ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಡಳಿತಕ್ಕೆ ದೂರು; ತನಿಖೆಗೆ ಒತ್ತಾಯ

ಕೌಕ್ರಾಡಿ: ಅಂಗವಿಕಲತೆ ಪರಿಗಣಿಸದೆ ಮನೆ ನೆಲಸಮ ಆರೋಪ
Last Updated 13 ಮೇ 2022, 2:33 IST
ಅಕ್ಷರ ಗಾತ್ರ

ನೆಲ್ಯಾಡಿ(ಉಪ್ಪಿನಂಗಡಿ): ‘ಮನೆಯಲ್ಲಿ ಅಂಗವಿಕಲ ವ್ಯಕ್ತಿ ವಾಸವಿದ್ದರೂ, ನಿರ್ದಯವಾಗಿ ಮನೆಯನ್ನು ಕೆಡವಿ ನಮ್ಮನ್ನು ನಿರ್ಗತಿಕರನ್ನಾಗಿ ಮಾಡ ಲಾಗಿದೆ’ ಎಂದು ಕಡಬ ತಾಲ್ಲೂಕಿನ ಕೌಕ್ರಾಡಿ ಗ್ರಾಮದ ಮೂಡುಬೈಲು ನಿವಾಸಿ ರೋಶನ್ ಡಿಸೋಜ ಅವರು ಜಿಲ್ಲಾಡಳಿತ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಕಚೇರಿಗೆ ದೂರು ನೀಡಿ, ನ್ಯಾಯ ಕೋರಿದ್ದಾರೆ.

‘ನನ್ನ ಹಿರಿಯರ ಲಗಾಯ್ತು ಸರ್ವೆ ನಂಬರ್‌ 138/1ರಲ್ಲಿನ 1.45 ಎಕರೆ ಭೂಮಿಯಲ್ಲಿ ಅನುಭವಿಸಿಕೊಂಡು ಬರುತ್ತಿದ್ದು, ಮನೆ ಮತ್ತು ಕೃಷಿ ಭೂಮಿಯ ಬಗ್ಗೆ ಅದರ ಮೂಲ ವಾರಸುದಾರರು ಬರಕೊಟ್ಟ ವೀಲುನಾಮೆಯ ಆಧಾರದಲ್ಲಿ ನಾವು ಮಾಲೀಕತ್ವವನ್ನು ಹೊಂದಿದ್ದೆವು. ಇದೀಗ ನಾನಿದ್ದ ಮನೆಯನ್ನು ಹಾಗೂ ಕೃಷಿ ಕೃತಾವಳಿಯನ್ನು ಜೆಸಿಬಿ ಮೂಲಕ ಕೆಡವಿ ಹಾನಿಗೊಳಿಸಿರುತ್ತಾರೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ಭೂಮಿಯು ನನ್ನ ಅಜ್ಜ ಭೂ ಸುಧಾ ರಣಾ ಕಾಯ್ದೆಯ ಅನುಸಾರ ಸಲ್ಲಿಸಿದ್ದ ಅರ್ಜಿಯಲ್ಲಿ ನಮೂದಿಸಲ್ಪಟ್ಟಿತ್ತಾದರೂ ಎಲ್ಆರ್‌ ವೈಟಿ ಫಾರಂ ನಂಬ್ರ 10ರಲ್ಲಿ ದಾಖಲಿಸುವಾಗ ಈ ಸರ್ವೆ ನಂಬರ್‌ ಕೈ ಬಿಟ್ಟಿದ್ದರು. ಅರ್ಜಿ ಸಲ್ಲಿಕೆಯ ವೇಳೆ ಸಲ್ಲಿಸುವ ಫಾರಂ ನಂಬರ್‌ 7ರಲ್ಲಿ ಈ ಸರ್ವೆ ನಂಬರ್‌ ಉಲ್ಲೇಖಿತವಾಗಿರುವಾಗ ಮತ್ತು ಭೂ ಮಾಲೀಕರ ಯಾವುದೇ ಆಕ್ಷೇಪಣೆಯೂ ದಾಖಲಾಗದೇ ಇರುವಾಗ ಸದ್ರಿ ಸರ್ವೆ ನಂಬರ್‌ ಕೈ ಬಿಟ್ಟಿರುವುದೇ ಅಂದಿನ ಪ್ರಮುಖ ಲೋಪವಾಗಿದೆ. ಈ ಸೂಕ್ಷ್ಮತೆಯ ನಡುವೆ ಭೂ ಮಾಲೀಕರ ವಿಲುನಾಮೆ ಬರೆಯಿಸಿಕೊಂಡ ವ್ಯಕ್ತಿಯು ಹಣ ಬಲದ ನೆಲೆಯಲ್ಲಿ ಏಕಾಏಕಿ ಜೆಸಿಬಿ ತಂದು ಮನೆಯಲ್ಲಿದ್ದ ತಾಯಿಯನ್ನು ಹೊರಗಟ್ಟಿ ನಮ್ಮನ್ನು ನಿರ್ಗತಿಕರನ್ನಾಗಿಸಿದ್ದಾರೆ’ ಎಂದು ಸಹೋದರನ ಮನೆಯಲ್ಲಿ ಆಶ್ರಯ ಪಡೆದಿರುವ ರೋಶನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಹಾಯಕ್ಕೆ ಬರಲಿಲ್ಲ: ಜೆಸಿಬಿ ಮೂಲಕ ಮನೆ ಕೆಡವುತ್ತಿದ್ದಾಗ ಸಹಾಯ ಬಯಸಿ ಪೊಲೀಸ್ ಇಲಾಖೆಯನ್ನು ಹಾಗೂ ಕಂದಾಯ ಇಲಾಖಾಧಿಕಾರಿಗಳನ್ನು ಸಂಪರ್ಕಿಸಿದ್ದೆ. ಆದರೆ, ಅವರಿಂದ ಸ್ಪಂದನ ದೊರೆಯಲಿಲ್ಲ. ಈ ಮಧ್ಯೆ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿಯ
ಮಧ್ಯ ಪ್ರವೇಶದ ಬಳಿಕ ಪೊಲೀಸ್ ಇಲಾಖೆಯ ಡಿವೈಎಸ್ಪಿ, ಕಡಬ ವಿಶೇಷ ತಹಶೀಲ್ದಾರ್, ಪೊಲೀಸ್ ಸರ್ಕಲ್‌ ಇನ್‌ಸ್ಪೆಕ್ಟರ್‌ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂದು ರೋಶನ್ ತಿಳಿಸಿದ್ದಾರೆ.

ನೆಲಸಮ ಮಾಡಿದ್ದು ಅಪರಾಧ: ‘ಅದೆಷ್ಟೋ ವರ್ಷಗಳಿಂದ ಸ್ವಾಧೀನ ಇರುವ ಮತ್ತು ಅಂಗವಿಲಕತೆ ಇರುವ ವ್ಯಕ್ತಿ ವಾಸವಾಗಿರುವಾಗ ಅಮಾನವೀಯವಾಗಿ ವರ್ತಿಸಿ ಮನೆಯನ್ನು ಕೆಡವಿ ನೆಲಸಮ ಮಾಡಿರುವುದು ಅಪರಾಧವಾಗುತ್ತದೆ. ಪ್ರಕರಣದಲ್ಲಿನ ಸತ್ಯಾಂಶ ತಿಳಿಯುವ ತನಕವಾದರೂ ಮನೆ ಕೆಡವುವ ಕೃತ್ಯವನ್ನು ಪೊಲೀಸರು ತಡೆಯಬಹುದಿತ್ತು. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು, ಆ ಕುಟುಂಬಕ್ಕೆ ನ್ಯಾಯ ದೊರಕುವಂತಾಗಬೇಕು’ ಎಂದು ಕರ್ನಾಟಕ ರಾಜ್ಯ ವಿಕಲಚೇತನ ರಕ್ಷಣಾ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT