆ. ಅಲ್ಲಿ ಕರ್ಫ್ಯೂ ಹೇರಲಾಗಿದೆ. ಇಂಟರ್ನೆಟ್ ಸೇರಿದಂತೆ ಎಲ್ಲಾ ರೀತಿಯ ಸಂಪರ್ಕಗಳನ್ನು ಕಡಿತಗೊಳಿಸಲಾಗಿದ್ದು, ಜನಜೀವನ  ಅಸ್ತವ್ಯಸ್ಥವಾಗಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು. 

‘ಕ್ರೈಸ್ತರ ಹಾಗೂ  ಚರ್ಚ್‌ಗಳ ಮೇಲಿನ ದೌರ್ಜನ್ಯ ನಿಲ್ಲಬೇಕು. ಗಲಭೆಯಿಂದ ಲಕ್ಷಾಂತರ ಜನರು ಸಂತ್ರಸ್ತರಾಗಿದ್ದಾರೆ. ದೇಶದ ಒಂದು ಪುಟ್ಟ ರಾಜ್ಯವಿದು. ಇಲ್ಲಿ ಗಂಭೀರ ಸಮಸ್ಯೆ ತಲೆದೋರಿದರೂ ಅದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ’ ಎಂದು ಪ್ರತಿಭಟನಾನಿರತರು ಬೇಸರ ವ್ಯಕ್ತಪಡಿಸಿದರು.

ಸಿಪಿಎಂ ಮುಖಂಡ ಸುನಿಲ್ ಕುಮಾರ್ ಬಜಾಲ್, ಸ್ಟ್ಯಾನಿ ಲೋಬೊ, ಕೆ.ಅಶ್ರಫ್, ಮಂಜುಳಾ ನಾಯಕ್, ಫಾ. ಮ್ಯಾಕ್ಸಿಂ ನೊರೊನ್ಹಾ, ಆಲ್ಫ್ರೆಡ್ ಮನೋಹರ್, ಆಲ್ಫ್ರೆಡ್, ಅನಿಲ್ ಸಿಕ್ವೇರಾ, ನೊರಿನ್‌ ಪಿಂಟೊ, ಮಹಮ್ಮದ್ ಕುಂಜತ್ತಬೈಲ್ ಸೇರಿ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT