ಶಕುಂತಳಾ ಶೆಟ್ಟಿ ವಿರುದ್ಧ ಆಕ್ರೋಶ-ಸವಾಲು

7
ಪುತ್ತೂರು ಕಾಂಗ್ರೆಸ್ನಲ್ಲಿ ಭುಗಿಲೆದ್ದ ಭಿನ್ನಮತ

ಶಕುಂತಳಾ ಶೆಟ್ಟಿ ವಿರುದ್ಧ ಆಕ್ರೋಶ-ಸವಾಲು

Published:
Updated:

ಪುತ್ತೂರು : ನಗರಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಟಿಕೆಟ್‌ ಹಂಚಿಕೆಗೆ ಸಂಬಂಧಿಸಿದಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಗುಂಪಿನ ಅಭ್ಯರ್ಥಿಗಳನ್ನು  ಕಡೆಗಣಿಸಿರುವುದರಿಂದ ಭಿನ್ನಮತ ಭುಗಿಲೆದ್ದಿದೆ. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಪಕ್ಷದೊಳಗಿನ ಈ ವಿದ್ಯಮಾನ ಬಿಜೆಪಿಗೆ ವರವಾಗಲಿದೆ ಎಂಬ ಟೀಕೆಗಳಿವೆ.

ಪುತ್ತೂರು ನಗರಸಭೆಗೆ ನಡೆಯುವ ಚುನಾವಣೆಗೆ ಸಂಬಂಧಿಸಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ನಗರಸಭೆಯ 31 ವಾರ್ಡ್‌ಗಳಿಗೆ ಸಂಬಂಧಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದಾರೆ. ಹೇಮನಾಥ ಶೆಟ್ಟಿ ಅವರ ಬಣದಲ್ಲಿ ಗುರುತಿಸಿಕೊಂಡಿದ್ದ ನಗರಸಭೆ ಅಧ್ಯಕ್ಷೆ  ಜಯಂತಿ ಬಲ್ನಾಡು, ಸದಸ್ಯರಾದ ಎಚ್.ಮಹಮ್ಮದ್ ಆಲಿ, ಮುಕೇಶ್ ಕೆಮ್ಮಿಂಜೆ, ಅನ್ವರ್ ಕಾಸಿಂ, ಜಯಲಕ್ಷ್ಮೀ ಸುರೇಶ್, ಸ್ವರ್ಣಲತಾ ಹೆಗ್ಡೆ, ಉಷಾ ಧನಂಜಯ ಆಚಾರ್ಯ, ಝೊಹರಾ ನಿಸಾರ್ ಮಾತ್ರವಲ್ಲದೆ ಮಹಮ್ಮದ್ ಆಲಿ ಗುಂಪಿನವರು ಆಯ್ಕೆ ಮಾಡಿದ್ದ ಅಭ್ಯರ್ಥಿಗಳನ್ನು ಕೈ ಬಿಟ್ಟಿರುವುದು ಆಕ್ರೋಶ ಸ್ಫೋಟಗೊಳ್ಳಲು ಕಾರಣವಾಗಿದೆ.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹಾಗೂ ಎಚ್.ಮಹಮ್ಮದ್ ಆಲಿ ಬಳಗದವರು ಈ ಬಾರಿಯ ಚುನಾವಣೆಗೆ ಸಂಬಂಧಿಸಿ ನಗರಸಭೆಯ ಎಲ್ಲಾ 31 ವಾರ್ಡ್‌ಗಳಿಗೆ ಅಭ್ಯರ್ಥಿಗಳ ಪಟ್ಟಿ ತಯಾರಿಸಿ ಪಕ್ಷದ ವೀಕ್ಷಕರಿಗೆ ನೀಡಿದ್ದರು.

ಆದರೆ ನೇತೃತ್ವ ವಹಿಸಿರುವ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಬಣ ಆ ಪಟ್ಟಿಯಲ್ಲಿರುವ ಪ್ರಮುಖರಿಗೆ ಅವಕಾಶ ನೀಡದೆ ತಮ್ಮ ಬಣದಲ್ಲಿ ಗುರುತಿಸಿಕೊಂಡವರಿಗೆ ಮಣೆ ಹಾಕಿರುವುದು ಪಕ್ಷದೊಳಗಿನ ಆಂತರಿಕ ಸಂಘರ್ಷ ಮತ್ತೊಮ್ಮೆ ಬೀದಿಗೆ ಬರಲು ಕಾರಣವಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದ ಆರೋಪಕ್ಕೆ ಸಂಬಂಧಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ಅಧ್ಯಯನ ನಡೆಸಿ ನೀಡಿದ ವರದಿಯ ಆಧಾರದಲ್ಲಿ ಕೆಪಿಸಿಸಿ ಸೂಚನೆ ಮೇರೆಗೆ ಕೆಲವರಿಗೆ ನೋಟಿಸ್ ಜಾರಿಯಾಗಿದ್ದು, ಅಂಥವರಿಗೆ ನಗರಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ. ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು, ಹಿರಿಯ ಸದಸ್ಯ ಎಚ್. ಮಹಮ್ಮದ್ ಆಲಿ ಅವರಿಗೆ ಟಿಕೆಟ್ ನಿರಾಕರಿಸಲು ಇದೇ ಕಾರಣ. ಯಾರೆಲ್ಲ ಪಕ್ಷಕ್ಕೆ ನಿಷ್ಠರಾಗಿ ಇದ್ದಾರೋ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಶಕುಂತಳಾ ಶೆಟ್ಟಿ ಅವರು ಸ್ಪಷ್ಟ ಪಡಿಸಿರುವ ಬೆನ್ನಲ್ಲೇ ಅವರ ವಿರುದ್ದ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶದ ಸಂದೇಶಗಳು ಹರಿದಾಡಲಾರಂಭಿಸಿದೆ.

‘ಸಂಘ ಪರಿವಾರದ ಜತೆ ಗುರುತಿಸಿಕೊಂಡಿರುವ ಶಕುಂತಳಾ ಶೆಟ್ಟಿ ಅವರು ಪುತ್ತೂರಿನಲ್ಲಿ ಕಾಂಗ್ರೆಸ್‌ ಪಕ್ಷವನ್ನು ನಿರ್ನಾಮ ಮಾಡಲು ಹೊರಟಿದ್ದಾರೆ. ಜಾತ್ಯತೀತ ನೆಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ, ಕಳೆದ ಬಾರಿ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲು ಕಾರಣರಾಗಿರುವ ಹೇಮನಾಥ ಶೆಟ್ಟಿ ಕಾವು ಅವರನ್ನು ತುಳಿಯುವ ಕೆಲಸ ಮಾಡುವ ಮೂಲಕ ಪಕ್ಷ ಸಂಘಟನೆಯನ್ನು ಛಿದ್ರಗೊಳಿಸಲು ಹೊರಟಿದ್ದಾರೆ. ನಗರಸಭೆಯ ಪ್ರಭಾವಿ ಸದಸ್ಯ ಮಹಮ್ಮದ್ ಆಲಿ ಅವರಂಥ ಅಲ್ಪಸಂಖ್ಯಾತ ವರ್ಗದ ನಾಯಕರನ್ನು ಕಡೆಗಣಿಸುವ ಮೂಲಕ ಮುಸ್ಲಿಂ ವರ್ಗವನ್ನು ತುಳಿಯುತ್ತಿದ್ದಾರೆ’ ಎಂಬ ಆಕ್ರೋಶಗಳು ಕೇಳಿಬರುತ್ತಿದೆ.

ಶಕುಂತಳಾ ಶೆಟ್ಟಿ ಅವರು ಏನು ಬೇಕಾದರೂ ಮಾಡಲಿ,ಏನಾಗುತ್ತದೆ ನೋಡೋಣ ಎಂಬ ಸವಾಲುಗಳು ವ್ಯಕ್ತವಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !