ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಬಿಎಸ್‌ಎನ್‌ಎಲ್‌ ಸೇವೆ ಸ್ಥಬ್ಧ– ಗ್ರಾಹಕರ ಪಡಿಪಾಟಲು

ಸಿಡಿಲು ಬಡಿದು ‘ಪವರ್‌ ಮಾಡ್ಯೂಲ್‌’ಗೆ ಹಾನಿ
Published 13 ಆಗಸ್ಟ್ 2024, 4:33 IST
Last Updated 13 ಆಗಸ್ಟ್ 2024, 4:33 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಸೋಮವಾರ ಸಂಜೆ  5 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆಯೇ, ಬಿಎಸ್‌ಎನ್‌ಎಲ್‌ ಸಂಪರ್ಕದ ಮೊಬೈಲ್‌ನಿಂದ ಕರೆಗಳು ಹೊರಹೋಗಲಿಲ್ಲ. ಗ್ರಾಹಕರ ಮೊಬೈಲ್‌ಗಳಿಗೆ ಒಳ ಬರುವ ಕರೆಗಳೂ ಕಾರ್ಯಾಚರಿಸಲಿಲ್ಲ. ಎಸ್‌ಎಂಎಸ್‌ ವಿನಿಮಯವೂ ಸ್ತಬ್ಧವಾಯಿತು. ಬಿಎಸ್‌ಎನ್‌ಎಲ್‌ನ ಬ್ರಾಡ್‌ಬ್ಯಾಂಡ್‌ ಕೈಕೊಟ್ಟಿತು. ಬಿಎಸ್‌ಎನ್‌ಎಲ್‌ನ  ಸೇವೆಗಳೆಲ್ಲ ದಿಢೀರ್‌ ಸ್ಥಗಿತಗೊಂಡವು. 

ಸಮಸ್ಯೆ ಹೇಳಿಕೊಳ್ಳಲು ಬಿಎಸ್‌ಎನ್‌ಎಲ್‌ ಗ್ರಾಹಕರ ಸಹಾಯವಾಣಿಗೆ ಕರೆ ಮಾಡೋಣವೆಂದರೆ ಅದೂ ಸಾಧ್ಯವಾಗಲಿಲ್ಲ. ಕಂಪನಿಯ ಅಧಿಕಾರಿಗಳ ಸಂಖ್ಯೆಗೆ ಕರೆ ಮಾಡಿ ಅವರಿಗೆ ಸಮಸ್ಯೆ ಬಗ್ಗೆ ತಿಳಿಸಲೂ ಆಗಲಿಲ್ಲ. ಮೊಬೈಲ್‌ನಲ್ಲೇ ಸಮಸ್ಯೆ ಕಾಣಿಸಿಕೊಂಡಿರಬಹುದು ಎಂದು ಭಾವಿಸಿ ಕೆಲವು ಗ್ರಾಹಕರು ಹ್ಯಾಂಡ್‌ಸೆಟ್‌ಗಳನ್ನು ಸ್ವಿಚ್‌ ಆಫ್‌ ಮಾಡಿ, ಮತ್ತೆ ಸ್ವಿಚ್‌ ಆನ್‌ ಮಾಡಿದರು. ಆಗಲೂ ಸಮಸ್ಯೆ ಬಗೆಹರಿಯಲಿಲ್ಲ ಸುಮಾರು ಎರಡು ಗಂಟೆಗಳ ಕಾಲ ಬಿಎಸ್‌ಎನ್‌ಎಲ್‌ ಗ್ರಾಹಕರು ಸಮಸ್ಯೆ ಎದುರಿಸಿದರು. ಏನು ಮಾಡಬೇಕೆಂದು ತೋಚದೇ ಚಡಪಡಿಸಿದರು.

ಈ ಅವ್ಯವಸ್ಥೆ ಕುರಿತು ‘ಪ್ರಜಾವಾಣಿ’ಗೆ  ಪ್ರತಿಕ್ರಿಯಿಸಿದ ಬಿಎಸ್‌ಎನ್‌ಎಲ್‌ ಸಂಸ್ಥೆಯ ಪ್ರಧಾನ ಮಹಾ ವ್ಯವಸ್ಥಾಪಕ (ಪಿಜಿಎಂ) ನವೀನ ಗುಪ್ತ, ‘ಸಿಡಿಲು ಬಡಿದು ನಮ್ಮ ಕದ್ರಿ ಕೇಂದ್ರದ ಪವರ್‌ ಮಾಡ್ಯೂಲ್ ಹಾನಿಗೊಳಗಾಗಿತ್ತು. ಅದರ ಬದಲು ಬೇರೆ ಪವರ್‌ ಮಾಡ್ಯೂಲ್‌ ಸ್ಥಾಪಿಸಬೇಕಾಯಿತು. ದುರಸ್ತಿ ವೇಳೆ ಸಮಸ್ಯೆ ಆಗಿದ್ದರಿಂದ ಬಿಎಸ್‌ಎನ್‌ಎಲ್‌ ಸೇವೆಗಳು ಸ್ಥಗಿತಗೊಂಡವು. ಶೇ 70ರಷ್ಟು ಸೇವೆಗಳನ್ನು ಎರಡು ತಾಸುಗಳಲ್ಲಿ ಮರುಸ್ಥಾಪಿಸಲಾಗಿದೆ. ಇನ್ನೂ ಶೇ 30ರಷ್ಟು ಸೇವೆಗಳನ್ನು ಶೀಘ್ರವೇ ಮರುಸ್ಥಾಪಿಸಲಿದ್ದೇವೆ’ ಎಂದು ತಿಳಿಸಿದರು.

‘ನಗರದಲ್ಲಿ ಮಾತ್ರ ಬಿಎಸ್‌ಎನ್‌ಎಲ್‌ ಸೇವೆಗಳು ವ್ಯತ್ಯಯವಾಗಿವೆ. ಗ್ರಾಮಾಂತರ ಪ್ರದೇಶದ ಸೇವೆಗಳಿಗೆ ಸಮಸ್ಯೆ ಆಗಿಲ್ಲ. ಗ್ರಾಹಕರಿಗೆ ಆದ ಅನನುಕೂಲಕ್ಕಾಗಿ ವಿಷಾದಿಸುತ್ತೇವೆ’ ಎಂದು ಅವರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT