ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಬದಲು ಕೋಶ: ಆಕ್ಷೇಪ

Last Updated 31 ಅಕ್ಟೋಬರ್ 2022, 14:30 IST
ಅಕ್ಷರ ಗಾತ್ರ

ಮಂಗಳೂರು: ‘ಬಿಲ್ಲವ, ಈಡಿಗ ಸೇರಿದಂತೆ 26 ಪಂಗಡಗಳಿರುವ ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪಿಸುವ ಬದಲು ರಾಜ್ಯ ಸರ್ಕಾರ ‘ಬ್ರಹ್ಮಶ್ರೀ ನಾರಾಯಣಗುರು ಕೋಶ’ ಘೋಷಿಸಿರುವುದು ದಿಕ್ಕುತಪ್ಪಿಸುವ ಹುನ್ನಾರ. ಇದೊಂದು ತೀರ ಹಿಂದುಳಿದ ಸಮಾಜದವರ ಮೂಗಿಗೆ ತುಪ್ಪ ಸವರುವಂತಹ ಆದೇಶ’ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ವಕೀಲ ಪದ್ಮರಾಜ್ ಆರ್. ದೂರಿದ್ದಾರೆ.

‘ರಾಜ್ಯಾದ್ಯಂತ ಸುಮಾರು 70 ಲಕ್ಷ ಜನಸಂಖ್ಯೆ ಹೊಂದಿರುವ, ಆರ್ಥಿಕವಾಗಿ ತೀರ ಹಿಂದುಳಿದಿರುವ ಈ ಸಮುದಾಯಕ್ಕೆ ಬ್ರಹ್ಮಶ್ರೀ ನಾರಾಯಣಗುರು ನಿಗಮ ಸ್ಥಾಪಿಸಬೇಕು ಎಂಬ ಹಲವಾರು ವರ್ಷಗಳ ಬೇಡಿಕೆ ಇದ್ದರೂ ಸರ್ಕಾರ ತಾತ್ಸಾರ ಭಾವನೆ ತೋರಿಸುತ್ತಿರುವುದು ಖೇದಕರ’ ಎಂದು ಅವರು ಹೇಳಿದ್ದಾರೆ.

‘ಬ್ರಹ್ಮಶ್ರೀ ನಾರಾಯಣಗುರು ಕೋಶವನ್ನು ಘೋಷಣೆ ಮಾಡಿರುವ ಸರ್ಕಾರ, ಅಧೀನದ ಅಧಿಕಾರಿಗಳು, ಸಚಿವರಿಗೆ ನಿಗಮ ಮತ್ತು ಕೋಶಕ್ಕಿರುವ ವ್ಯತ್ಯಾಸಗಳ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲವೇ? ನಿಗಮ ಎನ್ನುವುದು ಒಂದು ಸ್ವಾಯತ್ತ ಸಂಸ್ಥೆ. ಇದರಲ್ಲಿ ಪ್ರತ್ಯೇಕ, ಅಧ್ಯಕ್ಷ, ನಿರ್ದೇಶಕರಿದ್ದು, ಸಮುದಾಯಯ ಅಭಿವೃದ್ಧಿಗೆ ಬೇಕಾದ ಯೋಜನೆ ರೂಪಿಸಲು ಇವರಿಗೆ ಸ್ವಾತಂತ್ರ್ಯ ಇದೆ. ಆದರೆ ‘ಕೋಶ’ ಎನ್ನುವುದು ಸರ್ಕಾರದ ನಿರ್ದೇಶನಾಲಯದ ಚಿಕ್ಕ ಅಂಗವಾಗಿದ್ದು, ಇದೊಂದು ಹಲ್ಲಿಲ್ಲದ ಹಾವಿನಂತೆ. ಇಲ್ಲಿ ಉನ್ನತ ಅಧಿಕಾರಿಯನ್ನು ನೇಮಿಸಿದರೂ ಸರ್ಕಾರದ ಕಾರ್ಯದರ್ಶಿಯ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ ಮತ್ತು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಇವರಿಗೆ ಅಧಿಕಾರ ಇರುವುದಿಲ್ಲ‘ ಎಂದು ಅವರು ಹೇಳಿದ್ದಾರೆ.

‘ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶೇಂದಿ ಇಳಿಸುವವರಿಗಾಗಿ ವಿಶೇಷ ಪ್ಯಾಕೇಜ್ ನೀಡಿದ್ದು, ಅದಕ್ಕೆ ₹12 ಕೋಟಿ ಮೀಸಲಿರಿಸಿತ್ತು. ಇದರಲ್ಲಿ ₹3 ಕೋಟಿ ಮಾತ್ರ ವ್ಯಯವಾಗಿದ್ದು, ಉಳಿದ ಹಣ ಈಗಲೂ ಸರ್ಕಾರದ ಬೊಕ್ಕಸದಲ್ಲಿದೆ. ಇದೇ ರೀತಿ ಈ ಕೋಶಕ್ಕೆ ₹10ರಿಂದ ₹15 ಕೋಟಿ ಅನುದಾನ ಘೋಷಿಸಿ, ವಿವಿಧ ಕಾರಣ ಹೇಳಿ ಹಾಗೆಯೇ ಉಳಿಸುವ ತಂತ್ರಗಾರಿಕೆಯೇ ಹೊರತು ಬೇರೇನೂ ಇಲ್ಲ. ನಿಗಮದಿಂದ ಆಗುವ ಅಭಿವೃದ್ಧಿಯ ಶೇ 2ರಷ್ಟೂ ಈ ಕೋಶದಿಂದ ಆಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT