ಮಂಗಳವಾರ, ಸೆಪ್ಟೆಂಬರ್ 21, 2021
29 °C
ಆ್ಯಂಟನಿ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಗುತ್ತಿಗೆ 6 ತಿಂಗಳಲ್ಲಿ ಮುಕ್ತಾಯ: ಮೇಯರ್‌ ಪ್ರೇಮಾನಂದ ಶೆಟ್ಟಿ

ಮಂಗಳೂರು: ಪಚ್ಚನಾಡಿ ಪರಿಹಾರಕ್ಕೆ ₹14.8 ಕೋಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ವೈಜ್ಞಾನಿಕ ರೀತಿಯ ಕಸ ವಿಲೇವಾರಿಗೆ ಆದ್ಯತೆ ನೀಡಲಾಗಿದ್ದು, ಈಗಾಗಲೇ ಶೇ.65 ರಿಂದ 70ರಷ್ಟು ಕಸ ಮೂಲದಿಂದಲೇ ಬೇರ್ಪಟ್ಟು ಬರುತ್ತಿದೆ ಎಂದು ಮೇಯರ್‌ ಪ್ರೇಮಾನಂದ ಶೆಟ್ಟಿ ತಿಳಿಸಿದರು.

ನಗರದ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆ್ಯಂಟನಿ ಸಂಸ್ಥೆಯ ಗುತ್ತಿಗೆ ಅವಧಿ ಆರು ತಿಂಗಳಲ್ಲಿ ಮುಗಿಯಲಿದ್ದು, ಮುಂದೆ ಪಾರಂಪರಿಕ ತ್ಯಾಜ್ಯ ಸಂಸ್ಕರಣೆಗೆ ಟೆಂಡರ್ ಆಗಿದೆ. ಸರ್ಕಾರ ಅನುಮೋದನೆ ನೀಡುವ ಭರವಸೆ ಇದೆ ಎಂದರು.

2019ರ ಆಗಸ್ಟ್ 6ರಂದು ಸಂಭವಿ ಸಿದ ಪಚ್ಚನಾಡಿ ತ್ಯಾಜ್ಯ ದುರಂತಕ್ಕೆ ಸಂಬಂಧಿಸಿದ ಹೈಕೋರ್ಟ್‌ ಮಧ್ಯಂತರ ಆದೇಶದಂತೆ ₹14.8 ಕೋಟಿ ಪರಿಹಾರ ಬಿಡುಗಡೆಯಾಗಿದೆ. ರಿಟ್ ಬಗ್ಗೆ ಹೈಕೋರ್ಟ್ ನಿರ್ದೇಶನದಂತೆ ಸಾಷ್ಟು ಕ್ರಮ ಕೈಗೊಳ್ಳಲಾಗಿದೆ. 7 ಮೀಟರ್‌ ಎತ್ತರದ ತಡೆಗೋಡೆ ನಿರ್ಮಾಣ ಮಾಡ ಲಾಗಿದ್ದು, ಮುಂದಿನ ದಿನಗಳಲ್ಲಿ ತ್ಯಾಜ್ಯ ದುರಂತ ಸಂಭವಿಸದಂತೆ ಮುನ್ನೆಚ್ಚರಿಕೆ ಕೈಗೊಂಡಿದ್ದೇವೆ ಎಂದು ಹೇಳಿದರು.

ಮೂರು ತಿಂಗಳ ಹಿಂದೆ ಒಣ ಕಸ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ತಕ್ಷಣ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಘಟಕದ ಸುತ್ತಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು.

ಪ್ರಶ್ನೋತ್ತರ ವೇಳೆಯಲ್ಲಿ ತ್ಯಾಜ್ಯ ಸಮಸ್ಯೆಯನ್ನು ಪ್ರಸ್ತಾಪಿಸಿದ ಮಾಜಿ ಮೇಯರ್ ಭಾಸ್ಕರ ಕೆ., ‘2018ರಲ್ಲಿ ನಗರಕ್ಕೆ ಸ್ವಚ್ಛತೆಯಲ್ಲಿ 1ನೇ ಸ್ಥಾನ ದೊರಕಿತ್ತು. ಆದರೆ ಒಣಕಸ ಹಾಗೂ ಹಸಿ ಕಸ ವಿಂಗಡಣೆಯ ಬಳಿಕ ತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಆ್ಯಂಟನಿ ಸಂಸ್ಥೆಯಿಂದ ಸಮಸ್ಯೆಯಾಗುತ್ತಿದೆ. ಸಮರ್ಪಕವಾಗಿ ಕಸವನ್ನು ವಿಲೇವಾರಿ ಮಾಡಲಾಗುತ್ತಿಲ್ಲ ಎಂದು ದೂರಿದರು.

ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಕಸ ವಿಲೇವಾರಿಗೆ ಸಂಬಂಧಿಸಿದಂತೆ ಮನೆಗಳಿಂದ ಮೂಲ ದಿಂದಲೇ ತ್ಯಾಜ್ಯ ವಿಂಗಡಣೆಯಲ್ಲಿ ಶೇ 70ರಷ್ಟು ಯಶಸ್ಸು ಸಾಧಿಸಲಾಗಿದೆ. ಹಾಗಾಗಿ ತ್ಯಾಜ್ಯ ಸಂಸ್ಕರಣೆಯಲ್ಲಿ ಮಂಗಳೂರು ಪಾಲಿಕೆ ಮತ್ತೆ 1ನೇ ಸ್ಥಾನಕ್ಕೆ ಏರುವುದರಲ್ಲಿ ಸಂಶಯವಿಲ್ಲ ಎಂದರು.

ಪ್ರತಿಪಕ್ಷದ ಸದಸ್ಯ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, 2012-13ನೇ ಸಾಲಿನಲ್ಲಿದ್ದ ಮಂಗಳೂರು ಕಸದ ಸಮಸ್ಯೆ, ಮತ್ತೆ 2022ರಲ್ಲಿ ಮರುಕಳಿಸುವಂತಾಗಿದೆ. ರಸ್ತೆ ಬದಿಗಳಲ್ಲಿ ಕಸ ರಾಶಿ ಹಾಕುವುದು ಕಂಡು ಬರುತ್ತಿದೆ. ಕಸ ವಿಂಗಡಣೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಆದರೆ ಒಣ ಕಸ ವಾರಕ್ಕೊಮ್ಮೆಯೂ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಡಳಿತ ಪಕ್ಷದ ಕೆಲ ಸದಸ್ಯರು, ತಮ್ಮ ವಾರ್ಡ್‌ನಲ್ಲಿ ಕಸ ಸಮರ್ಪಕವಾಗಿ ವಿಲೇವಾಗಿ ಆಗುತ್ತಿರುವುದಾಗಿ ಹೇಳಿದರು. ‘ನಿಮಗೆ ಪ್ರಭಾವ ಇರಬೇಕು. ನಮಗೆ ಅದು ಸಿಗುತ್ತಿಲ್ಲ’ ಎಂದು ಪ್ರತಿಪಕ್ಷದ ಸದಸ್ಯರು ಆಕ್ಷೇಪಿಸಿದರು. ಇದರಿಂದಾಗಿ ಕೆಲ ಹೊತ್ತು ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು.

ಸಭೆಯಲ್ಲಿ ಉಪ ಮೇಯರ್ ಸುಮಂಗಲಾ ರಾವ್‌, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಕೇಶ್ ಬೊಳ್ಳಾಜೆ, ಸಂದೀಪ್, ಶೋಭಾ ರಾಜೇಶ್, ಲೀಲಾವತಿ, ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

ತುಳು ಭಾಷೆಗೆ ಸ್ಥಾನಮಾನ; ಪ್ರಸ್ತಾವ

ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂಬುದು ದಶಕದ ಆಗ್ರಹ. ಆದರೆ ಈ ಹೋರಾಟಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಈಗಾಗಲೇ ಟ್ವಿಟ್ಟರ್ ಅಭಿಯಾನ ನಡೆದಿದೆ. ವಿಧಾನಸೌಧದಲ್ಲಿ ಜನಪ್ರತಿನಿಧಿಗಳು ಧ್ವನಿ ಎತ್ತಿದ್ದಾರೆ. ಆದರೆ ಈವರೆಗೆ ಯಾವುದೇ ಪ್ರಯೋಜನ ಆಗಿಲ್ಲ. ಈ ನಿಟ್ಟಿನಲ್ಲಿ ಪಾಲಿಕೆಯಿಂದ ಒತ್ತಾಯ ಮಾಡಬೇಕೆಂದು ಸದಸ್ಯ ವರುಣ್ ಚೌಟ ಮನವಿ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್, ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು