ಬುಧವಾರ, ಮೇ 25, 2022
29 °C
ಪೂಜಾರಿ, ಭಂಡಾರಿಗೆ ಮತದಾರರ ಮನ್ನಣೆ

ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರ: ಪಕ್ಷ ನಿಷ್ಠೆ, ಸಜ್ಜನ ರಾಜಕಾರಣಕ್ಕೆ ಸಂದ ಜಯ

ಪ್ರಜಾವಾಣಿ‌ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ವಿಧಾನ ಪರಿಷತ್ ಚುನಾವಣೆಯ ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ತಲಾ‌ ಒಂದು‌ ಸ್ಥಾನವನ್ನು ಪಡೆದಿವೆ. ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ನಾಲ್ಕನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದರೆ, ಕಾಂಗ್ರೆಸ್‌ನ ಮಂಜುನಾಥ ಭಂಡಾರಿಗೆ ಇದು ಚೊಚ್ಚಲ‌ ಗೆಲುವು.

ಉಭಯ ನಾಯಕರ ಪಕ್ಷ‌ ನಿಷ್ಠೆ ಹಾಗೂ ಸಜ್ಜನ ರಾಜಕಾರಣಕ್ಕೆ ಮತದಾರರು ಮನ್ನಣೆ ನೀಡಿದ್ದಾರೆ. ಇಬ್ಬರೂ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಪಳಗಿದವರೇ ಎನ್ನುವುದು ವಿಶೇಷ. ಎಸ್‌ಡಿಪಿಐ ಅಭ್ಯರ್ಥಿಯ ಸ್ಪರ್ಧೆಯಿಂದ ಅನಿವಾರ್ಯವಾದ ಚುನಾವಣೆಯಲ್ಲಿ ಬಿಜೆಪಿ ಮೊದಲಿನಿಂದಲೂ ಗೆಲುವಿನ ವಿಶ್ವಾಸದಲ್ಲಿತ್ತು.‌ ಕಾಂಗ್ರೆಸ್‌ಗೆ 300ರಷ್ಟು ಮತಗಳ ಕೊರತೆ ಇದ್ದರೂ, ಪ್ರಥಮ ಪ್ರಾಶಸ್ತ್ಯದಲ್ಲೇ ಜಯಗಳಿಸುವಲ್ಲಿ ಯಶಸ್ವಿಯಾಗಿದೆ.

ಅನಿರೀಕ್ಷಿತವಾಗಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಪ್ರವೇಶಿಸಿದ ಕೋಟ ಶ್ರೀನಿವಾಸ ಪೂಜಾರಿ, ತಮ್ಮನ್ನು ಗೆಲ್ಲಿಸಿದ‌ ಮತದಾರರ ಪರವಾಗಿಯೇ ಕೆಲಸ‌ ಮಾಡುತ್ತ ಬಂದಿದ್ದಾರೆ. ಪಂಚಾಯಿತಿ‌ ಸದಸ್ಯರ ಗೌರವಧನ ಹೆಚ್ಚಳ, ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ಸಿಗಬೇಕು ಎನ್ನುವ ಪ್ರತಿಪಾದನೆಯನ್ನು ಸದನದ ಒಳಗೂ, ಹೊರಗೂ ಮಾಡುತ್ತಲೇ ಬಂದಿದ್ದಾರೆ. ಮತದಾರರು ಕೋಟ‌ ಅವರ ಕಾರ್ಯವೈಖರಿಗೆ ಬೆಂಬಲ‌ ನೀಡುತ್ತಲೇ ಬಂದಿದ್ದಾರೆ. ಮೂರು ಚುನಾವಣೆಗಳಲ್ಲಿ ಪ್ರಥಮ ಪ್ರಾಶಸ್ತ್ಯದಲ್ಲಿಯೇ ಅವರು ಜಯಗಳಿಸುತ್ತಿರುವುದು ಇದಕ್ಕೆ ಸಾಕ್ಷಿ.

ಮೊದಲ ಬಾರಿ ಅಧಿಕಾರ: ಮಂಜುನಾಥ ಭಂಡಾರಿ ಅವರು ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಮೂಲಕ ಕರಾವಳಿಯಲ್ಲಿ ಉನ್ನತ ಶಿಕ್ಷಣವನ್ನು ಒದಗಿಸುವ‌ ಕೆಲಸ ಮಾಡುತ್ತಿದ್ದಾರೆ. ಬಿ.ಇ ಪದವೀಧರರಾಗಿದ್ದು, ಎಂ.ಎ, ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿ‌ ಪಡೆದವರು. ಅದರಲ್ಲೂ ವಿಶೇಷವಾಗಿ ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತು ಪ್ರಬಂಧ ಮಂಡಿಸಿ‌ ಪಿಎಚ್.ಡಿ ಪಡೆದಿದ್ದಾರೆ.

ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ ಈ ಬಾರಿ ಸ್ಪರ್ಧಿಸಲು ನಿರಾಕರಿಸಿದ್ದರಿಂದ ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿಯನ್ನು ಹುಡುಕುವುದೇ ಹರಸಾಹಸವಾಗಿತ್ತು. ಒಂದು ಹಂತದಲ್ಲಿ‌ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿದ್ದ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರಕುಮಾರ್ ಅವರನ್ನು ಸೆಳೆಯಲು ಕಾಂಗ್ರೆಸ್ಸಿಗರು ‌ಪ್ರಯತ್ನಿಸಿದ್ದರು. ಕೊನೆಯ ಗಳಿಗೆಯಲ್ಲಿ ರಾಜೇಂದ್ರಕುಮಾರ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದು ಕಾಂಗ್ರೆಸ್ ಮುಖಂಡರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿತ್ತು.

ಆಗ ನೆನಪಿಗೆ ಬಂದವರು‌ ಮಂಜುನಾಥ ಭಂಡಾರಿ. ಕ್ಷೇತ್ರದಲ್ಲಿ‌ ಕಾಂಗ್ರೆಸ್‌ಗೆ ಅಗತ್ಯ ಮತಗಳ‌ ಕೊರತೆ ಇತ್ತು. ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿ‌ ಜಯಗಳಿಸುವುದು ಅಸಾಧ್ಯ ಎನ್ನುವುದು ಬಹುತೇಕರ ಅಭಿಪ್ರಾಯವೂ‌ ಆಗಿತ್ತು. ಮಂಜುನಾಥ ಭಂಡಾರಿ ಬಿಟ್ಟು ಬೇರೆ ಯಾರಾದರೂ‌ ಕಣಕ್ಕೆ ಇಳಿದಿದ್ದರೆ, ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆವರೆಗೆ ಕಾಂಗ್ರೆಸ್ ಕಾಯಬೇಕಿತ್ತು.

ಆದರೆ, ಭಂಡಾರಿ‌ ಅವರಿಗೆ ಟಿಕೆಟ್ ನೀಡುವ ಮೂಲಕ ಇದ್ದ ಆತಂಕ ನಿವಾರಣೆಯಾಯಿತು. ಅದರ ಪರಿಣಾಮವಾಗಿಯೇ ಮಂಜುನಾಥ ಭಂಡಾರಿ ಕೂಡ 2,077 ಮತ ಪಡೆದು, ಮೊದಲ ಪ್ರಾಶಸ್ತ್ಯದಲ್ಲಿಯೇ ಜಯದ ನಗೆ ಬೀರಿದರು. ಎಸ್‌ಡಿಪಿಐ ಸ್ಪರ್ಧೆ ಎರಡೂ ಪಕ್ಷಗಳ ಅಭ್ಯರ್ಥಿಗಳ ಮತಗಳಿಗೆ ಯಾವುದೇ ರೀತಿಯಲ್ಲೂ ಬಾಧಿಸಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು