ಮಂಗಳೂರು: ಮದುವೆಯಾಗುತ್ತೇನೆ ಎಂದು ನಂಬಿಸಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಆರೋಪಿ ಕಿರಣ್ ಎಂಬಾತನನ್ನು ದಕ್ಷಿಣ ಕನ್ನಡ ಜಿಲ್ಲಾ ಎರಡನೇ ಹೆಚ್ಚುವರಿ ನ್ಯಾಯಾಲಯವು ಖುಲಾಸೆಗೊಳಿಸಿದೆ.
2023ರ ಜೂನ್ 23ರಂದು ಬಾಲಕಿಯೊಬ್ಬಳನ್ನು ಮನೆಗೆ ಕರೆದೊಯ್ದು ಆಕೆ ಮೇಲೆ ಮೂರು ದಿನ ಅತ್ಯಾಚಾರ ನಡೆಸಿದ ಬಗ್ಗೆ ಕಿರಣ್ ವಿರುದ್ಧ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯದೆ (ಪೊಕ್ಸೊ) ಅಡಿ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಿರಣ್ ವಿರುದ್ಧ ಆರೋಪವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಜಿಲ್ಲಾ ಎರಡನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಮನು ಕೆ.ಅವರು ತೀರ್ಪು ನೀಡಿದ್ದಾರೆ. ಆರೋಪಿಯ ಪರವಾಗಿ ವಕೀಲ ಜಿ.ವಾಸುದೇವ ಗೌಡ ವಾದಿಸಿದ್ದರು.