ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 29ರಂದು ಯಕ್ಷಧ್ರುವ ಪಟ್ಲ ಸಂಭ್ರಮ-2022

6 ವರ್ಷಗಳಲ್ಲಿ ₹7.5 ಕೋಟಿಯ ಸೇವಾ ಯೋಜನೆ ಅನುಷ್ಠಾನ: ಪಟ್ಲ ಸತೀಶ್‌ ಶೆಟ್ಟಿ
Last Updated 24 ಮೇ 2022, 12:18 IST
ಅಕ್ಷರ ಗಾತ್ರ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಆಶ್ರಯದಲ್ಲಿ ‘ಯಕ್ಷಧ್ರುವ ಪಟ್ಲ ಸಂಭ್ರಮ– 2022’ ಕಾರ್ಯಕ್ರಮವನ್ನು ಟ್ರಸ್ಟಿನ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕನ್ಯಾನ ಮಾರ್ಗದರ್ಶನದಲ್ಲಿ ಮತ್ತು ಶಶಿಧರ ಬಿ.ಶೆಟ್ಟಿ ಬರೋಡ ಅಧ್ಯಕ್ಷತೆಯಲ್ಲಿ ಮೇ 29ರಂದು ಬೆಳಿಗ್ಗೆ 8ರಿಂದ ರಾತ್ರಿ 12ರವರೆಗೆ ನಗರದ ಅಡ್ಯಾರ್ ಗಾರ್ಡನ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ ಸ್ಥಾಪಕಾಧ್ಯಕ್ಷ, ಭಾಗವತ ಸತೀಶ್ ಶೆಟ್ಟಿ ಪಟ್ಲ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘ಪುನೀತ್‌ರಾಜ್ ಕುಮಾರ್ ವೇದಿಕೆಯಲ್ಲಿ ಪಟ್ಲ ಸಂಭ್ರಮ‌ ಜರುಗಲಿದೆ. ಅಂದು ಬೆಳಿಗ್ಗೆ 8ಕ್ಕೆ ಚೌಕಿ‌ಪೂಜೆ, ಯಕ್ಷದಿಬ್ಬಣ, ಪೂರ್ವರಂಗ, ಅಬ್ಬರತಾಳ, ಚೆಂಡೆ ಜುಗುಲ್‌ಬಂದಿ- ಸ್ಪರ್ಧಾತ್ಮಕ ಪೀಠಿಕೆ ಸ್ತ್ರೀವೇಷ ವಿಶೇಷ ಗಮನ ಸೆಳೆಯಲಿದೆ’ ಎಂದು ಹೇಳಿದರು.

ಬೆಳಿಗ್ಗೆ 9.45ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದೆ. ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಮುಂಬೈ ಹೇರಂಬ ಕೆಮಿಕಲ್ ಇಂಡಸ್ಟ್ರೀಸ್‌ನ‌ ನಿರ್ದೇಶಕ ಸದಾಶಿವ ಶೆಟ್ಟಿ ಕನ್ಯಾನ ಶುಭಾಶಂಸನೆ ಮಾಡುವರು. ಉದ್ಯಮಿ ಶಶಿಧರ ಬಿ.ಶೆಟ್ಟಿ ಬರೋಡ ಅಧ್ಯಕ್ಷತೆ ವಹಿಸುವರು. ಪಟ್ಲ ಸಂಭ್ರಮವನ್ನು ಸಿ.ಎ. ದಿವಾಕರ ರಾವ್ ಉದ್ಘಾಟಿಸುವರು. ಆರೋಗ್ಯ ಶಿಬಿರಕ್ಕೆ ಡಾ.ಕೃಷ್ಣ ಪ್ರಸಾದ್ ಕೂಡ್ಲು ಚಾಲನೆ ನೀಡುವರು. ಡಾ.ಎಂ. ಮೋಹನ್ ಆಳ್ವ, ಡಾ.ಸುಧಾಕರ ಶೆಟ್ಟಿ, ಕೃಷ್ಣ ಜೆ. ಪಾಲೇಮಾರ್ ಸೇರಿದಂತೆ ಹಲವರು ಭಾಗವಹಿಸುವರು ಎಂದು ತಿಳಿಸಿದರು.

ಸಮಾರಂಭದಲ್ಲಿ ಶರತ್ ಶೆಟ್ಟಿ ಪಡುಪಳ್ಳಿ ರಚಿಸಿರುವ ‘ಯಕ್ಷಾಂಗಣ ಧ್ರುವತಾರೆ ಪಟ್ಲ’ ಕೃತಿ ಬಿಡುಗಡೆಗೊಳ್ಳಲಿದೆ. ‘ಧ್ರುವ ಪ್ರಭ’ ಎಂಬ ಟ್ರಸ್ಟ್‌ನ ಸೇವಾ ಯಾನದ ಮೆಲುಕು ಕೃತಿ ಬಿಡುಗಡೆಯಾಗಲಿದೆ. ಭಾರತೀಯ ಭೂ ಸೇನೆಯಲ್ಲಿ ಮೇಜರ್ ಆಗಿ ಪದೋನ್ನತಿ ಹೊಂದುತ್ತಿರುವ ಭರತ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ಕೆ.ಡಿ.ಶೆಟ್ಟಿ ದಂಪತಿ, ವಕ್ವಾಡಿ ಪ್ರವೀಣ್ ಶೆಟ್ಟಿ ದಂಪತಿ, ಕಡಂದಲೆ ಸುರೇಶ್ ಭಂಡಾರಿ ದಂಪತಿ, ಸವಣೂರು ಸೀತಾರಾಮ‌ ರೈ ದಂಪತಿಯನ್ನು ಗೌರವಿಸಲಾಗುವುದು ಎಂದರು.

ಸಮಾರೋಪ: ಸಂಜೆ 6ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಸಚಿವರಾದ ಆರಗ ಜ್ಞಾನೇಂದ್ರ, ಸುನಿಲ್‌ ಕುಮಾರ್, ಎಸ್‌.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ಕುಮಾರ್ ಕಟೀಲ್‌ ಭಾಗವಹಿಸುವರು ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಯಕ್ಷಗಾನ ವೈಭವ- ಸಪ್ತಸ್ವರ,
ಮಧ್ಯಾಹ್ನ 2ರಿಂದ ತಾಳಮದ್ದಲೆ, ಸಂಜೆ 4ರಿಂದ ಮಹಿಳಾ ಯಕ್ಷಗಾನ ‘ಮುರಾಸುರ ವಧೆ’, ಸಂಜೆ 5.15ರಿಂದ ಸನಾತನ ನೃತ್ಯಾಂಜಲಿ, ರಾತ್ರಿ 8ರಿಂದ ತೆಂಕು ಬಡಗುತಿಟ್ಟಿನ‌ ಕಲಾವಿದರಿಂದ ಪ್ರಚಂಡ ಕೂಡಾಟ, ರಾತ್ರಿ 10ಕ್ಕೆ ‘ಶಿವದೂತ ಗುಳಿಗೆ’ 275ನೇ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಪಟ್ಲ ಸಂಭ್ರಮದಲ್ಲಿ ಭಾಗವಹಿಸುವ ವೃತ್ತಿಪರ ಕಲಾವಿದರು, ಹವ್ಯಾಸಿ ಕಲಾವಿದರು, ಮಹಿಳಾ ಕಲಾವಿದರು ಹಾಗೂ ವಿಶೇಷವಾಗಿ ಪ್ರೇಕ್ಷಕರಿಗೂ ಬಂಗಾರದ ಪದಕ ಬಹುಮಾನ ಗೆಲ್ಲುವ ಅವಕಾಶ ಇದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರೊಳಗೆ ಹೆಸರು ನೋಂದಾಯಿಸಬೇಕು ಎಂದರು.

ಗೋಷ್ಠಿಯಲ್ಲಿ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಉಪಾಧ್ಯಕ್ಷ ಡಾ.ಮನುರಾವ್, ಜತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ, ಸಂಘಟನಾ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ ಇದ್ದರು.

2022ರ ಸೇವಾ ಯೋಜನೆಗಳು

20 ಕಲಾವಿದರಿಗೆ ಗೃಹ ನಿರ್ಮಾಣಕ್ಕೆ ತಲಾ ₹ 25 ಸಾವಿರ, ಹತ್ತು ಸತ್ಪಾತ್ರ ಕಲಾವಿದರಿಗೆ ₹ 50 ಸಾವಿರ ಆರ್ಥಿಕ‌ ನೆರವು, ಕಲಾವಿದರಿಗೆ ವೈದ್ಯಕೀಯ ನೆರವು, ಅಪಘಾತ ವಿಮಾ ಯೋಜನೆ, ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ 2022ರ ಪಟ್ಲ ಸಂಭ್ರಮದ ಸೇವಾ ಯೋಜನೆಗಳಾಗಿವೆ ಎಂದು ಪಟ್ಲ ಸತೀಶ್‌ ಶೆಟ್ಟಿ ಹೇಳಿದರು.

ಪಟ್ಲ ಯಕ್ಷಾಶ್ರಯ ಯೋಜನೆಯಲ್ಲಿ ನಿವೇಶನ‌ ರಹಿತ 100 ಕಲಾವಿದರಿಗೆ ಉಚಿತ 100 ಮನೆಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಈಗಾಗಲೇ ಮೂರು ಮನೆಗಳನ್ನು ನಿರ್ಮಿಸಿ, ಕಲಾವಿದರಿಗೆ ಹಸ್ತಾಂತರಿಸಲಾಗಿದೆ. ಎರಡು ಮನೆಗಳು ನಿರ್ಮಾಣ ಹಂತದಲ್ಲಿವೆ. ಕಳೆದ 6 ವರ್ಷಗಳಲ್ಲಿ ₹ 7.5 ಕೋಟಿ ವೆಚ್ಚದ ಸೇವಾ ಯೋಜನೆ ಅನುಷ್ಠಾನ ಮಾಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT