ಭಾರಿ ಮಳೆ ಸಾಧ್ಯತೆ: ಜಿಲ್ಲಾಡಳಿತದಿಂದ ಕಟ್ಟೆಚ್ಚರ

7
ಎನ್‌ಡಿಆರ್‌ಎಫ್‌ ತಂಡ ಕಳುಹಿಸಲು ಕೋರಿಕೆ– ಜಿಲ್ಲಾಧಿಕಾರಿ

ಭಾರಿ ಮಳೆ ಸಾಧ್ಯತೆ: ಜಿಲ್ಲಾಡಳಿತದಿಂದ ಕಟ್ಟೆಚ್ಚರ

Published:
Updated:

ಮಂಗಳೂರು: ‘ಕರಾವಳಿಯಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂಬ ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ಆಧರಿಸಿ ಜಿಲ್ಲಾಡಳಿತದಿಂದ ಕಟ್ಟೆಚ್ಚರ ವಹಿಸಲಾಗಿದೆ. ತುರ್ತು ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್‌ಡಿಆರ್‌ಎಫ್‌) ತಂಡವೊಂದನ್ನು ಕರೆಸಲಾಗುತ್ತಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಮಂಗಳವಾರ ಭೇಟಿನೀಡಿದ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ. ನೇತ್ರಾವತಿ, ಕುಮಾರಧಾರ, ನಂದಿನಿ ಮತ್ತು ಶಾಂಭವಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಪ್ರವಾಹ ಆವರಿಸಬಹುದಾದ ತಗ್ಗು ಪ್ರದೇಶಗಳನ್ನು ಗುರುತಿಸಿದ್ದು, ಎಲ್ಲ ಸ್ಥಳಗಳಿಗೂ ಪರಿಸ್ಥಿತಿ ಅವಲೋಕನಕ್ಕಾಗಿ ಜಿಲ್ಲಾಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ’ ಎಂದರು.

ಬಂಟ್ವಾಳದಲ್ಲಿ ಈಗಾಗಲೇ ಜಿಲ್ಲಾಡಳಿತದಿಂದ ಗಂಜಿ ಕೇಂದ್ರ ತೆರೆಯಲಾಗಿದೆ. ಉಳಿದ ಕಡೆಗಳಲ್ಲಿ ಪ್ರವಾಹ ಸ್ಥಿತಿ ಆಧರಿಸಿ ಆಯಾ ತಾಲ್ಲೂಕುಗಳ ತಹಶೀಲ್ದಾರರು ನಿರ್ಧಾರ ಕೈಗೊಳ್ಳುತ್ತಾರೆ. ನೀರಿನ ಮಟ್ಟ ಏರಿಕೆಯಾದರೆ ತಗ್ಗು ಪ್ರದೇಶದ ಜನರನ್ನು ಸ್ಥಳಾಂತರಿಸಲಾಗುವುದು. ಇದಕ್ಕಾಗಿ ದೋಣಿಗಳು ಮತ್ತು ಜೀವರಕ್ಷಕ ಸಾಧನಗಳನ್ನು ಒದಗಿಸಲಾಗಿದೆ. ರಕ್ಷಣಾ ತಂಡಗಳು ಮತ್ತು ಈಜುಗಾರರನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಹೇಳಿದರು.

ತುರ್ತು ಸಂದರ್ಭದಲ್ಲಿ ಪರಿಹಾರ ಕಾರ್ಯಾಚರಣೆಗೆ ನೆರವು ನೀಡುವುದಕ್ಕಾಗಿ ಎನ್‌ಡಿಆರ್‌ಎಫ್‌ನ ಒಂದು ತಂಡ ಕಳುಹಿಸುವಂತೆ ಕೋರಲಾಗಿದೆ. ಮಂಗಳವಾರ ತಡರಾತ್ರಿ ಈ ತಂಡ ಮಂಗಳೂರು ತಲುಪಲಿದೆ. ನಗರದಲ್ಲೇ ಈ ತಂಡವನ್ನು ಇರಿಸಲಾಗುವುದು. ಜಿಲ್ಲಾಧಿಕಾರಿ ಕಚೇರಿಯ ಸಹಾಯವಾಣಿ 1077 ನಿರಂತರವಾಗಿ ಕೆಲಸ ಮಾಡುತ್ತಿದ್ದು, ಅಗತ್ಯ ಸಂದರ್ಭದಲ್ಲಿ ಸಾರ್ವಜನಿಕರು ಸಂಪರ್ಕಿಸಬೇಕು ಎಂದು ಮನವಿ ಮಾಡಿದರು.

ನೀರಿನ ಮಟ್ಟ ಏರಿಕೆ:

ನೇತ್ರಾವತಿ ನದಿ ನೀರಿನ ಮಟ್ಟ ಉಪ್ಪಿನಂಗಡಿ ಬಳಿ 29.6 ಮೀಟರ್‌ ಮತ್ತು ಬಂಟ್ವಾಳದಲ್ಲಿ 8.6 ಮೀಟರ್‌ ಇದೆ. 2013ರಲ್ಲಿ ಪ್ರವಾಹ ಉಂಟಾದಾಗ ಉಪ್ಪಿನಂಗಡಿ ಬಳಿ 32 ಮೀಟರ್‌ ಮತ್ತು ಬಂಟ್ವಾಳದಲ್ಲಿ 11 ಮೀಟರ್ ತಲುಪಿತ್ತು. ಎರಡೂ ಕಡೆಗಳಲ್ಲಿ ನಿರಂತರವಾಗಿ ನಿಗಾ ಇರಿಸಲಾಗಿದೆ ಎಂದರು.

ಪುತ್ತೂರಿನಲ್ಲಿ ಕುಮಾರಧಾರ ನದಿ ನೀರಿನ ಮಟ್ಟ 25 ಮೀಟರ್‌ ಇದೆ. ಎಲ್ಲ ನದಿಗಳ ನೀರಿನ ಹರಿವಿನ ಮೇಲೆ ಕೇಂದ್ರ ಜಲ ಆಯೋಗ ನಿಗಾ ಇರಿಸಿದೆ. ಆಯೋಗದ ವರದಿ ಪ್ರಕಾರ ಜಿಲ್ಲೆಯ ಯಾವುದೇ ನದಿಗಳು ಅನಾಹುತಕಾರಿ ಪ್ರವಾಹ ಸೃಷ್ಟಿಸುವಷ್ಟು ನೀರಿನ ಮಟ್ಟ ಹೊಂದಿಲ್ಲ. ಆದರೆ ದಿಢೀರ್ ಪ್ರವಾಹದ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂದು ತಿಳಿಸಿದರು.

ಮೀನುಗಾರಿಕೆ ನಿಷೇಧ:

ಭಾರಿ ಮಳೆ ಮತ್ತು ಜೋರಾದ ಗಾಳಿ ಬೀಸುತ್ತಿರುವುದರಿಂದ ಭಾನುವಾರದಿಂದಲೇ ಮೀನುಗಾರಿಕೆ ನಿಷೇಧ ಹೇರಲಾಗಿದೆ. ಅದಕ್ಕೂ ಮೊದಲೇ ಸಮುದ್ರಕ್ಕೆ ಹೋಗಿದ್ದ ಕೆಲವು ದೋಣಿಗಳು ಇನ್ನೂ ಹಿಂದಿರುಗಿಲ್ಲ. ಹಿಂದಿರುಗುವಾಗ ಗುಂಪಾಗಿ ಬರುವಂತೆ ಮತ್ತು ಸಂಪರ್ಕದಲ್ಲಿ ಇರುವಂತೆ ಮೀನುಗಾರರಿಗೆ ಸಂದೇಶ ರವಾನಿಸಲಾಗಿದೆ ಎಂದರು.

ಸಮುದ್ರ ಮತ್ತು ನದಿಗಳಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ತುಂಬಿ ಹರಿಯುವ ನದಿಗಳನ್ನು ನೋಡಲು ಜನರು ಧಾವಿಸುತ್ತಿದ್ದು, ಈ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸಲಾಗಿದೆ. ಮಕ್ಕಳು ನೀರಿನಲ್ಲಿ ಆಟವಾಡಲು ತೆರಳದಂತೆ ಪೋಷಕರು ನಿಗಾ ಇರಿಸಬೇಕು ಎಂದು ಮನವಿ ಮಾಡಿದರು.

ರಸ್ತೆಗಳ ಮೇಲೆ ನಿಗಾ:

ಶಿರಾಡಿ, ಸಂಪಾಜೆ ಮತ್ತು ಚಾರ್ಮಾಡಿ ಘಾಟಿಗಳಲ್ಲಿ ಮಳೆಯಿಂದ ಭೂಕುಸಿತ ಆಗುತ್ತಿದೆ. ಮರಗಳೂ ಉರುಳಿ ಬೀಳುತ್ತಿವೆ. ಮೂರೂ ಘಾಟಿ ಮಾರ್ಗಗಳ ಮೇಲೆ ಜಿಲ್ಲಾಡಳಿತ ನಿಗಾ ಇರಿಸಿದೆ. ಈ ಮಾರ್ಗಗಳ ಸ್ಥಿತಿಗತಿ ಕುರಿತು ಪ್ರತಿದಿನವೂ ಬುಲೆಟಿನ್‌ ಪ್ರಕಟಿಸಲಾಗುವುದು. ಸಾರ್ವಜನಿಕರು ಪ್ರಯಾಣಕ್ಕೂ ಮುನ್ನ ಮಾಹಿತಿ ಪಡೆದು ಹೋಗುವುದು ಉತ್ತಮ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !