ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪರಾಧಿಗೆ 20 ವರ್ಷ ಕಠಿಣ ಸಜೆ, ₹ 50 ಸಾವಿರ ದಂಡ

ಅತ್ಯಾಚಾರದಿಂದ ಬಾಲಕಿ ಗರ್ಭಿಯಾದ ಪ್ರಕರಣ
Published 4 ಆಗಸ್ಟ್ 2024, 5:54 IST
Last Updated 4 ಆಗಸ್ಟ್ 2024, 5:54 IST
ಅಕ್ಷರ ಗಾತ್ರ

ಮಂಗಳೂರು: ಬಾಲಕಿ ಮೇಲೆ ಅತ್ಯಾಚಾರವೆಸಗಿ ಆಕೆ ಗರ್ಭವತಿಯಾಗುವಂತೆ ಮಾಡಿದ ಪ್ರಕರಣದ ಅಪರಾಧಿ ಯೋಗೀಶ್‌ಗೆ (26 ವರ್ಷ) ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ತ್ವರಿತ ಗತಿ ವಿಶೇಷ ನ್ಯಾಯಾಲಯ–2, ಒಟ್ಟು 20 ವರ್ಷ ಕಠಿಣ ಶಿಕ್ಷೆ ಮತ್ತು ₹ 50 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.  

ಯೋಗೀಶ್‌ 2020ರ ಏ.13ರಂದು ಬಾಲಕಿಯೊಬ್ಬಳನ್ನು ಪುಸಲಾಯಿಸಿ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಕಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದ. ಬಳಿಕ ಕೋವಿಡ್‌ ಲಾಕ್‌ಡೌನ್ ಸಮಯದಲ್ಲಿ ಒಂದು ದಿನ ಅದೇ ಸ್ಥಳಕ್ಕೆ ನೊಂದ ಬಾಲಕಿಯನ್ನು ಕರೆದೊಯ್ದು ಮತ್ತೊಮ್ಮೆ ಬಲಾತ್ಕಾರ ಮಾಡಿದ್ದ. ಇದರ ಪರಿಣಾಮ ಬಾಲಕಿಯು ಗರ್ಭವತಿಯಾಗಿದ್ದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಈ ಬಗ್ಗೆ ಬಾಲಕಿಯು ನೀಡಿದ ದೂರಿನ ಅನ್ವಯ ಬೆಳ್ತಂಗಡಿ  ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ ಅಡಿ ಎಫ್‌ಐಆರ್‌ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ಬಿ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 376(2)(ಎನ್) ಮತ್ತು ಪೊಕ್ಸೊ ಕಾಯ್ದೆಯ ಸೆಕ್ಷನ್ 6ರ ಅಡಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಬಾಲಕಿ ಜನ್ಮ ನೀಡಿದ ಮಗುವಿನ ತಂದೆ ಯೋಗೀಶ್ ಎಂಬುದು ಡಿಎನ್‌ಎ ಪರೀಕ್ಷೆಯಲ್ಲೂ ದೃಢಪಟ್ಟಿತ್ತು. ಒಟ್ಟು 13 ಸಾಕ್ಷಿದಾರರು ಸಾಕ್ಷ್ಯ ಹೇಳಿದ್ದರು. 29 ದಾಖಲೆಗಳನ್ನು ಗುರುತಿಸಲಾಗಿತ್ತು.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ತ್ವರಿತ ಗತಿ ವಿಶೇಷ ನ್ಯಾಯಾಲಯ –2ರ ನ್ಯಾಯಾಧೀಶರಾದ  ಮಾನು ಕೆ. ಎಸ್. ಅವರು ಅಪರಾಧಿ ಯೋಗೀಶ್‌ಗೆ ಅತ್ಯಾಚಾರ ಕೃತ್ಯಕ್ಕೆ  20 ವರ್ಷ ಕಠಿಣ ಶಿಕ್ಷೆ ಮತ್ತು ₹ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.  ದಂಡದ ಮೊತ್ತವಾದ ₹ 50 ಸಾವಿರವನ್ನು ಸಂತ್ರಸ್ತ ಬಾಲಕಿಗೆ ಪಾವತಿಸುವಂತೆ ಆದೇಶಿಸಿದ್ದಾರೆ.  ಐಪಿಸಿ ಸೆಕ್ಷನ್‌ 357(ಎ) ಮತ್ತು ಸಂತ್ರಸ್ತರ ಪರಿಹಾರ ಯೋಜನೆ ಪ್ರಕಾರ  ಬಾಲಕಿಗೆ ಹೆಚ್ಚುವರಿಯಾಗಿ ₹ 1.50 ಲಕ್ಷವನ್ನು  ಮತ್ತು ಆಕೆ ಜನ್ಮ ನೀಡಿದ ಹೆಣ್ಣು ಮಗುವಿಗೆ ₹ 3 ಲಕ್ಷ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡಬೇಕು ಎಂದು ತೀರ್ಪಿನಲ್ಲಿ ನಿರ್ದೇಶನ ನೀಡಿದ್ದಾರೆ ಎಂದು ಸಂತ್ರಸ್ತೆಯ ಪರ ವಾದಿಸಿದ್ದ ಹಾಗೂ ಸಾಕ್ಷ್ಯಗಳ ವಿಚಾರಣೆ ನಡೆಸಿದ್ದ ಸರ್ಕಾರಿ ವಕೀಲ ಕೆ.ಬದರಿನಾಥ ನಾಯರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT