ಸಾಮೂಹಿಕ ಪ್ರಾರ್ಥನೆಗೆ ದೊಡ್ಡ ಶಕ್ತಿ

ಶನಿವಾರ, ಏಪ್ರಿಲ್ 20, 2019
29 °C
ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ

ಸಾಮೂಹಿಕ ಪ್ರಾರ್ಥನೆಗೆ ದೊಡ್ಡ ಶಕ್ತಿ

Published:
Updated:
Prajavani

ವಿಟ್ಲ: ಸಾಮೂಹಿಕ ಪ್ರಾರ್ಥನೆಗೆ ಬಹಳ ದೊಡ್ಡ ಶಕ್ತಿ ಇದೆ. ಜನ ಮನ ಸೇರಿದಲ್ಲಿ ಜನಾರ್ದನನ ಪ್ರೀತಿ ಇರುತ್ತದೆ. ಜೀವ ಚೈತನ್ಯಗಳು ಸೇರಿದಾಗ ದೇವ ಚೈತನ್ಯ ಹೆಚ್ಚಾಗುತ್ತದೆ. ಧಾರಾಕಾರ ಭಕ್ತಿಯ ಸಮರ್ಪಣೆ ಮಾಣಿ ಮಠದಲ್ಲಿ ನಡೆದಿದ್ದು, ಮಹಾ ಕ್ಷೇತ್ರವಾಗಿದೆ. ಸೇವೆಯ ಮುಂದೆ ಸಂಪತ್ತು ಗೌಣ ಎಂದು ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಗುರುವಾರ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ 26ನೇ ಯೋಗಪಟ್ಟಾಭಿಷೇಕ ದಿನದ ಅಂಗವಾಗಿ ನಡೆದ ಮಹಾಪಾದುಕಾ ಪೂಜೆ ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.

ಮಾಣಿ ಮಠದಲ್ಲಿ ಸ್ಥಳಾವಕಾಶದ ಕೊರತೆ ಆಗುವಷ್ಟು ರೀತಿಯಲ್ಲಿ ಪಾದ ಪೂಜೆ ನಡೆದಿದೆ. ಮಠದ ಹಾಗೂ ಮಠಗಳ ಇತಿಹಾಸದಲ್ಲಿ ಈ ಪಾದುಕಾಪೂಜೆ ವಿಶ್ವವಿಕ್ರಮವಾಗಿದೆ. ಸಾವಿರ ಸಾವಿರ ಸದ್ಭಾವಗಳ ಸಮಾವೇಶ ಮಹಾಪಾದ ಪೂಜೆಯ ಮೂಲಕ ನಡೆದಿದೆ. ಮಹಾಗುರು ಸಮಾರಾಧನೆಯಿಂದ ಈ ಮಣ್ಣಿನ ಕಣಕ್ಕೆ ಮಹಾಪುಣ್ಯ ಒದಗಿ ಬಂತು. ಮಾಣಿ ಮಣ್ಣು ಮಾಣಿಕ್ಯವಾಗಿದ್ದು, ಎಸೆಯುವ ಕಲ್ಲುಗಳೂ ವಜ್ರವಾಗುವುದು ಈ ಕ್ಷೇತ್ರದ ವಿಶೇಷ ಎಂದು ತಿಳಿಸಿದರು.

ಶ್ರೀ ಭಾರತೀ ಪ್ರಕಾಶನದ ಹೊರ ತಂದ ಶ್ರೀ ರಾಘವೇಶ್ವರ ಸ್ವಾಮೀಜಿ  ಅವರ ಜೀವನ ಚಿತ್ರಕಥೆ ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು. ಗೋ ಸ್ವರ್ಗದಲ್ಲಿ ಮೇ ತಿಂಗಳಲ್ಲಿ ನಡೆಯುವ ಮಕ್ಕಳ ಮಹಾಸಮ್ಮೇಳನ ಆಮಂತ್ರಣ ಬಿಡುಗಡೆ ಮಾಡಲಾಯಿತು.

ಮಠದ ಕಾರ್ಯನಿರ್ವಾಹಕ ಅಧಿಕಾರಿ ಕೆ. ಜಿ. ಭಟ್, ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಭಾರತೀ ಪ್ರಕಾಶನದ ಕಾರ್ಯದರ್ಶಿ ಅನುರಾಧಾ ಪಾರ್ವತಿ, ಗೋಸ್ವರ್ಗದ ಅಧ್ಯಕ್ಷ ಆರ್. ಎಸ್. ಹೆಗಡೆ, ಭಾರತೀಯ ಗೋಪರಿವಾರದ ಮಹೇಶ್ ಚಟ್ನಳ್ಳಿ, ಜೀವನದಾನ ಮತ್ತು ಯೋಗಪಟ್ಟಾಭಿಷೇಕ ದಿನ ಆಯೋಜನಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಆಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಸೇರಾಜೆ ಸುಬ್ರಹ್ಮಣ್ಯ ಭಟ್, ಕೋಶಾಧಿಕಾರಿ ಬಂಗಾರಡ್ಕ ಜನಾರ್ದನ ಭಟ್, ಗಣೇಶ್ ಭಟ್ ಮೈಕೆ ಮತ್ತು ಮಠದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಂಗಾರಡ್ಕ ಜನಾರ್ದನ ಭಟ್ ದಂಪತಿಗಳು ಸಭಾ ಪೂಜೆ ನಡೆಸಿದರು. ಶ್ರೀಕಾರ್ಯದರ್ಶಿ ಸತ್ಯನಾರಾಯಣ ಶರ್ಮ ಪ್ರಸ್ತಾವನೆಗೈದರು. ಹವ್ಯಕ ಮಹಾಮಂಡಲ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪ್ಪು ಅವಲೋಕಿಸಿದರು. ಜೀವನ ಚಿತ್ರ ಪುಸ್ತಕ ಮಾಹಿತಿಯನ್ನು ಶಾರದಾ ಜಯಗೋವಿಂದ ನಡೆಸಿದರು. ಯು. ಎಸ್. ವಿಶ್ವೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !