ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಮೇಲಿನ ವಿಶ್ವಾಸ ಬಲವಾಗಲಿ: ಬಿಷಪ್‌

ಮನೆಯಲ್ಲಿಯೇ ‘ಗರಿಗಳ ಭಾನುವಾರ’ ಆಚರಿಸಿದ ಕ್ರೈಸ್ತರು
Last Updated 5 ಏಪ್ರಿಲ್ 2020, 15:22 IST
ಅಕ್ಷರ ಗಾತ್ರ

ಮಂಗಳೂರು: ಸರ್ಕಾರ ಲಾಕ್‌ಡೌನ್ ಘೋಷಿಸಿರುವುದರಿಂದ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಬಲಿ ಪೂಜೆಗಳನ್ನು ಇದೇ 14 ರವರೆಗೆ ತಾತ್ಕಾಲಿಕವಾಗಿ ರದ್ದುಪಡಿಸಿದ್ದು, ‘ಗರಿಗಳ ಭಾನುವಾರ’ (ಪಾಮ್‌ ಸಂಡೇ)ವನ್ನು ಕ್ರೆಸ್ತರು ಭಾನುವಾರ ತಮ್ಮ ಮನೆಗಳಲ್ಲೇ ಆಚರಿಸಿದರು.

ಮಂಗಳೂರು ಧರ್ಮಪ್ರಾಂತದ ಬಿಷಪ್ ರೆ.ಡಾ.ಪೀಟರ್ ಪಾವ್ಲ್ ಸಲ್ಡಾನ ಅವರು ರೋಜಾರಿಯೊ ಕೆಥಡ್ರಲ್‌ನಲ್ಲಿ ಬಲಿಪೂಜೆಯನ್ನು ಅರ್ಪಿಸಿದರು. ಖಾಸಗಿ ವಾಹಿನಿ ಹಾಗೂ ಯೂಟ್ಯೂಬ್ ಮೂಲಕ ನೇರ ಪ್ರಸಾರ ಮಾಡಲಾಗಿತ್ತು. ಮನೆಗಳಲ್ಲಿಯೇ ಇದ್ದ ಕ್ರೈಸ್ತರು ಆನ್‌ಲೈನ್‌ನಲ್ಲಿಯೇ ವೀಕ್ಷಿಸಿದರು. ಕೆಥಡ್ರಲ್‌ನ ರೆಕ್ಟರ್ ಫಾ. ಜೆ.ಬಿ. ಕ್ರಾಸ್ತಾ ಮತ್ತು ಸಹಾಯಕ ಗುರು ಫಾ.ಫ್ಲೇವಿಯನ್ ಲೋಬೊ ಇದ್ದರು.

ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ ಮಾತನಾಡಿ, ಮಾರಕ ರೋಗ ಕೊರೊನಾ ಜಗತ್ತಿನಾದ್ಯಂತ ಹರಡುತ್ತಿರುವ ಸಂದರ್ಭದಲ್ಲಿ ಜನರು ಸಂಕಷ್ಟಗಳಿಗೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಯಾರೂ ಸಹನೆ ಕಳೆದುಕೊಳ್ಳಬಾರದು. ದೇವರ ಮೇಲಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಬೇಕು. ಯೇಸು ಕ್ರಿಸ್ತರ ಬದುಕು ಈ ದಿಸೆಯಲ್ಲಿ ಪ್ರೇರಣೆಯಾಗಿದೆ ಎಂದು ಹೇಳಿದರು.

ಕೊರೊನಾ ರೋಗಿಗಳು ಬೇಗನೆ ಗುಣಮುಖರಾಗುವಂತೆ ಹಾಗೂ ರೋಗಿಗಳ ಆರೈಕೆಯಲ್ಲಿ ತೊಡಗಿರುವ ವೈದ್ಯರು, ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಬೇಕು ಎಂದ ಅವರು, ಈ ಕಾಯಿಲೆಗೆ ಔಷಧ ಕಂಡು ಹಿಡಿಯುವ ವಿಜ್ಞಾನಿಗಳ ಪ್ರಯತ್ನ ಆದಷ್ಟು ಶೀಘ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

ಆರಂಭದಲ್ಲಿ ಕೆಥಡ್ರಲ್‌ನ ಮುಖ್ಯದ್ವಾರದ ಬಳಿ ತೆಂಗಿನ ಗರಿಗಳನ್ನು ಬಿಷಪ್ ಆಶೀರ್ವದಿಸಿದರು. ಬಳಿಕ ಗರಿಗಳನ್ನು ಹಿಡಿದು ಕೆಥಡ್ರಲ್‌ ಒಳಗೆ ಪ್ರವೇಶಿಸಿದರು. ಬಲಿ ಪೂಜೆಯ ವೇದಿಕೆಯಲ್ಲಿ ಬಿಷಪ್ ಮತ್ತು ಜತೆಗಿದ್ದ ಇಬ್ಬರು ಗುರುಗಳು ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್‌ನ ವಾಚನ ನೆರವೇರಿಸಿದರು. ಫಾ. ಫ್ಲೇವಿಯನ್ ಲೋಬೊ ಪ್ರವಚನ ನೀಡಿದರು.

ಯೇಸು ಕ್ರಿಸ್ತರು ಶುಕ್ರವಾರ ದಿನ ಶಿಲುಬೆಯಲ್ಲಿ ಮರಣವನ್ನಪ್ಪುವ ಮುಂಚಿನ ಭಾನುವಾರದಂದು ಜೆರುಸಲೆಮ್‌ಗೆ ಪ್ರವೇಶಿಸುವಾಗ ಆಲ್ಲಿನ ಜನರು ಒಲಿವ್ ಮರದ ಗರಿಗಳನ್ನು ಹಿಡಿದು ವೈಭವಯುತವಾಗಿ ಸ್ವಾಗತಿಸಿದ ಘಟನೆಯ ಸಂಕೇತವಾಗಿ ಗರಿಗಳ ಭಾನುವಾರವನ್ನು ಆಚರಿಸಲಾಗುತ್ತಿದೆ. ಇಲ್ಲಿ ತೆಂಗಿನ ಗರಿಗಳನ್ನು ಹಿಡಿದು ಪ್ರಾರ್ಥನೆ ನಡೆಸಲಾಗುತ್ತಿದೆ. ಗರಿಗಳ ಭಾನುವಾರದಿಂದ ಪವಿತ್ರ ಸಪ್ತಾಹ ಆರಂಭವಾಗುತ್ತದೆ.

ಗುರುವಾರ ಯೇಸು ಕ್ರಿಸ್ತರ ಕೊನೆಯ ಭೋಜನದ ದಿನ. ಶುಭ ಶುಕ್ರವಾರ ಏಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನ. ಶನಿವಾರ ರಾತ್ರಿ ಈಸ್ಟರ್ ಹಬ್ಬದ ಜಾಗರಣೆ ಹಾಗೂ ಭಾನುವಾರ ಯೇಸು ಕ್ರಿಸ್ತರ ಪುನರುತ್ಥಾನದ ದಿನದ ಹಬ್ಬವನ್ನು ಆಚರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT