ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದಕ ದ್ರವ್ಯ ಜಾಲದ ಹಿಂದೆ ಪೊಲೀಸ್ ಇಲಾಖೆಯ ಕೆಳ ಹಂತದ ಸಿಬ್ಬಂದಿಗಳು ಕೈಜೋಡಿಸಿರುವುದು ನನ್ನ ಗಮನಕ್ಕ ಬಂದಿದೆ. ಸಂಬಂಧಿಸಿದ ಸಿಬ್ಬಂದಿಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
‘ಜಿಲ್ಲೆಯ ಎಲ್ಲಾ ಪೊಲೀಸ್ ಸಿಬ್ಬಂದಿಯವರು ಪೊಲೀಸ್ ಮ್ಯಾನುವಲ್ ಮತ್ತು ಸಂವಿಧಾನಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸಬೇಕು. ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸೇರಿ ವಿಶೇಷ ಕಾರ್ಯಚಾರಣೆ ನಡೆಸಿ ಮಾದಕ ದ್ರವ್ಯ ಸೇವನೆಯ ಹಾವಳಿ ನಿಗ್ರಹಿಸಬೇಕು ಎಂದು ಸೂಚಿಸಿರುತ್ತೇನೆ’ ಎಂದು ಅವರು ಹೇಳಿದ್ದಾರೆ.
‘ಜಿಲ್ಲಾ ಉಸ್ತುವಾರಿ ಸಚಿವನಾದ ಬಳಿಕ ಜಿಲ್ಲೆಯ ಹಲವಾರು ರಾಜಕೀಯ ಸಾಮಾಜಿಕ, ಶೈಕ್ಷಣಿಕ ಮತ್ತು ಇತರ ಕ್ಷೇತ್ರದ ಪ್ರಮುಖರನ್ನು ಭೇಟಿ ಮಾಡಿದ್ದೇನೆ. ಅನೇಕ ಸಭೆಗಳನ್ನು ನಡೆಸಿದ್ದೇನೆ. ಜಿಲ್ಲೆಯಲ್ಲಿ ಮಾದಕ ದ್ರವ್ಯದ ಅಕ್ರಮ ಬಳಕೆ ಹಾಗೂ ಮತೀಯ ಗೂಂಡಾಗಿರಿ ಜಿಲ್ಲೆಯ ಶಾಂತಿ ಸುವ್ಯವಸ್ಥೆ ಮತ್ತು ಸಾಮರಸ್ಯ ಕದಡುವುದಕ್ಕೆ ಪ್ರಮುಖ ಕಾರಣ ಎಂಬುದು ಗಮನಕ್ಕೆ ಬಂದಿದೆ. ಇವುಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ನಗರ ಪೊಲೀಸ್ ಕಮೀಷನರ್ ಮತ್ತು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಜೊತೆ ಚರ್ಚಿಸಿದ್ದು ಜಿಲ್ಲೆಯ ಶಾಂತಿ ಸುವ್ಯವಸ್ಥೆ ಮತ್ತು ಸಾಮರಸ್ಯ ಕಾಪಾಡಲು ಜಿಲ್ಲಾಡಳಿತಕ್ಕೆ ಮತ್ತು ಪೊಲೀಸ್ ಇಲಾಖೆಗೆ ಕೆಲವು ಸೂಚನೆ ನೀಡಿದ್ದೇನೆ.’
‘ಮಾದಕ ದ್ರವ್ಯದ ಅಕ್ರಮ ಬಳಕೆ ತಡೆಯಲು ಪೊಲೀಸ್ ಇಲಾಖೆಯು ಜಿಲ್ಲಾಡಳಿತದೊಂದಿಗೆ ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸೇರಿ ಜಂಟಿ ಕಾರ್ಯಾಚರಣೆ ನಡೆಸಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಸರ್ಕಾರದ ಈ ಕ್ರಮಕ್ಕೆ ಮಕ್ಕಳ ಪೋಷಕರ ಸಹಕಾರ ನೀಡಬೇಕು. ಜಿಲ್ಲೆಯಲ್ಲಿ ಗೂಂಡಾಗಿರಿ ಹಾವಳಿಯನ್ನು ನಿಗ್ರಹಿಸಲು ಮತ್ತು ಮತೀಯ ಗೂಂಡಾಗಿರಿಯನ್ನು ಹತ್ತಿಕ್ಕಲು ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ಶಕ್ತಿಗಳು ಕಾನೂನು ಕೈಗೆತ್ತಿಕೊಂಡಲ್ಲಿ, ನಿರ್ದಾಕ್ಷಣ್ಯ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದೇನೆ.’
‘ಜಿಲ್ಲೆಯು ಮತ್ತಷ್ಟು ಅಭಿವೃದ್ಧಿ ಹೊಂದಲು ಹೇರಳ ಅವಕಾಶಗಳಿವೆ. ಜಿಲ್ಲೆಯ ಕಾನೂನು ಸುವ್ಯವಸ್ಥೆಯು ಇದಕ್ಕೆ ಸವಾಲಾಗಿದೆ. ಈ ನಿಟ್ಟಿನಲ್ಲಿ ನಿಷ್ಪಕ್ಷಪಾತವಾಗಿ ಕಾನೂನು ಕ್ರಮದ ಅಗತ್ಯವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.