ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಜಲ, ವಾಯು, ಪರಿಸರ ಮಾಲಿನ್ಯ; ಥರ್ಡ್ ಪಾರ್ಟಿ ಸಮೀಕ್ಷೆಗೆ ಶಿಫಾರಸು

ವಿಧಾನ ಪರಿಷತ್‍ನ ಬಾಕಿ ಭರವಸೆಗಳ ಸಮಿತಿ ನಿರ್ಧಾರ
Last Updated 5 ಮೇ 2022, 13:20 IST
ಅಕ್ಷರ ಗಾತ್ರ

ಮಂಗಳೂರು: ನಗರದ ಎಸ್‌ಇಝಡ್ ಪ್ರದೇಶದಲ್ಲಿರುವ ಕೈಗಾರಿಕೆಗಳಿಂದ ಆಗುತ್ತಿರುವ ಮಾಲಿನ್ಯದ ಪರಿಣಾಮಗಳ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು, ಈ ಸಂಬಂಧ ಜಲ, ವಾಯು, ಪರಿಸರದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದ ಥರ್ಡ್ ಪಾರ್ಟಿ ಅಧ್ಯಯನ ನಡೆಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲು ವಿಧಾನ ಪರಿಷತ್‍ನ ಬಾಕಿ ಭರವಸೆಗಳ ಸಮಿತಿ ನಿರ್ಧರಿಸಿದೆ.

ಜಿಲ್ಲೆಯಲ್ಲಿ ಎರಡು ದಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ, ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಬಿ.ಎಂ.ಫಾರೂಕ್ ಅವರು, ‘ಎಂಆರ್‌ಪಿಎಲ್, ಎಂಎಸ್‍ಇಝೆಡ್, ಬಿಎಸ್‍ಎಫ್, ಐಎಸ್‍ಪಿಆರ್‌ ಮೊದಲಾದ ಕೈಗಾರಿಕೆಗಳಿಂದ ಪರಿಸರ ಮಾಲಿನ್ಯ ಆಗುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಕುಡುಂಬೂರು ನದಿ ಸಂಪೂರ್ಣ ಕಲುಷಿತಗೊಂಡಿದ್ದು, ನೀರಿನ ಬಣ್ಣ ಬದಲಾಗಿದೆ. ಈ ಭಾಗದಲ್ಲಿ ಲಭ್ಯವಾಗುತ್ತಿದ್ದ ಹಿರ್ಪೆ, ಕುರುಡಿ ಮೀನು ಸಂತತಿ ನಾಶವಾಗಿದೆ. ಈ ಮೀನು ಸಂತತಿ ಪುನಃ ಬೆಳೆಸಲು ಮೀನುಗಾರಿಕಾ ಇಲಾಖೆಗೆ ಸೂಚಿಸಲಾಗಿದೆ. ಜಲ ಮಾಲಿನ್ಯ, ಕೈಗಾರಿಕೆಗಳ ಸುತ್ತಲಿನ ವಸತಿ ಪ್ರದೇಶಗಳ ಬಾವಿಗಳಲ್ಲಿ ತೈಲ ಮಿಶ್ರಿತ ನೀರು ಕಂಡುಬಂದಿದೆ. ಸುರತ್ಕಲ್ ಭಾಗದಲ್ಲಿ ದುರ್ವಾಸನೆಯೂ ಹೆಚ್ಚಾಗಿದೆ’ ಎಂದರು.

ಫಲ್ಗುಣಿ ನದಿ ತಟದಲ್ಲಿ ಎಂಎಸ್‍ಇಝಡ್, ಎಂಆರ್‌ಪಿಎಲ್ ರಸ್ತೆಯ ಪಕ್ಕದಲ್ಲಿ ಬೃಹತ್ ಪೈಪ್‍ಲೈನ್‍ಗಳು ಹಾದುಹೋಗಿವೆ. ಇಲ್ಲಿ ರಸ್ತೆ ಕಿರಿದಾಗಿರುವುದರಿಂದ ಸಮೀಪದ ಕುದುರೆಮುಖ ಕಬ್ಬಿಣ ಅದಿರು ಕಂಪನಿಯಿಂದ ಜಾಗ ಪಡೆದು, ರಸ್ತೆ ವಿಸ್ತರಣೆ ಮಾಡುವ ಜತೆಗೆ, ಹಾಲಿ ಇರುವ ರಸ್ತೆಯನ್ನು ಏಕಮುಖ ಸಂಚಾರಕ್ಕೆ ಸೀಮಿತಗೊಳಿಸಬೇಕೆಂಬ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಲಾಗಿದೆ ಎಂದು ಹೇಳಿದರು.

ತುರ್ತು ಸಂದರ್ಭದಲ್ಲಿ ತೈಲ ಪೂರೈಕೆಗೆ ಅನುವಾಗುವ ತೈಲ ಸಂಗ್ರಹಾಗಾರಗಳು ಪಾದೂರು ಮತ್ತು ಬಜ್ಪೆಯಲ್ಲಿದ್ದು, ಇದು ಯಾವತ್ತಿಗೂ ಅಪಾಯಕ್ಕೆ ಕಾರಣವಾಗಬಹುದು. ಭೂಗರ್ಭದಲ್ಲಿ ಶೇಖರಿಸಿಡಲಾಗುವ ತೈಲವು ಜಲಮೂಲಗಳಿಗೆ ಸೇರುವುದರಿಂದ ಸುತ್ತಮುತ್ತಲಿನ ಬಾವಿ, ಬೋರ್‌ವೆಲ್ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈಗಾಗಲೇ ಕರಾವಳಿ ಅಪಾಯದಲ್ಲಿರುವುದರಿಂದ ಇಲ್ಲಿನ ಧಾರಣ ಸಾಮರ್ಥ್ಯದ ಬಗ್ಗೆ ಇನ್ನೊಮ್ಮೆ ಸಮೀಕ್ಷೆ ನಡೆಯಬೇಕಾಗಿದೆ. ಈ ಅಧ್ಯಯನದ ವೆಚ್ಚವನ್ನು ಎಂಆರ್‌ಪಿಎಲ್ ಮತ್ತಿತರ ಕೈಗಾರಿಕೆಗಳೇ ಭರಿಸಬೇಕು. ಜಿಲ್ಲಾಡಳಿತದ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಮಟ್ಟದ ಅಧ್ಯಯನ ನಡೆಯಬೇಕು ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಫಾರೂಕ್ ತಿಳಿಸಿದರು.

‘ಎಡಿಬಿ ಯೋಜನೆಯಡಿ ₹ 911 ಕೋಟಿ ವೆಚ್ಚದಲ್ಲಿ ಕಡಲ್ಕೊರೆತ ತಡೆಗೆ ಕಾಮಗಾರಿ ನಡೆಸಲಾಗಿದೆ. 2021ರಲ್ಲಿ ಸಮುದ್ರದ ನಡುವಿನ ಅಲೆಗಳನ್ನು ತಡೆಯಲು ರೀಫ್ ಅಳವಡಿಸಲಾಗಿದೆ. ಸಿಆರ್‌ಝಡ್ ಪ್ರದೇಶದಲ್ಲಿ ನದಿ ಹಾಗೂ ಸಮುದ್ರದಲ್ಲಿ ಮರಳು ತೆಗೆಯುವುದನ್ನು ಕಡಲ್ಕೊರೆತ ಕಡಿಮೆಯಾಗಬಹುದು. ಈ ಕಾರಣ ಸಿಆರ್‌ಝಡ್ ಹೊರತಾದ ಪ್ರದೇಶದಲ್ಲಿ ಮಾತ್ರ ಮರಳು ತೆಗೆಯಲು ಅವಕಾಶ ನೀಡಬೇಕು. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಕಾಮಗಾರಿ ಪೂರ್ಣಗೊಂಡರೂ ಆರಂಭವಾಗದ ಉಳ್ಳಾಲದ ಒಳಚರಂಡಿ ಸಂಸ್ಕರಣಾ ಘಟಕಗಳಿಗೂ ಸಮಿತಿ ಭೇಟಿ ನೀಡಿ ಪರಿಶೀಲಿಸಿದೆ ಎಂದು ವಿವರಿಸಿದರು.

ಕೈಗಾರಿಕೆಗಳ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ, ಮಾಲಿನ್ಯ ಉಂಟಾಗಿರುವುದನ್ನು ನಾವೇ ಕಂಡಿದ್ದೇವೆ. ಆದರೆ, ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಕೇಳಿದರೆ, ಅವರು ನಿರಂತರ ತಪಾಸಣೆ ನಡೆಸಿ ವರದಿ ನೀಡುತ್ತಿರುವುದಾಗಿ ಹೇಳುತ್ತಿದ್ದಾರೆ. ಈ ಕಾರಣಕ್ಕಾಗಿ ಪಾರದರ್ಶಕ ಸಮೀಕ್ಷೆ ನಡೆಸಲು ಅಂತರರಾಷ್ಟ್ರೀಯ ಮಟ್ಟದ ಅಧ್ಯಯನಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ಸಮಿತಿ ಸದಸ್ಯ ಎಸ್‌.ವಿ.ಸಂಕನೂರ ಪ್ರತಿಕ್ರಿಯಿಸಿದರು.

ಸಮಿತಿ ಸದಸ್ಯರಾದ ಯು.ಬಿ. ವೆಂಕಟೇಶ್, ಕೆ.ಟಿ. ಶ್ರೀಕಂಠೇಗೌಡ, ಡಾ. ಮಂಜುನಾಥ ಭಂಡಾರಿ, ಶಶಿಲ್ ನಮೋಶಿ, ಎಸ್. ರುದ್ರೇಗೌಡ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್, ಪಶು ಸಂಗೋಪನಾ ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ. ಫಹೀಮ್, ಕೆಯುಐಡಿಎಫ್‍ಸಿ ವ್ಯವಸ್ಥಾಪನಾ ನಿರ್ದೇಶಕಿ ಎಂ. ದೀಪಾ, ಪರಿಸರ ಮತ್ತು ಜೀವ ಪರಿಸ್ಥಿತಿ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಜಯಮೋಹನ ರಾಜ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಇದ್ದರು.

‘ಹೆಚ್ಚುತ್ತಿರುವ ಕ್ಯಾನ್ಸರ್ ಕಾಯಿಲೆ’
ಕಾಟಿಪಳ್ಳ, ಬಜ್ಪೆ, ಸುರತ್ಕಲ್, ಜೋಕಟ್ಟೆ ಮೊದಲಾದ ಪ್ರದೇಶಗಳಲ್ಲಿ ಕ್ಯಾನ್ಸರ್‌, ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಗಳು, ಚರ್ಮ ಕಾಯಿಲೆಗಳು ಹೆಚ್ಚುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮಾಹಿತಿ ಸಂಗ್ರಹಿಸಿದಾಗ ಇದು ನಿಜವಾಗಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ವರದಿ ಸಿದ್ಧಪಡಿಸಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಬಿ.ಎಂ.ಫಾರೂಕ್ ತಿಳಿಸಿದರು.

ನಿಲ್ಲದ ಕಡಲ್ಕೊರೆತ: ಆತಂಕ
ಕಡಲ್ಕೊರೆತ ತಡೆಗೆ ಹಾಕಿರುವ ಕಲ್ಲುಗಳು, ಸಮುದ್ರದ ನಡುವಿನ ಅಲೆಗಳ ತಡೆಗೆ ಹಾಕಿರುವ ರೀಫ್‌ ಪ್ರಯೋಜನವಾಗುತ್ತಿಲ್ಲ. ಮೀನುಗಾರಿಕಾ ಬಲೆಗಳನ್ನು ಇಡಲು ನಿರ್ಮಿಸಿರುವ ಶೆಡ್‌ ಕೂಡ ಸಮುದ್ರ ಪಾಲಾಗಿದೆ ಎಂದುಸೋಮೇಶ್ವರ ಉಚ್ಚಿಲ ಪ್ರದೇಶಕ್ಕೆ ವಿಧಾನ ಪರಿಷತ್‌ನ ಬಾಕಿ ಭರವಸೆಗಳ ಸಮಿತಿ ಭೇಟಿ ನೀಡಿದ ವೇಳೆ ಸ್ಥಳೀಯರು ಅಳಲು ಹೇಳಿಕೊಂಡರು.

ಸಮುದ್ರ ತೀರದಲ್ಲಿ ಮರಗಳನ್ನು ಬೆಳೆಸಿದರೆ ಬಹುಮಟ್ಟಿಗೆ ಕಡಲ್ಕೊರೆತ ತಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಸಮಿತಿಗೆ ತಿಳಿಸಿದಾಗ, ಇಷ್ಟು ವರ್ಷಗಳಿಂದ ಕಡಲ್ಕೊರೆತ ತಡೆಗೆ ಎಷ್ಟು ಹಣ ವಿನಿಯೋಗಿಸಲಾಗಿದೆ. ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವಂತೆ ಸಮಿತಿ ಅಧ್ಯಕ್ಷ ಬಿ.ಎಂ. ಫಾರೂಕ್ ಸೂಚಿಸಿದರು.

ಉಳ್ಳಾಲದ ಎಸ್‌ಟಿಪಿಗೆ (ಒಳಚರಂಡಿ ಸಂಸ್ಕರಣಾ ಘಟಕ) ತಂಡ ಭೇಟಿ ನೀಡಿದ ವೇಳೆ ಸ್ಥಳೀಯರು ಅಲ್ಲಿನ ಒಳಚರಂಡಿ ವ್ಯವಸ್ಥೆ ಬಗ್ಗೆ ಗಮನಸೆಳೆದರು. 30 ವರ್ಷಗಳಾದರೂ ಇನ್ನೂ ಇಲ್ಲಿನ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಎಸ್‌ಟಿಪಿ ಭೂಗತವಾಗಿ ಸ್ಥಾಪನೆಯಾಗಬೇಕು. ಆದರೆ ಇಲ್ಲಿ ನೆಲದ ಮೇಲೆಯೇ ಅಳವಡಿಸಲಾಗಿದೆ. ಇದರಿಂದ ಸಮುದ್ರ ತೀರದಲ್ಲಿ ಇರುವ ಈ ಪ್ರದೇಶಕ್ಕೆ ತೊಂದರೆಯಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT