ಪಾಠ ಕಲಿಸಿದ 2010 ರ ವಿಮಾನ ದುರಂತ: ಸೆಂಥಿಲ್‌

ಸೋಮವಾರ, ಜೂನ್ 17, 2019
28 °C
ಮಂಗಳೂರು ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ

ಪಾಠ ಕಲಿಸಿದ 2010 ರ ವಿಮಾನ ದುರಂತ: ಸೆಂಥಿಲ್‌

Published:
Updated:
Prajavani

ಮಂಗಳೂರು: ಕೆಂಜಾರು ವಿಮಾನ ನಿಲ್ದಾಣದಲ್ಲಿ 2010 ರಲ್ಲಿ ಸಂಭವಿಸಿದ ವಿಮಾನ ದುರಂತ ದೊಡ್ಡ ಪಾಠ ಕಲಿಸಿದೆ. ಯಾವುದೇ ಸಂದರ್ಭವನ್ನು ಎದುರಿಸಲು ಸಜ್ಜಾಗಿರಬೇಕು ಎನ್ನುವ ಎಚ್ಚರಿಕೆ ನೀಡಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಹೇಳಿದರು.

ಕೂಳೂರಿನಿಂದ ತಣ್ಣೀರಬಾವಿಗೆ ಹೋಗುವ ರಸ್ತೆಯಲ್ಲಿ ನಿರ್ಮಿಸಲಾಗಿರುವ ವಿಮಾನ ದುರಂತದಲ್ಲಿ ಮಡಿದವರ ಸ್ಮಾರಕದಲ್ಲಿ ಬುಧವಾರ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.

2010 ರಲ್ಲಿ ನಡೆದ ದುರಂತ ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ದುರದೃಷ್ಟಕರ. ವಿಮಾನ ದುರಂತದ 9 ನೇ ವರ್ಷಾಚರಣೆಯ ಸಂದರ್ಭದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮಡಿದವರ ಕುಟುಂಬದವರಿಗೆ ಇರುವರೆಗೆ ಸರಿಯಾದ ಪರಿಹಾರ ಸಿಕ್ಕಿಲ್ಲ. ಸಂಬಂಧಿಸಿದ ಇಲಾಖೆಗಳು ತ್ವರಿತಗತಿಯಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಸಂಬಂಧಿಕರಿಗೆ ಪೂರ್ಣ ಪ್ರಮಾಣದ ಪರಿಹಾರ ಒದಗಿಸಬೇಕು ಎಂದರು.

ಅಂದು ನಡೆದ ದುರಂತದಲ್ಲಿ ಮಂಗಳೂರಿನ ಜನರು ಸ್ಪಂದಿಸಿದ ರೀತಿ ಮೆಚ್ಚುವಂಥದ್ದು. ಅಗ್ನಿಶಾಮಕ ದಳ, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಮಡಿದವರ ಕುಟುಂಬಕ್ಕೆ ಜಿಲ್ಲಾಡಳಿತದ ಪರವಾಗಿ ಸಾಂತ್ವನ ಹೇಳುತ್ತೇನೆ ಎಂದರು.

ಮಂಗಳೂರು ವಿಮಾನ ದುರಂತದಲ್ಲಿ ಮಡಿದವರ ಕುಟುಂಬಗಳ ಸಂಘದ ಅಧ್ಯಕ್ಷ ವೈ. ಮೊಹಮ್ಮದ್ ಬ್ಯಾರಿ ಮಾತನಾಡಿ, ವಿಮಾನಯಾನ ಇಲಾಖೆಯಿಂದ ಪರಿಹಾರ ಧನ ಒದಗಿಸುವಲ್ಲಿ ಸಮರ್ಪಕ ಕಾರ್ಯ ನಿರ್ವಹಿಸಿದ್ದರೂ, ದುರಂತದಲ್ಲಿ ಮಡಿದ ಮಹಿಳೆಯರು, ಮಕ್ಕಳಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದರು.

ವಿಮಾನ ದುರಂತದ ನಂತರ ಮಡಿದವರ ಕುಟುಂಬದವರು ಸಂಘವನ್ನು ಸ್ಥಾಪಿಸಿದ್ದು, ಸಂಘದ ಮೂಲಕ ಹಲವಾರು ಕುಟುಂಬಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆ. ಜತೆಗೆ ಕನಿಷ್ಠ ಪರಿಹಾರ ಧನ ₹90 ಲಕ್ಷ ನೀಡಲು ಸೂಚಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ ಎಂದು ತಿಳಿಸಿದರು.

ಕೇವಲ ಪರಿಹಾರ ಧನ ಒದಗಿಸುವುದು ಮಾತ್ರ ಸಂಘದ ಉದ್ದೇಶವಲ್ಲ. ಜತೆಗೆ ಮಡಿದವರ ಕುಟುಂಬಗಳ ಹಕ್ಕುಗಳ ರಕ್ಷಣೆ ಮಾಡುವುದಾಗಿದೆ. ಕುಟುಂಬದವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು. ಪ್ರಕರಣವು ಈಗಲೂ ಸುಪ್ರೀಂ ಕೋರ್ಟ್‌ನಲ್ಲಿದ್ದು, ಜೂನ್‌ನಲ್ಲಿ ವಿಚಾರಣೆ ನಡೆಯಲಿದೆ. ಎಲ್ಲರೂ ಒಟ್ಟಾಗಿ ಹೋರಾಟ ಮಾಡಿದಲ್ಲಿ, ಇದೊಂದು ಮಾದರಿ ತೀರ್ಪು ಆಗಲಿದೆ. ಮೃತರ ಕುಟುಂಬದವರಿಗೆ ಗುಣಮಟ್ಟದ ಜೀವನ ದೊರೆಯಲಿದೆ ಎಂದು ಆಶಿಸಿದರು.

ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಜಂಟಿ ನಿರ್ದೇಶಕ ಕೋಶಿ ಅಬ್ರಾಹಂ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಸೆಲ್ವಮಣಿ ಆರ್‌., ಡಿಸಿಪಿ ಹನುಮಂತ್ರಾಯ, ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್‌ ಡಾ.ಮುರಲೀ ಮೋಹನ ಚೂಂತಾರು, ವಿಮಾನ ನಿಲ್ದಾಣದ ಜಂಟಿ ಪ್ರಧಾನ ವ್ಯವಸ್ಥಾಪಕ ರಾಜೀವ್ ಗುಪ್ತ, ಉಪ ಪ್ರಧಾನ ವ್ಯವಸ್ಥಾಪಕ ವಿಶ್ವನಾಥನ್‌, ಹಣಕಾಸು ವಿಭಾಗದ ಹಿರಿಯ ವ್ಯವಸ್ಥಾಪಕ ಎಲ್‌.ಕೆ. ಸಿಂಗ್‌, ವೈದ್ಯಾಧಿಕಾರಿ ಡಾ.ವಿಕ್ರಂ ರಾವ್‌, ಮಹಾನಗರ ಪಾಲಿಕೆ ಪ್ರಭಾರ ಆಯುಕ್ತ ಬಿ.ಎಚ್‌. ನಾರಾಯಣಪ್ಪ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !