ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾಜಕುಮಾರ್ ಜೊತೆ ಡ್ಯಾನ್ಸ್ ಮಾಡಿದ ಮಂಗಳೂರು ಪೊಲೀಸ್: ಟಗರು–2 ಚಿತ್ರದ ಸುಳಿವು

Last Updated 2 ಮೇ 2022, 13:28 IST
ಅಕ್ಷರ ಗಾತ್ರ

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಿದ್ದ ಪುನೀತ್‌ ರಾಜಕುಮಾರ್ ಸ್ಮರಣೆ ಕಾರ್ಯಕ್ರಮದಲ್ಲಿ ಚಿತ್ರನಟ ಶಿವರಾಜ್‌ಕುಮಾರ್ ಮತ್ತು ಗೀತಾ ದಂಪತಿ ಭಾಗವಹಿಸಿದರು.

‘ಅಪ್ಪುವನ್ನು ಕಳೆದುಕೊಂಡಿದ್ದು ಅದು ನಮ್ಮ ಕುಟುಂಬಕ್ಕೆ ಮಾತ್ರವಲ್ಲ, ಇಡೀ ರಾಜ್ಯದ ಜನರಿಗೆ ಮರೆಯಲಾಗದ ನೋವು. ಅಪ್ಪು ಇಲ್ಲ ಎಂದು ಕೊರಗುವುದಕ್ಕಿಂತ, ಆತ ನಮ್ಮೊಡನೆ ಇದ್ದಾನೆ ಎಂತಲೇ ನಾವು ಸಂಭ್ರಮಿಸಬೇಕು. ಆ ಮೂಲಕ ನಮ್ಮೊಳಗೆ ಸಮಾಧಾನ ಕಂಡುಕೊಳ್ಳಬೇಕು’ ಎಂದು ಶಿವರಾಜ್‌ಕುಮಾರ್ ಹೇಳಿದರು.

‘ಚಿಕ್ಕಂದಿನಲ್ಲೇ ‘ಪ್ರೇಮದ ಕಾಣಿಕೆ’ ಚಿತ್ರ ಮಾಡಿದ್ದ ಪುನೀತ್ ಸೂಪರ್ ಸ್ಟಾರ್ ಆಗಿದ್ದ. ಆರು ತಿಂಗಳಾದರೂ ಆತ ನಮ್ಮಿಂದ ದೂರವಾದ ನೋವು ಮರೆಯಲು ಸಾಧ್ಯವಾಗಿಲ್ಲ. ಮಾನವೀಯತೆ ಎನ್ನುವ ಪದಕ್ಕೆ ಆತ ಉದಾಹರಣೆ. ನಾವಿಬ್ಬರೂ ಸಿಕ್ಕಾಗ ಚಿತ್ರಗಳ ಬಗ್ಗೆ ಮಾತ್ರ ಚರ್ಚಿಸುತ್ತಿದ್ದೆವು. ಆತ ಮಾಡಿದ ಮಾನವೀಯ ಕಾರ್ಯಗಳ ಬಗ್ಗೆ ನನಗೇ ಗೊತ್ತಿರಲಿಲ್ಲ. ಆತನ ಕಾಲಾನಂತರವೇ ಅದು ತಿಳಿದಿದ್ದು’ ಎಂದರು.

ಅಪ್ಪು ಸಂಭ್ರಮ ಮಂಗಳೂರಿನಲ್ಲಿ ಮಾಡೋಣ: ‘ಮಂಗಳೂರು ನನಗೆ ಇಷ್ಟವಾದ ಊರು. ಅಪ್ಪಾಜಿಯನ್ನು ಬಿಟ್ಟರೆ ನಮ್ಮ ಕುಟುಂಬದಲ್ಲಿ ನಾನು ನಟಿಸಿರುವ ಹೆಚ್ಚಿನ ಸಿನಿಮಾಗಳ ಶೂಟಿಂಗ್ ಇಲ್ಲಿ ನಡೆದಿದೆ. ನನಗೂ, ಪೊಲೀಸ್ ಇಲಾಖೆಗೂ ನಿಕಟ ಸಂಬಂಧ. ನಾನು ಪೊಲೀಸ್ ಪಾತ್ರದಲ್ಲಿ ನಟಿಸಿದ ಚಿತ್ರಗಳು ಯಶಸ್ಸು ಪಡೆದಿವೆ.ಮುಂದಿನ ಬಾರಿ ಮಂಗಳೂರಿನಲ್ಲಿ ‘ಅಪ್ಪು ಸೆಲೆಬ್ರೇಷನ್’ ಮಾಡೋಣ’ ಎಂದಾಗ ಸಭೆಯಲ್ಲಿ ಚಪ್ಪಾಳೆಯ ಸುರಿಮಳೆ.

ಪೊಲೀಸರೊಂದಿಗೆ ಸಂವಾದ: ‘ತವರಿಗೆ ಬಾ ತಂಗಿ’, ‘ಅಣ್ಣ ತಂಗಿ’ ಇಂತಹ ಚಿತ್ರ ಮತ್ತೆ ಬರಲಿದೆಯೇ ಎಂದು ಪ್ರಶ್ನೆಗೆ, ‘ಮೂರು ಕತೆಗಳು ಸಂಯೋಜಿತವಾಗಿರುವ ಇನ್ನೊಂದು ಚಿತ್ರ ಕತೆ ಇದೆ. ಚಿತ್ರದ ತಂಗಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ’ ಎಂದು ಹಾಸ್ಯಮಿಶ್ರಿತವಾಗಿ ಉತ್ತರಿಸಿದರು.

‘ಇತ್ತೀಚಿನ ದಿನಗಳಲ್ಲಿ ಚಿತ್ರಗಳಲ್ಲಿ ರೌಡಿಸಂ ಪಾತ್ರಗಳ ವೈಭವೀಕರಣ ಆಗುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು’ ಎಂಬ ಪೊಲೀಸ್ ಸಿಬ್ಬಂದಿ ಪ್ರಶ್ನೆಗೆ, ‘ಇದು ಚಿತ್ರದ ಭಾಗವಷ್ಟೆ. ರೌಡಿಸಂ ಇದ್ದರೇನೇ ನಿಮಗೆ ಕೆಲಸ’ ಎಂದು ನಗೆ ಚಟಾಕಿ ಹಾರಿಸಿದರು.

ಅಪ್ಪು ನೆನಪಿನಲ್ಲಿ ಶಿವರಾಜ್‌ಕುಮಾರ್, ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ..’ ಹಾಡಿನ ಕೆಲ ಸಾಲುಗಳನ್ನು ಹಾಡಿದರು.

ಇಲಾಖೆ ವತಿಯಿಂದ ಶಿವರಾಜ್‌ಕುಮಾರ್ –ಗೀತಾ ದಂಪತಿಯನ್ನು ಸನ್ಮಾನಿಸಲಾಯಿತು. ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸ್ವಾಗತಿಸಿದರು. ಡಿಸಿಪಿ ಹರಿರಾಂ ಶಂಕರ್, ಚಿತ್ರ ನಿರ್ಮಾಪಕ ರಾಜೇಶ್ ಭಟ್, ಮೇಘರಾಜ್ ರಾಜೇಂದ್ರಕುಮಾರ್ ಇದ್ದರು.

ಸುದ್ದಿಗಾರರ ಜತೆ ಮಾತನಾಡಿದ ಅವರು,‘ಬೈರಾಗಿ ಚಿತ್ರ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ‘ವೇದ’ ಶೂಟಿಂಗ್ ನಡೆಯುತ್ತಿದೆ. ನಾನು ಮತ್ತು ಪ್ರಭುದೇವ್ ನಟಿಸಲಿರುವ ಯೋಗರಾಜ್ ಭಟ್ ಅವರ ಚಿತ್ರದ ಶೂಟಿಂಗ್ ಆರಂಭವಾಗಲಿದೆ’ ಎಂದರು.

‘ಟಾಕೀಸ್, ಆ್ಯಪ್ ಚಿತ್ರರಂಗಕ್ಕೆ ಅನುಕೂಲವಾಗಿದೆ. ಅವಕಾಶಗಳು ಸಿಗದಿರುವವರಿಗೆ ಶೇ 100 ಅವಕಾಶ ಸಿಗಲಿದೆ. ತುಳುವಿನ ಜತೆಗೆ ಕನ್ನಡಕ್ಕೂ ಇದು ಪ್ರಯೋಜನವಾಗಲಿದೆ. ತುಳುವನ್ನು ಪ್ರಧಾನವಾಗಿಟ್ಟುಕೊಂಡು ಕನ್ನಡದಲ್ಲಿಯೂ ಈ ಆ್ಯಪ್ ಮಾಡುತ್ತಿರುವುದು ಸಂತಸದ ವಿಚಾರ’ ಎಂದರು.

ಟಗರು–2 ಚಿತ್ರದ ಸುಳಿವು

‘ಇನ್‌ಸ್ಪೆಕ್ಟರ್ ವಿಕ್ರಂ’ನಿಂದ ‘ರುಸ್ತುಂ’ವರೆಗೆ ಪಾತ್ರಗಳನ್ನು ನಿರ್ವಹಿಸಿದ್ದೀರಿ ಮತ್ತೆ ಅಂತಹ ಪಾತ್ರಗಳನ್ನು ನಿರೀಕ್ಷಿಸಬಹುದೇ ಎಂಬ ಪೊಲೀಸ್ ಅಧಿಕಾರಿಯೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್, ‘ಟಗರು –2’ ಆ ಚಿತ್ರ ಆಗಿರಬಹುದು’ ಎನ್ನುತ್ತ ಟಗರು–2 ಚಿತ್ದ ಸುಳಿವು ನೀಡಿದರು. ‘ಟಗರು’ ಚಿತ್ರದ ಡೈಲಾಗ್‌ ಅನ್ನು ಹೇಳಿ ರಂಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT