ಭಾನುವಾರ, ಏಪ್ರಿಲ್ 5, 2020
19 °C
ಘನತ್ಯಾಜ್ಯ ಬಾಧಿತ ಪ್ರದೇಶಗಳ ಸಂರಕ್ಷಣಾ ಸಮಿತಿ ಒತ್ತಾಯ

ಪಚ್ಚನಾಡಿ: ಶೂನ್ಯ ತ್ಯಾಜ್ಯ ಘಟಕ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ತ್ಯಾಜ್ಯ ರಾಶಿ ಕುಸಿದು ಮಂದಾರ ಪ್ರದೇಶದ ಜನತೆ ಸಂತ್ರಸ್ತರಾಗಿದ್ದು, ಪಚ್ಚನಾಡಿ ಡಂಪಿಂಗ್ ಯಾರ್ಡ್‌ ಅನ್ನು ಮೊದಲು ಶೂನ್ಯ ತ್ಯಾಜ್ಯ ಘಟಕವನ್ನಾಗಿ ಮಾಡಬೇಕು ಎಂದು ಪಚ್ಚನಾಡಿ ಹಾಗೂ ಘನತ್ಯಾಜ್ಯ ಬಾಧಿತ ಇತರ ಪ್ರದೇಶಗಳ ಸಂರಕ್ಷಣಾ ಸಮಿತಿ ಒತ್ತಾಯಿಸಿದೆ.

ನಗರದ ವುಡ್‌ಲ್ಯಾಂಡ್‌ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮುಖಂಡ ಎಂ.ಜಿ. ಹೆಗಡೆ, ಡಂಪಿಂಗ್ ಯಾರ್ಡ್‌ನಲ್ಲಿ ಅಂದು ಕುಸಿದ ಭಾರೀ ತ್ಯಾಜ್ಯ ಈಗಲೂ ಇದೆ. ಈ ಎಲ್ಲ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ, ಸಂಪೂರ್ಣ ಖಾಲಿ ಮಾಡಬೇಕು. ನಂತರದ ದಿನಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಕಾಲಕಾಲಕ್ಕೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದರು.

ಕಸ ಖಾಲಿ ಮಾಡದೇ ಯಾವುದೇ ಯೋಜನೆ ಜಾರಿಗೊಳಿಸಿದರೆ, ಶಾಶ್ವತ ಪರಿಹಾರ ಸಿಗುವುದಿಲ್ಲ ಎಂದ ಅವರು, ಈ ಕುರಿತು ಈಗಾಗಲೇ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಜನಪ್ರತಿನಿಧಿಗಳಿಗೂ ಮನವಿ ಸಲ್ಲಿಸಲಾಗುವುದು ಎಂದರು.

ಪ್ರಸ್ತುತ ಇಲ್ಲಿನ ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರ ₹8 ಕೋಟಿ ಅನುದಾನ ಘೋಷಿಸಿದೆ. ಅದರಲ್ಲಿ ₹4 ಕೋಟಿ ವೆಚ್ಚದಲ್ಲಿ ಗೋಡೆ ಕಟ್ಟಲು ಉದ್ದೇಶಿಸಲಾಗಿದೆ. ಇದು ಅವೈಜ್ಞಾನಿಕ. 30 ಅಡಿ ಎತ್ತರದ ಕಸದ ರಾಶಿ ಇರುವಾಗ, ಎಷ್ಟು ಎತ್ತರದ ಗೋಡೆ ನಿರ್ಮಾಣ ಮಾಡಲು ಸಾಧ್ಯ? ಇದರಿಂದ ಯಾರಿಗೆ ಲಾಭ ಎಂದು ಪ್ರಶ್ನಿಸಿದರು.

ಡಂಪಿಂಗ್ ಯಾರ್ಡ್‌ನಲ್ಲಿ ಭಾರೀ ತ್ಯಾಜ್ಯ ತುಂಬಿರುವುದರಿಂದ ಸುತ್ತಲಿನ ಕುಡಿಯುವ ನೀರಿನ ಬಾವಿ, ನೀರಿನ ಮೂಲಗಳು ಕಲುಷಿತವಾಗಿವೆ. ತ್ಯಾಜ್ಯ ನೀರು ಮರವೂರು ಅಣೆಕಟ್ಟು ಸೇರುತ್ತಿದೆ. ಇದರ ಜವಾಬ್ದಾರಿ ಯಾರಿಗೂ ಇಲ್ಲವೇ? ಕಸ ಸಂಪೂರ್ಣ ಖಾಲಿ ಮಾಡದೇ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಕಸ ಖಾಲಿ ಮಾಡಿದ ಬಳಿಕ ಹಸಿ ಕಸ, ಒಣಕಸ, ಕೈಗಾರಿಕಾ ತ್ಯಾಜ್ಯ ಇತ್ಯಾದಿಗಳಿಗೆ ಪ್ರತ್ಯೇಕ ಸಂಸ್ಕರಣಾ ಘಟಕ ಸ್ಥಾಪಿಸಬೇಕು. ಮಹಾನಗರ ಪಾಲಿಕೆಯು ಕಸ ವಿಲೇವಾರಿಗಾಗಿಯೇ ತಿಂಗಳಿಗೆ ₹205 ಕೋಟಿ ಖರ್ಚು ಮಾಡುತ್ತಿದ್ದರೂ, ಇಷ್ಟು ವರ್ಷಗಳ ಕಾಲ ಸರಿಯಾಗಿ ಕಸ ನಿರ್ವಹಣೆ ಮಾಡಿಯೇ ಇಲ್ಲ ಎಂದು ದೂರಿದರು.

ಇದೀಗ ತ್ಯಾಜ್ಯ ವಿಲೇವಾರಿ ತೆರಿಗೆ 3 ಪಟ್ಟು ಏರಿಕೆಯಾಗಿದೆ. ಜನರು ತೆರಿಗೆ ಕಟ್ಟಿ ತ್ಯಾಜ್ಯ ವಿಲೇವಾರಿ ಸರಿಯಾಗಿ ಆಗದಿದ್ದರೆ, ತೆರಿಗೆ ಏಕೆ ವಸೂಲಿ ಮಾಡಬೇಕು? ಭ್ರಷ್ಟ ಅಧಿಕಾರಿಗಳಿಗೆ ಕಸದಿಂದಲೇ ರಸ ಸಿಗುತ್ತಿದೆ. ಅದಕ್ಕಾಗಿಯೇ ಪಚ್ಚನಾಡಿ ಕಸ ವಿಲೇವಾರಿಯೇ ಆಗುತ್ತಿಲ್ಲ. ಮೇಲಾಗಿ ಡಂಪಿಂಗ್ ಯಾರ್ಡ್‌ಗೆ ಆಗಾಗ ಬೆಂಕಿ ಬೀಳುವ ಹಿಂದಿನ ಸಂಚು ಏನು ಎಂದು ಕೇಳಿದರು.

ಸಮಿತಿಯ ಪ್ರಮುಖರಾದ ಲಾರೆನ್ಸ್ ಡಿಸೋಜ, ವೆರೋನಿಕಾ ಸೆರಾ, ಸ್ಟ್ಯಾನಿ ಅಲ್ವಾರಿಸ್, ಬಿ.ಎಸ್. ಚಂದ್ರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು