ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಮಾಲಿನ್ಯ: 15 ಫಿಷ್‌ಮಿಲ್‌ಗಳಿಗೆ ಬೀಗ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶ
Last Updated 17 ಆಗಸ್ಟ್ 2022, 15:39 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಂತೆ ನಗರದ ಹೊರವಲಯದಲ್ಲಿರುವ 15 ಫಿಷ್‌ಮಿಲ್‌ಗಳನ್ನು ಜಿಲ್ಲಾಡಳಿತ ಬಂದ್ ಮಾಡಿದೆ.

ಫಿಷ್‌ಮಿಲ್‌ಗಳಿಂದ ಗಬ್ಬು ವಾಸನೆ ಹೊರಸೂಸುವ ಜತೆಗೆ, ಪರಿಸರ ಮಾಲಿನ್ಯ ಆಗುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಈ ಹಿಂದಿನಿಂದಲೂ ದೂರು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ಕಳೆದ ಏಪ್ರಿಲ್‌ನಲ್ಲಿ ಫಿಷ್‌ಮಿಲ್‌ಗಳಿಗೆ ನೋಟಿಸ್ ಜಾರಿಗೊಳಿಸಿತ್ತು. ಬಯೊ ಫಿಲ್ಟರ್ ಯಂತ್ರ ಅಳವಡಿಸಿ, ತ್ಯಾಜ್ಯ ನೀರನ್ನು ಶುದ್ಧೀಕರಿಸಿ, ಸಮುದ್ರಕ್ಕೆ ಬಿಡಲು ಸೂಚಿಸಿತ್ತು. ಅಲ್ಲದೆ, ಕೆಲವು ಫಿಷ್‌ಮಿಲ್‌ಗಳು ಸಿಆರ್‌ಝಡ್ ನಿಯಮ ಪಾಲನೆ ಮಾಡದಿರುವುದನ್ನು ಉಲ್ಲೇಖಿಸಲಾಗಿತ್ತು. ಆದರೆ, ಫಿಷ್‌ಮಿಲ್‌ಗಳು ಕ್ರಮವಹಿಸದ ಕಾರಣ ಮಾಲಿನ್ಯ ನಿಯಂತ್ರಣ ಮಂಡಳಿಯು ಸ್ಥಗಿತಕ್ಕೆ ಆದೇಶ ಮಾಡಿದೆ ಎಂದು ಮೂಲಗಳು ತಿಳಿಸಿವೆ.

‘15 ಫಿಷ್‌ಮಿಲ್‌ಗಳ ಸ್ಥಗಿತಕ್ಕೆ ಕಳೆದ ಶನಿವಾರವೇ ಆದೇಶವಾಗಿದೆ. ಫಿಷ್‌ಮಿಲ್‌ಗಳ ಸ್ಥಗಿತದಿಂದ ಮೀನುಗಾರರಿಗೆ ತೊಂದರೆಯಾಗುತ್ತಿದೆ ಎಂದು ಮೀನುಗಾರರ ಮುಖಂಡರು ಭೇಟಿ ಮಾಡಿ ವಿನಂತಿಸಿದ್ದಾರೆ. ಈ ಸಂಬಂಧ ಚರ್ಚಿಸಲು ಆ.19ರಂದು ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ವಿಷಯ ಚರ್ಚಿಸಿದ ನಂತರ, ಫಿಷ್‌ಮಿಲ್‌ಗಳ ಮಾಲೀಕರು ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಭರವಸೆ ನೀಡಿದರೆ, ಮೀನುಗಾರರ ಹಿತದೃಷ್ಟಿಯಿಂದ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆಯಲು ಪರಿಶೀಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮಾರ್ಗಗಳು ಏನು?: ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದ ವಿರುದ್ಧ ಫಿಷ್‌ಮಿಲ್ ಮಾಲೀಕರು ಹೈಕೋರ್ಟ್‌ ಮೆಟ್ಟಿಲೇರಬಹುದು ಅಥವಾ ಎಲ್ಲ ಪರಿಸರ ಪೂರಕ ಕ್ರಮಗಳನ್ನು ಕೈಗೊಂಡು, ಯಾವುದೇ ರೀತಿಯ ಮಾಲಿನ್ಯ ಆಗದಂತೆ ಎಚ್ಚರವಹಿಸಿ, ಜಿಲ್ಲಾಡಳಿತಕ್ಕೆ ವಿನಂತಿ ಪತ್ರ ಸಲ್ಲಿಸಬಹುದು.

ಮಲೇಷ್ಯಾ, ದುಬೈ ಮೊದಲಾದ ಕಡೆಗಳಲ್ಲಿ ಫಿಷ್‌ಮಿಲ್‌ಗಳು ಕಾರ್ಯಾಚರಿಸುತ್ತಿವೆ. ಆದರೆ, ಅಲ್ಲಿ ಯಾವುದೇ ದೂರುಗಳಿಲ್ಲ. ಅಲ್ಲಿನ ಫಿಷ್‌ಮಿಲ್‌ಗಳು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ತ್ಯಾಜ್ಯ ನೀರನ್ನು ಶುದ್ಧೀಕರಿಸಿ, ಸಮುದ್ರಕ್ಕೆ ಬಿಡುತ್ತವೆ. ಇದರಿಂದ ಮಾಲಿನ್ಯ ನಿಯಂತ್ರಣದ ಜತೆಗೆ, ಸುತ್ತಮುತ್ತಲಿನ ಪರಿಸರದಲ್ಲಿ ವಾಸನೆ ಹರಡುವುದಿಲ್ಲ. ಇಂತಹ ಕ್ರಮಗಳು ಇಲ್ಲಿನ ಫಿಷ್‌ಮಿಲ್‌ಗಳಿಂದ ಆಗಬೇಕು ಎನ್ನುತ್ತಾರೆ ಸ್ಥಳೀಯರು.

ಮೀನುಗಾರರಿಗೆ ತೊಂದರೆ: ಮೀನುಗಾರಿಕೆಯಲ್ಲಿ ತಿನ್ನುವ ಮೀನಿನ ಜತೆಗೆ ತಿನ್ನಲು ಯೋಗ್ಯವಲ್ಲದ ಮೀನುಗಳು ಕೂಡ ಸಿಗುತ್ತವೆ. ಅಂತಹ ಮೀನುಗಳನ್ನು ಫಿಷ್‌ಮಿಲ್‌ಗೆ ಕೊಡಲಾಗುತ್ತದೆ. ಮೀಟ್‌ಗೆ ಬಳಕೆಯಾಗುವ ರಾಣಿ ಮೀನುಗಳು ಉಳಿಕೆ ಕೂಡ ಫಿಷ್‌ಮಿಲ್‌ಗಳಿಗೆ ಪೂರೈಕೆಯಾಗುತ್ತದೆ. ಈಗ ಮಿಲ್ ಬಂದಾಗಿರುವ ಕಾರಣ, ರಾಣಿ ಮೀನಿನ ಉಳಿಕೆಯ ವೆಚ್ಚವನ್ನು ಬೋಟ್‌ನವರೇ ಭರಿಸಬೇಕಾಗಿದೆ ಎನ್ನುತ್ತಾರೆ ಮಂಗಳೂರು ಟ್ರಾಲ್‌ಬೋಟ್‌ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ನಿತಿನ್‌ಕುಮಾರ್.

ಮೀನುಗಾರರು ಬಹಳ ವರ್ಷಗಳಿಂದ ಫಿಷ್‌ಮಿಲ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಇಲ್ಲಿ ಆಳ ಸಮುದ್ರ ಮೀನುಗಾರಿಕೆ ಹೋಗುವ ಬೋಟ್‌ಗಳು 1,000ಕ್ಕೂ ಹೆಚ್ಚು ಇವೆ. ದಿನಕ್ಕೆ ಸರಾಸರಿ 150ರಷ್ಟು ಬೋಟ್‌ಗಳು ದಡಕ್ಕೆ ಬರುತ್ತವೆ. ಮಿಲ್‌ ಸ್ಥಗಿತಗೊಂಡಿದ್ದರಿಂದ ದಿನಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಮಲ್ಪೆ, ಉದ್ಯಾವರದಲ್ಲಿ ಫಿಷ್‌ಮಿಲ್‌ಗಳು ಇವೆ. ಇಲ್ಲಿನ ವೇಸ್ಟ್ ಮೀನನ್ನು ಅಲ್ಲಿಗೇ ಕೊಂಡೊಯ್ಯುತ್ತಿರುವುದರಿಂದ ಬೇಡಿಕೆಗಿಂತ ಪೂರೈಕೆ ಹೆಚ್ಚಾಗಿ, ಕೆ.ಜಿ.ಯೊಂದಕ್ಕೆ ಸರಾಸರಿ ₹ 18 ಸಿಗುತ್ತಿದ್ದ ದರ ಈಗ ₹ 12ರಿಂದ ₹ 14ರಷ್ಟಕ್ಕೆ ಇಳಿಕೆಯಾಗಿದೆಎಂದುಅವರುವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT