ಪಡುಬಿದ್ರಿ ಹೆದ್ದಾರಿಯಲ್ಲಿ ನೆರೆ: ಸಂಚಾರ ಅಸ್ತವ್ಯಸ್ತ

7

ಪಡುಬಿದ್ರಿ ಹೆದ್ದಾರಿಯಲ್ಲಿ ನೆರೆ: ಸಂಚಾರ ಅಸ್ತವ್ಯಸ್ತ

Published:
Updated:
ಪಡುಬಿದ್ರಿಯ ಎರ್ಮಾಳುವಿನಲ್ಲಿ ಕಲ್ಸಂಕದಲ್ಲಿ ನೆರೆ ಉಂಟಾಗಿದ್ದು, ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. (ಪಡುಬಿದ್ರಿ ಚಿತ್ರ)

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳು ಕಲ್ಸಂಕದಲ್ಲಿ ಜೋರಾಗಿ ಸುರಿಯುತ್ತಿರುವ ಮಳೆಯಿಂದ ಕೃತಕ ನೆರೆ ಉಂಟಾಗಿದ್ದು, ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಮಳೆಯಿಂದ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಕಲ್ಸಂಕ ಬಳಿ ತಗ್ಗು ಪ್ರದೇಶದಲ್ಲಿ ನೆರೆ ನೀರು ಹೆದ್ದಾರಿಯಲ್ಲಿ ಹರಿಯುತ್ತಿದೆ. ಇದರಿಂದ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಬೆಳಿಗ್ಗೆಯಿಂದಲೇ ನೆರೆ ನೀರು ತುಂಬಿ ಹರಿಯುತಿದ್ದು, ಮಧ್ಯಾಹ್ನದ ವೇಳೆಗೆ ಹೆದ್ದಾರಿಯಲ್ಲಿ ನೆರೆ ನೀರು ಹೆಚ್ಚಾಗಿರುವುದರಿಂದ ನಿಧಾನ ಗತಿಯಲ್ಲಿ ವಾಹನಗಳನ್ನು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಪೊಲೀಸರು, ಸ್ಥಳೀಯರು ಹಾಗೂ ನವಯುಗ ಕಂಪನಿ ಸಿಬ್ಬಂದಿಗಳು ವಾಹನ ಸಂಚಾರಕ್ಕೆ ಸಹಕಾರ ನೀಡುತಿದ್ದರು. ನಿಧಾನ ಗತಿಯ ಸಂಚಾರದಿಂದ ಎರಡು ಕಿ.ಮೀ ದೂರದಷ್ಟು ವಾಹನಗಳು ನಿಂತಿರುವುದರಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ದೂರದ ಊರುಗಳಿಗೆ ತೆರಳುವವರು ಸಮಸ್ಯೆ ಅನುಭವಿಸಿದರು. ಬಳಿಕ ಬುಲೆಟ್ ಟ್ಯಾಂಕರ್‌ಗಳನ್ನು ಕಾರ್ಕಳ ರಸ್ತೆ ಬದಿಯಲ್ಲಿ ನಿಲ್ಲಿಸಲಾಯಿತು.

ಏಕಮುಖ ಸಂಚಾರ: ಉಡುಪಿಯಿಂದ ಮಂಗಳೂರಿಗೆ ತೆರಳುವ ವಾಹನಗಳನ್ನು ನೇರವಾಗಿ ಪಡುಬಿದ್ರಿ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುವ ವಾಹನಗಳನ್ನು ಪಡುಬಿದ್ರಿ, ಕಾರ್ಕಳ ರಸ್ತೆ, ಮುದರಂಗಡಿ, ಶಿರ್ವ, ಕಟಪಾಡಿ ಹಾಗೂ ಕಾಪು, ಉಚ್ಚಿಲ ಮೂಲಕ ಸುತ್ತು ಬಳಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು.

ಅದಮಾರು: ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಅದಮಾರು ರಸ್ತೆಯಲ್ಲಿ ನೆರೆ ನೀರಿನಿಂದ ಸಂಪೂರ್ಣ ಮುಳುಗಡೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಮುದರಂಗಡಿಯಿಂದ ಎಲ್ಲೂರಿಗೆ ಸಂಪರ್ಕಿಸುವ ರಸ್ತೆ ಇದಾಗಿದೆ. ಪಕ್ಕದಲ್ಲಿ ಕಿರು ಸೇತು ಇದ್ದು, ಇದನ್ನು ಹೂಳೆತ್ತದೆ ಇರುವುದರಿಂದ ರಸ್ತೆ ಮುಳುಗಡೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅವರಾಲು: ಅವರಾಲು ಪ್ರದೇಶದಲ್ಲಿ ಹೆಜಮಾಢಿ ಸಂಪರ್ಕ ಕಲ್ಪಿಸಲು ಶಾಂಭವಿ ನದಿ ಬದಿ ನಿರ್ಮಿಸಿದ ರಸ್ತೆ ಜಲಾವೃತವಾಗಿದೆ. ಶಾಂಭವಿ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !