ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | ಸುಳ್ಯ ಸುತ್ತಮುತ್ತ ಕಂಪಿಸಿದ ಭೂಮಿ

ಭಯಗೊಂಡು ಮನೆಯಿಂದ ಹೊರ ಬಂದ ಜನರು
Last Updated 25 ಜೂನ್ 2022, 15:42 IST
ಅಕ್ಷರ ಗಾತ್ರ

ಸುಳ್ಯ: ತಾಲ್ಲೂಕಿನ ಹಲವೆಡೆ ಶನಿವಾರ ಬೆಳಿಗ್ಗೆ 9.09 ಗಂಟೆ ವೇಳೆಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 2.7 ಪರಿಮಾಣದ ತೀವ್ರತೆ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

‘ಮನೆಯಲ್ಲಿದ್ದ ಪಾತ್ರೆಗಳು ಅಲ್ಲಾಡಿವೆ. ಕೆಲವೆಡೆ ಗೋಡೆ ಸಣ್ಣದಾಗಿ ಬಿರುಕುಬಿಟ್ಟಿದೆ’ ಎಂದು ಸಂಪಾಜೆ ಅಬೂಸಾಲಿ ಅನುಭವ ಹಂಚಿಕೊಂಡರು. ರಬ್ಬರ್ ಟ್ಯಾಪಿಂಗ್ ಮಾಡುವ ವೇಳೆ ಮರ ಅದುರಿದ ಅನುಭವ ಆಯಿತು. ಭೂಮಿ ಕಂಪಿಸಿದ ಪರಿಣಾಮ ಜನರು ಮನೆಯಿಂದ ಹೊರಗೆ ಓಡಿಬಂದರು ಎಂದು ತೊಡಿಕಾನದ ಕೆ.ಕೆ.ನಾರಾಯಣ ಹೇಳಿದರು.

‘ಮನೆಯಲ್ಲಿ ಕುಳಿತಿದ್ದಾಗ ಯಾರೋ ಕುರ್ಚಿಯನ್ನು ಅಲುಗಾಡಿಸಿದಂತಾಯಿತು. ಇದು ನನ್ನ ಅನುಭವ ಮಾತ್ರವಲ್ಲ, ಉಳಿದವರಿಗೂ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಅಕ್ಕಪಕ್ಕದವರು, ಸುತ್ತಲಿನವರು ಹೇಳಿಕೊಂಡರು’ ಎಂದು ಅಶೋಕ್ ಪೀಚೆ, ಜನಾರ್ದನ ಕಲ್ಲುಚೆರ್ಪೆ ಹೇಳಿದರು.

‘ಕರ್ನಾಟಕ ರಾಜ್ಯ ನ್ಯಾಚುರಲ್ ಡಿಸಾಸ್ಟರ್ ಮಾನಿಟರಿಂಗ್ ಸೆಂಟರ್ ಅಧಿಕೃತ ಬುಲೆಟಿನ್ ಬಿಡುಗಡೆಗೊಳಿಸಿದ್ದು, ಇದರ ಪ್ರಕಾರ ಕೊಡಗು ಜಿಲ್ಲೆಯ ಕರಿಕೆಯಲ್ಲಿ ರಿಕ್ಟರ್‌ ಮಾಪಕದಲ್ಲಿ 2.3 ಪರಿಮಾಣದ ಭೂಕಂಪನ ದಾಖಲಾಗಿದೆ. ಇದರ ಪ್ರತಿಫಲನದಿಂದ ಸುಳ್ಯ ತಾಲ್ಲೂಕಿನ ಹಲವೆಡೆ ಭೂಮಿ ಕಂಪಿಸಿರುವುದಾಗಿ ಅಂದಾಜಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮನೆಯಲ್ಲಿದ್ದ ಪಾತ್ರೆಗಳು ಅಲುಗಾಡಿದ್ದು, ಕೆಲವು ಕಡೆ ಕಪಾಟಿನಲ್ಲಿಟ್ಟಿದ್ದ ಪಾತ್ರೆ ಮತ್ತಿತರ ವಸ್ತುಗಳು ಕೆಳಗೆ ಬಿದ್ದಿವೆ. ಕೆಲವು ಮನೆಗಳ ಗೋಡೆ ಬಿರುಕು ಬಿಟ್ಟಿದ್ದು, ಚಾವಣಿಯ ಶೀಟ್‌ ಅದುರಿದಂತೆ ಸದ್ದು ಮಾಡಿತು’ ಎಂದು ಅಶ್ರಫ್ ಗುಂಡಿ ತಿಳಿಸಿದ್ದಾರೆ.

ಅಂಗಡಿಯಲ್ಲಿದ್ದ ಭರಣಿಗಳು ಅದುರಿದವು ಎಂದು ಸಂಪಾಜೆಯ ಗೋಪಾಲ ತಿಳಿಸಿದ್ದಾರೆ. ‘ನಾನು ಸ್ನಾನ ಮಾಡುತ್ತಿದ್ದೆ. ಭೂಮಿ ಕಂಪಿಸಿದ ಅನುಭವವಾಯಿತು. ಪಕ್ಕದ ಮನೆಯಲ್ಲಿ ಕೆಲಸ ಆಗುತ್ತಿದ್ದು, ಅಲ್ಲಿಂದ ಕಲ್ಲು ಬಿದ್ದುದರಿಂದ ಭೂಕಂಪನ ಆಗಿರಬಹುದೆಂದು ಭಾವಿಸಿದೆ. ಆದರೆ ಮನೆಯಿಂದ ಹೊರಗೆ ಬಂದಾಗ ಎಲ್ಲರೂ ತಮ್ಮ ತಮ್ಮ ಅನುಭವ ಹೇಳಿಕೊಂಡರು’ ಎಂದು ರಿಯಾಜ್ ಕಟ್ಟೆಕ್ಕಾರ್ ಅನುಭವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT