ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4,706 ಅನರ್ಹ ಬಿಪಿಎಲ್‌ ಪಡಿತರ ಚೀಟಿ ರದ್ದು

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಟಿ.ಮಂಜುನಾಥನ್‌
Last Updated 20 ನವೆಂಬರ್ 2019, 16:41 IST
ಅಕ್ಷರ ಗಾತ್ರ

ಮಂಗಳೂರು: ಆರ್ಥಿಕವಾಗಿ ಸಬಲರಾಗಿದ್ದೂ, ಸುಳ್ಳು ಮಾಹಿತಿ ನೀಡಿ ಪಡೆದುಕೊಂಡಿದ್ದ 4,706 ಅನರ್ಹ ಬಿಪಿಎಲ್‌ ಪಡಿತರ ಚೀಟಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಪತ್ತೆ ಮಾಡಲಾಗಿದ್ದು, ಅವುಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಟಿ. ಮಂಜುನಾಥನ್‌ ತಿಳಿಸಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಬುಧವಾರ ನಡೆದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ಈ ಕುರಿತು ಮಾಹಿತಿ ನೀಡಿದರು. ಸ್ವಯಂಪ್ರೇರಿತವಾಗಿ ಒಪ್ಪಿಸಿದ ಅನರ್ಹ ಪಡಿತರ ಚೀಟಿಗಳನ್ನು ಎಪಿಎಲ್‌ ಪಡಿತರ ಚೀಟಿಗಳನ್ನಾಗಿ ಪರಿವರ್ತಿಸಲಾಗಿದೆ. ಇಲಾಖೆಯೇ ಪತ್ತೆ ಮಾಡಿದ ಅನರ್ಹ ಪಡಿತರ ಚೀಟಿದಾರರಿಗೆ ದಂಡವನ್ನೂ ವಿಧಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 2,71,000 ಆದ್ಯತಾ ಪಟ್ಟಿಯಲ್ಲಿರುವ ಕುಟುಂಬಗಳ (ಬಿಪಿಎಲ್‌) ಪಡಿತರ ಚೀಟಿಗಳು ಮತ್ತು 1,55,000 ಆದ್ಯತಾ ಪಟ್ಟಿಯೇತರ ಕುಟುಂಬಗಳ (ಎಪಿಎಲ್‌) ಪಡಿತರ ಚೀಟಿಗಳು ಇವೆ. ಈ ಪೈಕಿ ಅನರ್ಹ ಬಿಪಿಎಲ್‌ ಪಡಿತರ ಚೀಟಿದಾರರನ್ನು ಗುರುತಿಸುವ ಕೆಲಸ ಸೆಪ್ಟೆಂಬರ್‌ನಿಂದ ಆರಂಭವಾಗಿದೆ. ಈವರೆಗೆ 4,706 ಮಂದಿಯನ್ನು ಪತ್ತೆ ಮಾಡಲಾಗಿದೆ ಎಂದು ವಿವರಿಸಿದರು.

ಆರ್‌ಟಿಒ ಮಾಹಿತಿ ಆಧಾರ: ಮೊದಲ ಹಂತದಲ್ಲಿ ಕಾರು ಮತ್ತು ಇತರೆ ನಾಲ್ಕು ಚಕ್ರದ ವಾಹನಗಳನ್ನು ಹೊಂದಿದ್ದೂ, ಬಿ‍ಪಿಎಲ್‌ ಪಡಿತರ ಚೀಟಿ ಪಡೆವರನ್ನು ಪತ್ತೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಯಲ್ಲಿ ಲಭ್ಯವಿರುವ ವಾಹನ ನೋಂದಣಿ ಮಾಹಿತಿಯನ್ನು ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

‘ಈಗ ಜಿಲ್ಲೆಯಲ್ಲಿರುವ ಎಲ್ಲ ವಾಹನಗಳ ವಿವರ ನಮ್ಮ ಬಳಿ ಇದೆ. ಹೊರ ಜಿಲ್ಲೆಯಲ್ಲಿ ನೋಂದಣಿಯಾದ ವಾಹನಗಳ ವಿವರವೂ ಸಿಗುತ್ತದೆ. ಆಧಾರ್‌ ಸಂಖ್ಯೆಯ ಆಧಾರದಲ್ಲಿ ವಾಹನ ಮಾಲೀಕರನ್ನು ಪತ್ತೆ ಮಾಡಲಾಗುವುದು. ನಾಲ್ಕು ಚಕ್ರದ ವಾಹನ ಹೊಂದಿರುವವರು ಪಡೆದಿರುವ ಎಲ್ಲ ಬಿ‍ಪಿಎಲ್‌ ಪಡಿತರ ಚೀಟಿಗಳನ್ನೂ ರದ್ದು ಮಾಡಲಾಗುವುದು’ ಎಂದು ಮಂಜುನಾಥನ್‌ ತಿಳಿಸಿದರು.

ಎಲ್ಲಿ ಬೇಕಾದರೂ ಪಡೆಯಿರಿ: ಪಡಿತರ ಚೀಟಿದಾರರು ನಿರ್ದಿಷ್ಟ ನ್ಯಾಯಬೆಲೆ ಅಂಗಡಿಯಲ್ಲೇ ಪಡಿತರ ವಸ್ತುಗಳನ್ನು ಪಡೆಯಬೇಕೆಂಬ ನಿರ್ಬಂಧವನ್ನು ರದ್ದು ಮಾಡಲಾಗಿದೆ. ಈಗ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಬೇಕಿದ್ದರೂ ಪಡಿತರ ಪಡೆಯಲು ಅವಕಾಶವಿದೆ. ಕೆಲಸ ಅರಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿರುವ ಬಾಗಲಕೋಟೆ ಜಿಲ್ಲೆಯ 3,600 ಮಂದಿ ಇಲ್ಲಿಯೇ ಪಡಿತರ ಪಡೆಯುತ್ತಿದ್ದಾರೆ ಎಂದರು.

ದಂಡದಿಂದ ವಿನಾಯ್ತಿ
‘ಈಗಲೂ ದಂಡವಿಲ್ಲದೇ ಅನರ್ಹ ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದತಿಗಾಗಿ ಸಲ್ಲಿಸಲು ಅವಕಾಶವಿದೆ. ಸ್ವಯಂಪ್ರೇರಿತರಾಗಿ ಇಲಾಖೆಗೆ ಪಡಿತರ ಚೀಟಿ ಒಪ್ಪಿಸುವವರಿಗೆ ದಂಡ ವಿಧಿಸುವುದಿಲ್ಲ. ಇಲಾಖೆ ಅಂತಹ ಪ್ರಕರಣ ಪತ್ತೆ ಮಾಡಿದರೆ ದಂಡ ವಿಧಿಸುತ್ತೇವೆ’ ಎಂದು ಡಾ.ಬಿ.ಟಿ.ಮಂಜುನಾಥನ್‌ ತಿಳಿಸಿದರು.

ಅನರ್ಹ ಬಿಪಿಎಲ್‌ ಪಡಿತರ ಚೀಟಿದಾರರ ಬಗ್ಗೆ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡಬಹುದು. ಒಂದು ಅನರ್ಹ ಪಡಿತರ ಚೀಟಿಯ ಕುರಿತು ಮಾಹಿತಿ ನೀಡಿದರೆ ₹ 400 ಬಹುಮಾನ ನೀಡಲಾಗುವುದು. ಮಾಹಿತಿದಾರರ ವಿವರವನ್ನು ಗೋಪ್ಯವಾಗಿರಿಸಲಾಗುವುದು ಎಂದರು.

ಆನ್‌ಲೈನ್‌ನಲ್ಲೇ ಪಡಿತರ ಚೀಟಿ
ಹೊಸದಾಗಿ ಬಿಪಿಎಲ್‌ ಪಡಿತರ ಚೀಟಿಗಳನ್ನು ಪಡೆಯುವುದಕ್ಕೆ ಮಾತ್ರ ಸ್ವಲ್ಪ ಸಮಯ ಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿದ ಅರ್ಜಿ ಮತ್ತು ದಾಖಲೆಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಅನುಮೋದಿಸಿದ ಬಳಿಕ ಪಡಿತರ ಚೀಟಿ ಮಂಜೂರು ಮಾಡಲಾಗುತ್ತದೆ. ಎಪಿಎಲ್‌ ಪಡಿತರ ಚೀಟಿಗಳನ್ನು ತಕ್ಷಣದಲ್ಲೇ ಪಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಡಾ.ಬಿ.ಟಿ.ಮಂಜುನಾಥನ್‌ ತಿಳಿಸಿದರು.

ಅರ್ಜಿದಾರರು ಕುಟುಂಬದ ಎಲ್ಲ ಸದಸ್ಯರ ಆಧಾರ್‌ ಸಂಖ್ಯೆಗಳೊಂದಿಗೆ ಅರ್ಜಿಯನ್ನು ಅಪ್‌ಲೋಡ್‌ ಮಾಡಬೇಕು. ತಕ್ಷಣದಲ್ಲೇ ಪಡಿತರ ಚೀಟಿ ಮಂಜೂರಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಬಿಪಿಎಲ್‌ ಪಡಿತರ ಚೀಟಿ ಕೋರಿರುವ 4,725 ಅರ್ಜಿಗಳು ಮಾತ್ರ ವಿಲೇವಾರಿಗೆ ಬಾಕಿ ಇವೆ ಎಂದು ಮಾಹಿತಿ ನೀಡಿದರು.

ರದ್ದುಗೊಂಡ ಪಡಿತರ ಚಿಟಿಗಳ ಸಂಖ್ಯೆ
ತಾಲ್ಲೂಕು; ಸಂಖ್ಯೆ

ಮಂಗಳೂರು ನಗರ; 224
ಮಂಗಳೂರು ತಾಲ್ಲೂಕು; 685
ಬಂಟ್ವಾಳ; 1,026
ಪುತ್ತೂರು; 727
ಬೆಳ್ತಂಗಡಿ; 1,562
ಸುಳ್ಯ; 442

ಹೊಸ ಪಡಿತರ ಚೀಟಿ, ತಿದ್ದುಪಡಿಗೆ ಕಾಯಬೇಕಿಲ್ಲ...
ಹೊಸ ಪಡಿತರ ಚೀಟಿ ಪಡೆಯುವುದು ಹೇಗೆ? ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಲು ಹೆಚ್ಚು ಸಮಯ ಬೇಕೆ? ಒಂದೇ ಕುಟುಂಬದಲ್ಲಿದ್ದವರಿಗೆ ಒಂದಕ್ಕಿಂತ ಹೆಚ್ಚು ‍ಪಡಿತರ ಚೀಟಿ ಪಡೆಯಲು ಸಾಧ್ಯವೇ? ಪಡಿತರ ವಿತರಣೆಯಲ್ಲಿ ಬಯೋಮೆಟ್ರಿಕ್‌ನಿಂದ ಆಗುತ್ತಿರುವ ವಿಳಂಬಕ್ಕೆ ಯಾರು ಹೊಣೆ...

– ಇವು ‘ಪ್ರಜಾವಾಣಿ’ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಟಿ.ಮಂಜುನಾಥನ್‌ ಅವರ ಮುಂದೆ ಓದುಗರು ಇರಿಸಿದ ಪ್ರಶ್ನೆಗಳು. ಎಡೆಬಿಡದೆ ಬಂದ ಸಾಲು, ಸಾಲು ಪ್ರಶ್ನೆಗಳಿಗೆ ಉತ್ತರಿಸಿದ ಜಂಟಿ ನಿರ್ದೇಶಕರು, ನಿಖರವಾದ ಉತ್ತರ ನೀಡಿದರು.

ಒಂದು ಗಂಟೆ ಕಾಲ ನಡೆದ ಫೋನ್‌ ಇನ್‌ ಕಾರ್ಯಕ್ರಮದ ಪ್ರಶ್ನೋತ್ತರದ ಸಮಗ್ರ ವಿವರ ಇಲ್ಲಿದೆ...

ಗಣೇಶ್‌, ಮಣಿಪಾಲ/ ಆರೀಫ್‌, ಮಂಗಳೂರು

ಪ್ರಶ್ನೆ: ಆಧಾರ್‌ ಸಂಖ್ಯೆ ನೀಡಿ ಒಂದು ಕುಟುಂಬ ಒಂದು ಪಡಿತರ ಚೀಟಿ ಪಡೆದ ಬಳಿಕ, ಅದೇ ಕುಟುಂಬದ ಬೇರೆ ಸದಸ್ಯರ ಹೆಸರಿನಲ್ಲಿ ಹೊಸ ಪಡಿತರ ಚೀಟಿ ಪಡೆಯಬಹುದೇ?

ಉತ್ತರ: ಒಂದು ಕುಟುಂಬಕ್ಕೆ ಒಂದೇ ಪಡಿತರ ಚೀಟಿ ನೀಡಲು ಸಾಧ್ಯ. ಆ ಕುಟುಂಬದ ಸದಸ್ಯರು ಬೇರೆ ಬೇರೆಯಾಗಿ ವಾಸಿಸುತ್ತಿದ್ದಾಗ ಮತ್ತು ಅದಕ್ಕೆ ಸಂಬಂಧಿಸಿದಂತೆ ಅಧಿಕೃತ ದಾಖಲೆ ಸಲ್ಲಿಸಿದರೆ ಮಾತ್ರ ಪ್ರತ್ಯೇಕ ಪಡಿತರ ಚೀಟಿ ಪಡೆಯಲು ಸಾಧ್ಯ.

**

ವಿ.ಹಮೀದ್‌, ವಿಟ್ಲ/ ಶ್ರೀಧರ್‌ ಶೆಟ್ಟಿ, ಹೆಬ್ರಿ/ ರಹಿಮಾನ್‌, ಬಂಟ್ವಾಳ/ಪ್ರವೀಣ್‌, ದೇವರಹಳ್ಳಿ, ಸುಳ್ಯ/ ಲೋಕೇಶ್‌, ಸುಬ್ರಹ್ಮಣ್ಯ

ಪ್ರ: ಗ್ರಾಮೀಣ ಪ್ರದೇಶದಲ್ಲಿ ಬಯೋಮೆಟ್ರಿಕ್‌ ನೀಡಲಾಗದ ಕಾರಣಕ್ಕೆ ಪಡಿತರ ಪಡೆಯಲು ದಿನಗಟ್ಟಲೆ ಕಾಯುವಂತಾಗಿದೆ. ಈ ಸಮಸ್ಯೆಗೆ ಪರಿಹಾರ ಇಲ್ಲವೇ?

ಉ: ಇದು ನ್ಯಾಯಬೆಲೆ ಅಂಗಡಿಗಳಲ್ಲಿ ಬಳಸುವ ಇಂಟರ್‌ನೆಟ್‌ ಸಂಪರ್ಕದಿಂದ ಆಗುತ್ತಿರುವ ಸಮಸ್ಯೆ. ನ್ಯಾಯಬೆಲೆ ಅಂಗಡಿಗಳ ವಿಳಾಸದ ಸಮೇತ ನಿರ್ದಿಷ್ಟವಾಗಿ ಮಾಹಿತಿ ಒದಗಿಸಿದರೆ ಆಹಾರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಾರೆ. ಅಲ್ಲಿ ಒಳ್ಳೆಯ ಸೇವೆ ನೀಡುವ ಕಂಪನಿಯ ಸಿಮ್‌ ಬಳಕೆಗೆ ವ್ಯವಸ್ಥೆ ಮಾಡಲಾಗುವುದು.

**

ರಾಕೇಶ್, ಕದ್ರಿ

ಪ್ರ: ಕೆಲವು ಅಂಗಡಿಗಳಲ್ಲಿ ನಂದಿನಿ ಹಾಲಿಗೆ ಎಂಆರ್‌ಪಿಗಿಂತ ಹೆಚ್ಚು ಹಣ ಪಡೆಯುತ್ತಾರೆ. ಇದು ಕಾನೂನುಬಾಹಿರ ಅಲ್ಲವೇ?

ಉ: ಎಂಆರ್‌ಪಿಗಿಂತ ಹೆಚ್ಚು ಹಣ ಪಡೆಯುವುದು ಅಪರಾಧ. ಈ ಬಗ್ಗೆ ಕಾನೂನು ಮಾಪನಶಾಸ್ತ್ರ ಇಲಾಖೆಗೆ ದೂರು ನೀಡಿದರೆ ಸೂಕ್ತ ಕ್ರಮ ಜರುಗಿಸುತ್ತಾರೆ.

**

ಲಾರೆನ್ಸ್, ಬಿಕರ್ನಕಟ್ಟೆ

ಪ್ರ: ಕುಲಶೇಖರದ ಸ್ಟೆಲ್ಲಾ ಮೆಂಡೋನ್ಸಾ ನ್ಯಾಯಬೆಲೆ ಅಂಗಡಿಯಲ್ಲಿ ಎಪಿಎಲ್‌ ಪಡಿತರ ಚೀಟಿದಾರರಿಗೆ ಸಕಾಲಕ್ಕೆ ಅಕ್ಕಿ ನೀಡುತ್ತಿಲ್ಲ. ಇದಕ್ಕೆ ಕಾರಣವೇನು?

ಉ: ಎಪಿಎಲ್‌ ಪಡಿತರ ಚೀಟಿದಾರರಿಗೂ ಸಮಯಕ್ಕೆ ಸರಿಯಾಗಿ ಅಕ್ಕಿ ಪೂರೈಸಲಾಗುತ್ತಿದೆ. ಕುಲಶೇಖರದಲ್ಲಿ ಏಕೆ ವಿಳಂಬ ಆಗುತ್ತಿದೆ ಎಂಬುದನ್ನು ಪರಿಶೀಲಿಸಲಾಗುವುದು. ಮುಂದಿನ ದಿನಗಳಲ್ಲಿ ತಿಂಗಳ ಆರಂಭದಲ್ಲೇ ಅಕ್ಕಿ ವಿತರಣೆಗೆ ವ್ಯವಸ್ಥೆ ಮಾಡಲಾಗುವುದು.

**

ಫಾರೂಕ್‌, ಪಾಂಡೇಶ್ವರ

ಪ್ರ: ಅನರ್ಹ ಎಂದು ಪರಿಗಣಿಸಿದ ಬಿಪಿಎಲ್‌ ಪಡಿತರ ಚೀಟಿ ವಾಪಸು ನೀಡಲು ಬಂದಾಗ ದಂಡ ವಿಧಿಸುವುದು ತಪ್ಪಲ್ಲವೇ?

ಉ: ಇಲಾಖೆಯೇ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಮಾಡಿದರೆ ₹ 15,000 ಅಥವಾ ಅದಕ್ಕಿಂತ ಹೆಚ್ಚು ದಂಡ ವಿಧಿಸಲಾಗುತ್ತಿದೆ. ಸ್ವಯಂಪ್ರೇರಿತರಾಗಿ ಪಡಿತರ ಚೀಟಿ ವಾಪಸು ನೀಡಲು ಬರುವವರಿಗೆ ದಂಡ ವಿಧಿಸುವುದಿಲ್ಲ.

**

ಪ್ರಕಾಶ್‌, ಕಟಪಾಡಿ

ಪ್ರ: ಮುದ್ರಣದ ಸಮಸ್ಯೆ ನೀಡಿ ಹೊಸ ಪಡಿತರ ಚೀಟಿಗಳನ್ನು ವಿತರಿಸುತ್ತಿಲ್ಲ. ಇದು ನಿಜವೇ?

ಉ: ಪಡಿತರ ಚೀಟಿಗಳ ಮುದ್ರಣದಲ್ಲಿ ಸಮಸ್ಯೆ ಇಲ್ಲ. ನಿಮ್ಮ ಪ್ರಕರಣದ ಕುರಿತು ಇಲಾಖೆಯ ಉಡುಪಿ ಜಿಲ್ಲೆಯ ಅಧಿಕಾರಿಗಳ ಜೊತೆ ಚರ್ಚಿಸಿ, ತ್ವರಿತ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.

**

ಶಿವರಾಮೇಗೌಡ, ಸುಳ್ಯ

ಪ್ರ: ಹೊಸ ಪಡಿತರ ಪಡೆಯುವ ವಿಧಾನ ಹೇಗೆ?

ಉ: ಪಡಿತರ ಚೀಟಿಗಾಗಿ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬಹುದು. ಬಿಪಿಎಲ್‌ ಪಡಿತರ ಚೀಟಿಯಾದರೆ ಆದಾಯ ಪ್ರಮಾಣ ಪತ್ರದ ದಾಖಲೆಯನ್ನು ಕಂದಾಯ ಇಲಾಖೆಯ ದಾಖಲೆಗಳ ಜೊತೆ ತಾಳೆ ಮಾಡಿ ನೋಡಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಎಪಿಎಲ್‌ ಪಡಿತರ ಚೀಟಿಯನ್ನು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ತಕ್ಷಣದಲ್ಲೇ ಪಡೆಯಬಹುದು.

**

ಮಹಮ್ಮದ್ ಅಲಿ, ವಿಟ್ಲ

ಪ್ರ: ಬಿಪಿಎಲ್‌ ಪಡಿತರ ಚೀಟಿದಾರರಿಗೆ ಈಗ ಅಕ್ಕಿ ಮಾತ್ರ ವಿತರಿಸಲಾಗುತ್ತಿದೆ ಏಕೆ?

ಉ: ಗೋಧಿ, ತೊಗರಿಬೇಳೆ, ಅಡುಗೆ ಎಣ್ಣೆ ವಿತರಣೆಯನ್ನು ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸರ್ಕಾರದ ಸೂಚನೆ ಬಂದರೆ ಮತ್ತೆ ವಿತರಿಸಲಾಗುವುದು.

**

ಅಬ್ದುಲ್‌ ಖಾದರ್‌, ಪಾತರಕೋಡಿ, ಬಂಟ್ವಾಳ/ ಪುಷ್ಪರಾಜ್‌ ಶೆಟ್ಟಿ, ಚೇಳ್ಯಾರು/ ಪ್ರಕಾಶ್‌, ಏನೇಕಲ್ಲು/ ಸುರೇಶ್‌, ಮೂಡುಬಿದಿರೆ/ ನಿರಂಜನ್‌, ಸುರತ್ಕಲ್‌/ ಪವಿತ್ರಾ, ಧರ್ಮಸ್ಥಳ

ಪ್ರ: ಬಿಪಿಎಲ್‌ ಪಡಿತರ ಚೀಟಿ ಮಂಜೂರಾತಿಗೆ ಯಾವ ಮಾನದಂಡಗಳಿವೆ?

ಉ: ಅರ್ಜಿದಾರರ ಕುಟುಂಬದಲ್ಲಿ ಯಾರೂ ಆದಾಯ ತೆರಿಗೆ ಪಾವತಿಸುತ್ತಿರಬಾರದು. ಕುಟುಂಬದ ವಾರ್ಷಿಕ ಆದಾಯ ₹ 1.20 ಲಕ್ಷಕ್ಕಿಂತ ಕಡಿಮೆ ಇರಬೇಕು. ಸ್ವಂತ ಬಳಕೆಗೆ ನಾಲ್ಕು ಚಕ್ರದ ವಾಹನ ಹೊಂದಿರಬಾರದು. 2 ಎಕರೆ 20ಗುಂಟೆಗಿಂತ ಹೆಚ್ಚು ನೀರಾವರಿ ಕೃಷಿ ಜಮೀನು ಹೊಂದಿರಬಾರದು.

**

ವಿನೋದ್‌ ಬಂಗೇರ, ಅರ್ಕಾನ, ಪಜೀರು

ಪ್ರ: ನನ್ನ ಪತ್ನಿ ಕೇರಳದವರು. ಮದುವೆ ಆಗಿ ಆರು ವರ್ಷವಾದರೂ ಅಲ್ಲಿನ ಪಡಿತರ ಚೀಟಿಯಲ್ಲಿ ಹೆಸರು ತೆಗೆಸಿ, ಇಲ್ಲಿ ಸೇರಿಸಲು ಆಗಿಲ್ಲ. ಏನು ಮಾಡಬೇಕು?

ಉ: ಕೇರಳದಲ್ಲಿರುವ ಪಡಿತರ ಚೀಟಿಯಲ್ಲಿ ಹೆಸರು ಕೈಬಿಡದೇ ಇಲ್ಲಿ ಸೇರಿಸಲು ಆಗುವುದಿಲ್ಲ. ಈಗ ಅಲ್ಲಿ ಹೆಸರು ಕೈಬಿಡುವ ಪ್ರಕ್ರಿಯೆ ನಡೆಯುತ್ತಿದೆ. ಮತ್ತೊಮ್ಮೆ ಅರ್ಜಿ ಸಲ್ಲಿಸಿ.

**

ನರೇಂದ್ರ, ಮೂಲ್ಕಿ

ಪ್ರ: ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಸಿದ ಬಳಿಕ ಹೊಸ ಚೀಟಿ ಮುದ್ರಿಸಿ ಕೊಡುತ್ತಿಲ್ಲ. ಇದಕ್ಕೆ ಕಾರಣವೇನು?

ಉ: ತಿದ್ದುಪಡಿಯಾದ ಪಡಿತರ ಚೀಟಿಗಳ ಮುದ್ರಣ ವಿಳಂಬವಾಗಿತ್ತು. ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿ ಪರಿಹಾರ ದೊರೆಯಲಿದೆ.

**

ಇಂದಿರಾ, ಮಲ್ಪೆ

ಪ್ರ: ಎಪಿಎಲ್‌ ಪಡಿತರ ಚೀಟಿಗಳನ್ನು ಮತ್ತೊಮ್ಮೆ ಬದಲಾವಣೆ ಮಾಡಿಸಬೇಕಾ?

ಉ: ಪಡಿತರ ಚೀಟಿಗಳ ಬದಲಾವಣೆಯ ಅಗತ್ಯವಿಲ್ಲ.

**

ಅಶೋಕ್‌, ಕಿನ್ನಿಗೋಳಿ

ಪ್ರ: ನಮಗೆ ನ್ಯಾಯಬೆಲೆ ಅಂಗಡಿ ದೂರದಲ್ಲಿದೆ. ಈ ಭಾಗಕ್ಕೆ ಹೊಸ ಅಂಗಡಿ ನೀಡಲು ಅವಕಾಶವಿದೆಯೇ?

ಉ: ಬೇಡಿಕೆ ಇದ್ದರೆ ನೀಡಬಹುದು. ಸಹಕಾರಿ ಸಂಸ್ಥೆಗಳಿಗೆ ಮಾತ್ರ ನೀಡಲಾಗುವುದು. ಮೂರು ವರ್ಷದಿಂದ ಲೆಕ್ಕಪರಿಶೋಧನೆ ನಡೆದಿದ್ದು, ₹ 2 ಲಕ್ಷ ಬಂಡವಾಳ ಹೊಂದಿರುವ ಸಹಕಾರಿ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು.

**

ದಿನೇಶ್‌, ಮೂಡುಬಿದಿರೆ

ಪ್ರ: ಅರ್ಹತೆ ಇದ್ದವರಿಗೂ ಏಕೆ ಬಿಪಿಎಲ್‌ ಪಡಿತರ ಚೀಟಿ ನಿರಾಕರಿಸಲಾಗುತ್ತಿದೆ?

ಉ: ಅಂತಹ ಸಾಧ್ಯತೆಯೇ ಇಲ್ಲ. ಸರ್ಕಾರ ನಿಗದಿಪಡಿಸಿದ ಮಾನದಂಡದ ವ್ಯಾಪ್ತಿಯಲ್ಲಿದ್ದರೆ ಬಿಪಿಎಲ್‌ ಪಡಿತರ ಚೀಟಿ ಲಭಿಸುತ್ತದೆ.

**

ಅಬೂಬಬಕ್ಕರ್‌, ಅನಿಲಕಟ್ಟೆ

ಪ್ರ: ಪಡಿತರ ಚೀಟಿಯಲ್ಲಿ ಬಿಟ್ಟು ಹೋಗಿರುವ ಕುಟುಂಬದ ಸದಸ್ಯರ ಹೆಸರನ್ನು ಸೇರಿಸುವುದು ಹೇಗೆ?

ಉ: ಆಧಾರ್‌ ಕಾರ್ಡ್‌ ದಾಖಲೆಯೊಂದಿಗೆ ಇಲಾಖೆಯ ವೆಬ್‌ಸೈಟ್‌ www.ahara.kar.nic.inನಲ್ಲಿ ಆನ್‌ಲೈನ್‌ನಲ್ಲಿ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದರೆ ಸಾಕು.

**

ಎಂ. ಸೂರ್ಯನಾಯಕ್‌, ಗಂಜೀಮಠ

ಪ್ರ: ನಾನು ಬ್ಯಾಂಕ್‌ನ ನಿವೃತ್ತ ಉದ್ಯೋಗಿ. ಪತ್ನಿಯ ಆದಾಯದ ಲೆಕ್ಕದಲ್ಲಿ ನಮ್ಮ ಕುಟುಂಬಕ್ಕೆ ಬಿಪಿಎಲ್‌ ಪಡಿತರ ಚೀಟಿ ನೀಡಬಹುದೇ?

ಉ: ಕುಟುಂಬ ಎಂದರೆ ಗಂಡ, ಹೆಂಡತಿ ಮತ್ತು ಮಕ್ಕಳು ಸೇರುತ್ತಾರೆ. ಎಲ್ಲರ ಒಟ್ಟು ವರಮಾನ ₹ 1.20 ಲಕ್ಷ ಮೀರಿದರೆ ಬಿಪಿಎಲ್‌ ಪಡಿತರ ಚೀಟಿ ಸಿಗುವುದಿಲ್ಲ.

**

ರಫೀಕ್‌, ಬೆಳ್ತಂಗಡಿ/ ಗಣೇಶ್‌, ಕೊಕ್ಕಡ

ಪ್ರ: ಮಾರುತಿ– 800 ಕಾರು ಇದ್ದವರಿಗೂ ಬಿಪಿಎಲ್‌ ಪಡಿತರ ಚೀಟಿ ನಿರಾಕರಣೆ ಅನ್ಯಾಯವಲ್ಲವೇ?

ಉ: ಅದು ಸರ್ಕಾರದ ನಿಯಮ. ಕಾರು ಯಾವುದೇ ಇದ್ದರೂ ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಅರ್ಹರಲ್ಲ. ಈ ವಿಚಾರವನ್ನೂ ಸರ್ಕಾರದ ಗಮನಕ್ಕೆ ತರಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT