‘ಬಹುಸಂಖ್ಯಾತರ ರಾಜಕೀಯ ದಬ್ಬಾಳಿಕೆಯೇ ಕೋಮುವಾದ’

7
ಹಂಪಿ ಕನ್ನಡ ವಿ.ವಿ. ಪ್ರಾಧ್ಯಾಪಕ ಪ್ರೊ.ರಹಮತ್ ತರೀಕೆರೆ

‘ಬಹುಸಂಖ್ಯಾತರ ರಾಜಕೀಯ ದಬ್ಬಾಳಿಕೆಯೇ ಕೋಮುವಾದ’

Published:
Updated:
Deccan Herald

ಮಂಗಳೂರು: ‘ಬಹುಸಂಖ್ಯಾತರ ರಾಜಕೀಯ ಯಜಮಾನಿಕೆಯ ದಬ್ಬಾಳಿಕೆಯ ಭಾಗವಾಗಿ ಕೋಮುವಾದ ಹುಟ್ಟಿಕೊಳ್ಳುತ್ತದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಸಂಸ್ಕೃತಿ ಚಿಂತಕ ಪ್ರೊ.ರಹಮತ್ ತರೀಕೆರೆ ಹೇಳಿದರು.

‘ಕೋಶ ಓದು– ದೇಶ ನೋಡು’ ಬಳಗವು ದೇಶ ವಿಭಜನೆಯ ಸಂದರ್ಭದ ಸಾಹಿತ್ಯದ ಓದು ಅಭಿಯಾನದ ಸಮಾರೋಪದ ಪ್ರಯುಕ್ತ ಇಲ್ಲಿನ ಶಕ್ತಿನಗರದ ಕಲಾಂಗಣ್‌ನಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ಸಂವಾದ ಮತ್ತು ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

‘ಧರ್ಮದ ಹೆಸರಿನಲ್ಲಿ ಕೋಮುವಾದದ ಕೇಡಿಗೆ ಅಡಿಪಾಯ ಹಾಕಲಾಗುತ್ತಿದೆ. ಒಂದು ಸಮುದಾಯ ಅಥವಾ ಧರ್ಮದ ಜನರ ವಿರುದ್ಧ ಸಿದ್ಧವಾದ ಗ್ರಹಿಕೆಗಳ ಮೂಲಕ ಮಾತನಾಡುತ್ತಾ ಅವರನ್ನು ಇತರರಿಂದ ದೂರ ಸರಿಸುವ ಪ್ರಯತ್ನ ಮಾಡಲಾಗುತ್ತದೆ. ಕೊಲ್ಲುವವನು ಕೂಡ ಕಾಪಾಡುವವನ ಭಾಷೆಯಲ್ಲೇ ಮಾತನಾಡುತ್ತಿರುತ್ತಾನೆ. ಕೋಮುವಾದವನ್ನು ಮೂಲೋತ್ಪಾಟನೆ ಮಾಡಲು ವಿಭಿನ್ನವಾದ ಪ್ರಯತ್ನಗಳು ಅಗತ್ಯ’ ಎಂದರು.

ವಿಚಾರವಾದಕ್ಕೆ ಸಮುದಾಯದ ಬಗ್ಗೆ ಕಾಳಜಿಯಿದ್ದರೂ ಅದು ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ವಿಚಾರವಾದಿಗಳು ತಮ್ಮ ಮಾತುಗಳನ್ನು ಹೊಸ ಭಾಷೆಯಲ್ಲಿ, ಹೊಸ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಕಟ್ಟಿಕೊಳ್ಳಬೇಕಿದೆ. ಸಾಹಿತ್ಯ ಕೃತಿಗಳ ಓದಿನ ಮೂಲಕ ರಾಜಕೀಯ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಇಂತಹ ಪ್ರಯತ್ನ ಶ್ಲಾಘನೀಯ. ಸುತ್ತಲಿನ ಸಮಾಜದ ಗ್ರಹಿಕೆ ಮತ್ತು ವಿಸ್ತಾರವಾದ ಓದಿನ ಮೂಲಕ ದೇಶವನ್ನು ಕಾಣುವುದು ಸಾಧ್ಯವಾಗಬೇಕು ಎಂದು ಹೇಳಿದರು.

ಶ್ರೇಷ್ಠತೆಯ ವ್ಯಸನ ಬಿತ್ತಲಾಗುತ್ತಿದೆ:

ಎರಡು ದಿನಗಳ ಕಾಲ ನಡೆದ ಸಂವಾದ, ಚರ್ಚೆಗೆ ಪ್ರತಿಕ್ರಿಯಿಸಿದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ‘ಫ್ಯಾಸಿಸ್ಟ್‌ ಶಕ್ತಿಗಳು ತಮ್ಮ ಧರ್ಮವೇ ಶ್ರೇಷ್ಠ ಎಂಬ ವ್ಯಸನವನ್ನು ಬಿತ್ತುವ ಮೂಲಕ ಕೋಮುವಾದದ ನೆಲೆಯನ್ನು ವಿಸ್ತರಿಸುತ್ತಿವೆ. ಇದಕ್ಕಾಗಿ ಕಟ್ಟುಕತೆಗಳನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ. ಎದುರಿನಲ್ಲಿ ಇರುವ ಬೇರೊಂದು ಧರ್ಮದ ಜನರನ್ನು ಶತ್ರುಗಳೆಂದು ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದರು.

ಹಿಂದೂ ಮತ್ತು ಇಸ್ಲಾಂ ಧರ್ಮದಲ್ಲಿ ತಮ್ಮೊಳಗಿನ ಉದಾರವಾದಿ ನಾಯಕರಿಗೆ ಬೆಂಬಲ ವ್ಯಕ್ತವಾಗುವುದು ಕಡಿಮೆ. ಎರಡೂ ಧರ್ಮದಲ್ಲಿನ ಕೋಮುವಾದಿಗಳು ಪರಸ್ಪರ ದ್ವೇಷಿಸಿಕೊಳ್ಳುವುದಿಲ್ಲ. ಆಂತರಿಕವಾಗಿ ಇಬ್ಬರ ನಡುವೆ ಸ್ನೇಹ ಇರುವುದನ್ನು ಕಾಣಬಹುದು. ಅವರಿಗೆ ಯಾವತ್ತೂ ತಮ್ಮೊಳಗಿನ ಉದಾರವಾದಿ ನಾಯಕರೇ ಶತ್ರುಗಳಾಗಿರುತ್ತಾರೆ ಎಂದು ಹೇಳಿದರು.

ಸಂವಿಧಾನದ ಮೇಲಿನ ದಾಳಿ ಕೂಡ ಕೋಮುವಾದಿ ರಾಜಕಾರಣದ ಭಾಗ. ಮೀಸಲಾತಿಯನ್ನು ವಿರೋಧಿಸುವುದು ಕೂಡ ಅದರಲ್ಲಿ ಸೇರಿದೆ. ಧರ್ಮದಿಂದ ದೂರ ಇದ್ದು ಕೋಮುವಾದವನ್ನು ಎದುರಿಸಲು ಸಾಧ್ಯವಿಲ್ಲ. ಸ್ವಾಮಿ ವಿವೇಕಾನಂದ, ಭಗತ್‌ ಸಿಂಗ್‌, ಗೌತಮ ಬುದ್ಧ, ಬಸವಣ್ಣ, ಮಹಾತ್ಮ ಗಾಂಧಿ, ಡಾ.ಬಿ.ಆರ್‌.ಅಂಬೇಡ್ಕರ್‌ ಎಲ್ಲರನ್ನೂ ಸ್ವೀಕರಿಸಿ, ಅವರ ಮೂಲಕ ಕೋಮುವಾದವನ್ನು ವಿಫಲಗೊಳಿಸಬೇಕು. ಇದಕ್ಕಾಗಿ ಜಾತ್ಯತೀತ ರಾಜಕೀಯ ತತ್ವವನ್ನು ಬೆಂಬಲಿಸುವ ಎಲ್ಲರೂ ತಮ್ಮ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಒಗ್ಗೂಡುವುದು ಈಗಿನ ತುರ್ತು ಎಂದು ತಿಳಿಸಿದರು.

ಕ್ರಮ ಬದಲಾಗಬೇಕು:

‘ಧರ್ಮ ಮತ್ತು ಇತಿಹಾಸವನ್ನು ಅರಿಯುವ ಕ್ರಮ ಬದಲಾಗಬೇಕು. ಹಿಂದೂ ಧರ್ಮವನ್ನು ಸಾವರ್ಕರ್ ಮೂಲಕ ನೋಡುವ ಬದಲಿಗೆ ಮಹಾತ್ಮ ಗಾಂಧಿ ಮೂಲಕ ನೋಡಬೇಕು. ಇಸ್ಲಾಂ ಧರ್ಮವನ್ನು ಔರಂಗಜೇಬ್ ಬದಲಿಗೆ ಅಕ್ಬರ್ ಮೂಲಕ ನೋಡಬೇಕು. ಉತ್ತರ ಪ್ರದೇಶವನ್ನು ಯೋಗಿ ಆದಿತ್ಯನಾಥ್‌ ಮೂಲಕ ನೋಡುವ ಬದಲಿಗೆ ಅಲ್ಲಿಯ ಜನಸಾಮಾನ್ಯರ ಮೂಲಕ ಅರಿಯುವ ಪ್ರಯತ್ನ ಆಗಬೇಕು’ ಎಂದು ಹೇಳಿದರು.

ಡಾ.ಕಿರಣ್‌ ಗಾಜನೂರು, ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ವೇದಿಕೆಯಲ್ಲಿದ್ದರು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಹಲವರು ಎರಡು ದಿನಗಳ ಸಂವಾದ, ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !