ಮಾದಕ ವಸ್ತು ಎಂಡಿಎಂ ಪುಡಿ, 2 ಪಿಸ್ತೂಲ್‌ ಪೊಲೀಸ್‌ ವಶ

7
ಮಂಗಳೂರು ನಗರ ಪೊಲೀಸರ ಕಾರ್ಯಾಚರಣೆ: ಐವರ ಬಂಧನ

ಮಾದಕ ವಸ್ತು ಎಂಡಿಎಂ ಪುಡಿ, 2 ಪಿಸ್ತೂಲ್‌ ಪೊಲೀಸ್‌ ವಶ

Published:
Updated:
Deccan Herald

ಮಂಗಳೂರು: ಮಾದಕ ವಸ್ತು ಎಂಡಿಎಂಎ ಪುಡಿ ಹಾಗೂ 2 ಪಿಸ್ತೂಲ್ ಮತ್ತು 22 ಮದ್ದುಗುಂಡು ಸಮೇತ ಐವರು ಆರೋಪಿತರನ್ನು ಮಂಗಳೂರು ದಕ್ಷಿಣ ರೌಡಿ ನಿಗ್ರಹದ ದಳದ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ದಕ್ಷಿಣ ಉಪ ವಿಭಾಗ ಮತ್ತು ದಕ್ಷಿಣ ರೌಡಿ ನಿಗ್ರಹದಳದ ಎಸಿಪಿ ಕೆ. ರಾಮರಾವ್‌ ಅವರು, ಸಿಬ್ಬಂದಿಯೊಂದಿಗೆ ಗಸ್ತಿನಲ್ಲಿದ್ದಾಗ ಮಾದಕ ವಸ್ತುಗಳನ್ನು ಕಾರಿನಲ್ಲಿ ಸಾಗಣೆ ಮಾಡುತ್ತಿರುವ ಮಾಹಿತಿ ಲಭಿಸಿತ್ತು. ಅದರ ಆಧಾರದಲ್ಲಿ ಮಂಗಳೂರು ಕಡೆಯಿಂದ ಗುರುಪುರ ಸೇತುವೆ ಕಡೆಗೆ ಸಂಚರಿಸುತ್ತಿದ್ದ ಕಾರನ್ನು ತಡೆದು ತಪಾಸಣೆ ನಡೆಸಿದಾಗ, ಮಾದಕ ವಸ್ತು ಹಾಗೂ ಪಿಸ್ತೂಲ್‌ಗಳು ಪತ್ತೆಯಾಗಿವೆ.

ಇನ್ನೋಳಿ ಮುಟ್ಟಿಂಜೆ ಮನೆಯ ಟಿ.ಎಚ್.ರಿಯಾಜ್, ಬಂಟ್ವಾಳ ತಾಲ್ಲೂಕು ಮೆದು ಮನೆಯ ಉಸ್ಮಾನ್ ರಫೀಕ್ ಯಾನೆ ತಲ್ಕಿ ರಫೀಕ್, ಕಾಸರಗೋಡು ಜಿಲ್ಲೆಯ ಉಪ್ಪಳದ ಪತ್ವಾಡಿ ಮನೆಯ ಅಬ್ದುಲ್ ರವೂಫ್‌ ವಿ.ಎಸ್., ಹಿದಾಯತ್‌ ನಗರದ ಇಮ್ತಿಯಾಜ್ ಅಹಮ್ಮದ್, ವಿಟ್ಲದ ಜೋಗಿ ಮಠ ರಸ್ತೆ ನಿವಾಸಿ ಹಜ್ವರ್ ಬಂಧಿತ ಆರೋಪಿಗಳು.

ಆರೋಪಿಗಳಿಂದ ₹7 ಲಕ್ಷ ಮೌಲ್ಯದ ಬುಲೆನೋ ಕಾರು, ₹5,500 ಮೌಲ್ಯದ ಗಾಂಜಾದಿಂದ ತಯಾರಿಸಿದ ಉಂಡೆ, ₹1.80 ಲಕ್ಷ ಮೌಲ್ಯದ 100 ಗ್ರಾಂ ಎಂಡಿಎಂಎ ಪುಡಿ, ₹1.15 ಲಕ್ಷ ಮೌಲ್ಯದ ಎರಡು ಪಿಸ್ತೂಲ್‌ ಹಾಗೂ 22 ಮದ್ದುಗುಂಡುಗಳು, ₹81 ಸಾವಿರ ಮೌಲ್ಯದ 11 ಮೊಬೈಲ್ ಪೋನ್, ₹63,690 ನಗದು ಸೇರಿದಂತೆ ಒಟ್ಟು ₹11,45,190 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ವಿಚಾರಿಸಿದಾಗ, ಮಾದಕ ವಸ್ತುಗಳನ್ನು ಮುಂಬಯಿಯಿಂದ ತಂದು, ಕೇರಳ ಮತ್ತು ಇತರ ಕಡೆಗಳಲ್ಲಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿ ಟಿ.ಎಚ್.ರಿಯಾಜ್, ಕೇರಳ ರಾಜ್ಯದಲ್ಲಿ ಕುಖ್ಯಾತ ಆರೋಪಿಯಾಗಿದ್ದು, ಈತನ ವಿರುದ್ಧ ಸುಮಾರು 40 ಪ್ರಕರಣಗಳು ದಾಖಲಾಗಿವೆ. ಕೇರಳದ ಪಯಂಗಡಿ ಮತ್ತು ಬೇಕಲ ಠಾಣೆಗಳಲ್ಲಿ ವಾರೆಂಟ್‌ ಇದೆ.

ಇನ್ನೊಬ್ಬ ಆರೋಪಿ ಉಸ್ಮಾನ್ ರಫೀಕ್ ಯಾನೆ ತಲ್ಕಿ ರಫೀಕ್ ಸಹ ಕೇರಳ ಮತ್ತು ಕರ್ನಾಟಕದಲ್ಲಿ ಸುಮಾರು 7 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕೇರಳದ ಮಂಜೇಶ್ವರ ಠಾಣೆಯಲ್ಲಿ ಕೊಲೆ ಪ್ರಕರಣವಿದೆ. ಬೆಂಗಳೂರು ಸಂಜಯನಗರ ಪೊಲೀಸ್ ಠಾಣೆಯಲ್ಲಿ ಸುಮಾರು 4 ತಿಂಗಳ ಹಿಂದೆ ಅನಧಿಕೃತ ಪಿಸ್ತೂಲ್ ಹೊಂದಿದ ಬಗ್ಗೆ ಪ್ರಕರಣ ದಾಖಲಾಗಿದ್ದು, ಇತ್ತೀಚೆಗೆ ಜಾಮೀನು ಪಡೆದು ಹೊರಬಂದಿದ್ದ. ಇದೀಗ ಮತ್ತೊಂದು ಅನಧಿಕೃತ ಪಿಸ್ತೂಲ್ ಹಾಗೂ ಮದ್ದುಗುಂಡು ತುಂಬಿರುವ 2 ಮ್ಯಾಗ್ಸಿನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

3 ನೇ ಆರೋಪಿ ಅಬ್ದುಲ್ ರವೂಫ್‌ ವಿ.ಎಸ್., ವಶದಿಂದ ಒಂದು ನಾಡ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಈತನು ಟಿ.ಎಚ್. ರಿಯಾಜ್‌ನ ಮಾದಕ ವಸ್ತು ಮಾರಾಟ ಜಾಲದ ವ್ಯವಹಾರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. 4 ನೇ ಆರೋಪಿ ಇಮ್ತಿಯಾಜ್ ಅಹಮ್ಮದ್ ವಿರುದ್ಧ ಕೇರಳದ ಮಂಜೇಶ್ವರ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿವೆ. 5 ನೇ ಆರೋಪಿ ಹಜ್ವರ್, ಉಸ್ಮಾನ್ ರಫೀಕ್ ಯಾನೆ ತಲ್ಕಿ ರಫೀಕ್‌ನ ಸಹಚರನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಪೊಲೀಸ್ ಆಯುಕ್ತ ಟಿ.ಆರ್‌.ಸುರೇಶ್ ನಿರ್ದೇಶನದಂತೆ, ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್‌ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕೆ.ರಾಮರಾವ್ ನೇತೃತ್ವದಲ್ಲಿ ಮಂಗಳೂರು ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌ ಎಸ್.ಎಚ್. ಭಜಂತ್ರಿ, ಮಂಗಳೂರು ದಕ್ಷಿಣ ಉಪ-ವಿಭಾಗದ ರೌಡಿ ನಿಗ್ರಹ ದಳದ ಎಎಸ್ಐ ಮೋಹನ್‌ ಕೆ.ವಿ., ಸಿಬ್ಬಂದಿ ರಂಜನ್ ಎಂ.ಕೆ., ರಾಜಾರಾಮ ಕೂಟತ್ತಜೆ, ಮೊಹಮ್ಮದ್ ಶರೀಫ್‌, ರವಿಚಂದ್ರ, ಸುನೀಲ್ ಕುಮಾರ್, ದಾಮೋದರ, ಸುಧೀರ್ ಶೆಟ್ಟಿ, ಗಿರೀಶ್ ಸುವರ್ಣ, ದಯಾನಂದ, ರೆಜಿ ವಿ.ಎಂ., ಮಹೇಶ್ ಈ ಕಾರ್ಯಾಚರಣೆ ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !