ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಎದೆಯಲ್ಲಿ ಗಂಟು: ಶಸ್ತ್ರಚಿಕಿತ್ಸೆಗೆ ದಾಖಲಾದ ಯುವಕ ಸಾವು

ಕಾಸ್ಮೆಟಿಕ್ ಸರ್ಜರಿ ಕೇಂದ್ರದ ವೈದ್ಯರ ವಿರುದ್ಧ ಎಫ್‌ಐಆರ್‌
Published : 25 ಸೆಪ್ಟೆಂಬರ್ 2024, 13:40 IST
Last Updated : 25 ಸೆಪ್ಟೆಂಬರ್ 2024, 13:40 IST
ಫಾಲೋ ಮಾಡಿ
Comments

ಮಂಗಳೂರು: ದೇಹದ ಎದೆ ಭಾಗದಲ್ಲಿ ಆಗಿದ್ದ ಗಂಟು ತೆಗೆಯಿಸಲು ಇಲ್ಲಿನ ಬೆಂದೂರ್‌ವೆಲ್‌ನ  ಕಾಸ್ಮೆಟಿಕ್ ಸರ್ಜರಿ ಕೇಂದ್ರವೊಂದರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಯುವಕ ಸೋಮವಾರ ಮೃತಪಟ್ಟಿದ್ದು, ಅಲ್ಲಿನ ವೈದ್ಯರ ವಿರುದ್ಧ ಕದ್ರಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 

ಉಳ್ಳಾಲ ಅಕ್ಕರೆಕರೆ ನಿವಾಸಿ ಮೊಹಮ್ಮದ್ ಮಾಝಿನ್‌ (32) ಮೃತ ಯುವಕ. ತಮ್ಮ ಎದೆ ಭಾಗದಲ್ಲಿರುವ ಗಂಟಿನ ಸಮಸ್ಯೆ ಬಗ್ಗೆ ಸಲಹೆ ಪಡೆಯಲು ಬೆಂದೂರ್‌ವೆಲ್‌ನ ಕಾಸ್ಮೆಟಿಕ್ ಸರ್ಜರಿ ಕೇಂದ್ರವೊಂದರ ವೈದ್ಯರನ್ನು ಅವರು ಕೆಲದಿನಗಳ ಹಿಂದೆ ಭೇಟಿ ಮಾಡಿದ್ದರು. ಆ ವೈದ್ಯರ ಸಲಹೆ ಮೇಲೆ, ಇದೇ 23ರಂದು ಅವರಿಗೆ ಶಸ್ತ್ರಚಿಕಿತ್ಸೆಗೆ ದಿನವನ್ನು ಗೊತ್ತುಪಡಿಸಲಾಗಿತ್ತು. ಅವರು ಶಸ್ತ್ರಚಿಕಿತ್ಸೆಗಾಗಿ ಕಾಸ್ಮೆಟಿಕ್ ಸರ್ಜರಿ ಕೇಂದ್ರಕ್ಕೆ ಅಂದು ಬೆಳಿಗ್ಗೆ ದಾಖಲಾದ ಬಳಿಕ ಸಂಜೆಯಾದರೂ ವೈದ್ಯರಿಂದ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ.

ಮಾಝಿನ್‌ ಅವರ ಪತ್ನಿ ಮತ್ತು ತಾಯಿ ಆಸ್ಪತ್ರೆಯಲ್ಲೇ ಕಾಯುತ್ತಿದ್ದರು. ವೈದ್ಯರ ನಡೆಯ ಬಗ್ಗೆ ಅನುಮಾನಗೊಂಡು ವಿಚಾರಿಸಿದಾಗ, ‘ಮಾಝಿನ್‌ ಆರೋಗ್ಯದಲ್ಲಿ ಏರುಪೇರಾಗಿದೆ. ಬೇರೆ ಆಸ್ಪತ್ರೆಗೆ ದಾಖಲಿಸಬೇಕಾಗಿದೆ’ ಎಂದು ಮಾಹಿತಿ ನೀಡಿದ್ದರು. ಅವರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿನ ವೈದ್ಯರು ಮಾಝಿನ್‌ ಮೃತಪಟ್ಟಿದ್ದಾರೆ’ ಎಂದು ತಿಳಿಸಿದ್ದರು.

ವೈದ್ಯರ ನಿರ್ಲಕ್ಷ್ಯದ ಬಗ್ಗೆ ಮಾಝಿನ್‌ ಕುಟುಂಬದವರು ಕದ್ರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. 

ಈ ಘಟನೆ ಬಳಿಕ ಬೆಂದೂರ್‌ವೆಲ್‌ನ ಆ ಕಾಸ್ಮೆಟಿಕ್‌ ಸರ್ಜರಿ ಕೇಂದ್ರವನ್ನು ದಕ್ಷಿಣ ಕನ್ನಡ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮುಚ್ಚಿಸಿದ್ದಾರೆ.

‘ಕಾಸ್ಮೆಟಿಕ್‌ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ಕಾಸ್ಮೆಟಿಕ್‌ ಶಸ್ತ್ರಚಿಕಿತ್ಸಾ ಕೇಂದ್ರಕ್ಕೆ ತೆರಳಿ ಪರಿಶೀಲಿಸಿದ್ದೇವೆ. ಅಲ್ಲಿನ ವ್ಯವಸ್ಥೆಯಲ್ಲಿ ಕೆಲವೊಂದು ಲೋಪಗಳಿರುವುದು ಕಂಡುಬಂದಿದ್ದರಿಂದ ಆ ಕೇಂದ್ರವನ್ನು ಮುಚ್ಚಿಸಿದ್ದೇವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್‌.ಆರ್‌.ತಿಮ್ಮಯ್ಯ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಅರಿವಳಿಕೆ ಮದ್ದು ನೀಡುವಾಗ ಉಂಟಾದ ಲೋಪದಿಂದ ಯುವಕ ಮೃತಪಟ್ಟಿದ್ದಾನೆ ಎಂದು ಈಗಲೇ ನಿರ್ಧಾರಕ್ಕೆ ಬರಲಾಗದು. ಶಸ್ತ್ರಚಿಕಿತ್ಸೆ ನಡೆಸುವಾಗ ಏನು ಲೋಪ ಆಗಿದೆ ಎಂಬುದರ ತನಿಖೆಗೆ ತಜ್ಞ ವೈದ್ಯರ ತಂಡವನ್ನು ರಚಿಸಿ ವರದಿ ಪಡೆಯಲಿದ್ದೇವೆ. ತಜ್ಞರ ವರದಿ ಆಧರಿಸಿ ಮುಂದಿನ ಕ್ರಮ ವಹಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT