ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಕೆ ನೀರು, ಬೊಗಸೆ ಧಾನ್ಯ ಪಕ್ಷಿಗಳಿಗೆ ಆಸರೆ

ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪ್ರಜಾವಾಣಿ@75ರ ಕಾರ್ಯಕ್ರಮ* ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಸಲಹೆ
Last Updated 28 ಮಾರ್ಚ್ 2023, 6:35 IST
ಅಕ್ಷರ ಗಾತ್ರ

ಮಂಗಳೂರು: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿದ್ಯಾರ್ಥಿಗಳು ಶಾಲೆ–ಕಾಲೇಜಿಗೆ ಹೊರಡುವ ಮುನ್ನ ಪುಟ್ಟ ಕುಡಿಕೆಯಲ್ಲಿ ನೀರು, ಒಂದು ಬೊಗಸೆ ಧಾನ್ಯವನ್ನು ಮನೆಯ ಹೊರಗೆ ಇಟ್ಟು ಹೋಗಿ, ನೀರು– ಆಹಾರ ಅರಸುವ ಪ್ರಾಣಿ–ಪಕ್ಷಿಗಳಿಗೆ ನೀವು ಆಶ್ರಯದಾತರಾಗುತ್ತೀರಿ...ಮನೆ ಪಕ್ಕದಲ್ಲಿ ಸಸಿಗಳನ್ನು ನಾಟಿ ಮಾಡಿ, ಚಿಗುರಿ ಟೊಂಗೆಯೊಡೆಯುವ ಗಿಡಗಳ ಮೇಲೆ ಪಕ್ಷಿಗಳು ಗೂಡು ಕಟ್ಟುತ್ತವೆ, ಹಕ್ಕಿ–ಪಕ್ಷಿಗಳು ನಿಮ್ಮ ಸಾಂಗತ್ಯಕ್ಕೆ ಬರುತ್ತವೆ..

ಹೀಗೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಅವರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರೆ, ಕೋಗಿಲೆಗಳು ಹಿನ್ನೆಲೆ ಸಂಗೀತ ಹಾಡುತ್ತಿದ್ದವು. ಮರದ ನೆರಳಿನಲ್ಲಿ ಕುಳಿತ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಯವರ ಮಾತನ್ನು ಆಲಿಸುತ್ತಲೇ, ಮರದಿಂದ ಮರಕ್ಕೆ ಹಾರುತ್ತಿದ್ದ ಕೋಗಿಲೆಗಳ ಇಂಪಾದ ಗಾಯನದ ಸುಖ ಅನುಭವಿಸುತ್ತಿದ್ದರು.

‘ಪ್ರಜಾವಾಣಿ’@75ರ ಅಂಗವಾಗಿ ನಗರದ ಸೇಂಟ್ ಅಲೋಶಿಯಸ್ ಕಾಲೇಜಿನ ‘ಮದರ್ ತೆರೇಸಾ’ ಪೀಸ್‌ ಪಾರ್ಕ್‌ನಲ್ಲಿ ಸೋಮವಾರ ಆಯೋಜಿಸಿದ್ದ ‘ಅರಿಯೋಣ ಪಶು–ಪಕ್ಷಿಗಳ ನೋವು’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.

‘ಬೆಳಗಾದರೆ ನಾಯಿ, ಬೆಕ್ಕು, ಪಾರಿವಾಳ ಮತ್ತಿತರ ಮನೆಯಲ್ಲಿ ಸಾಕಿರುವ ಪ್ರಾಣಿಗಳನ್ನು ಮುದ್ದಿಸುತ್ತೇವೆ, ಅವುಗಳ ಜತೆ ಆಟವಾಡಿ ಉಲ್ಲಸಿತರಾಗುತ್ತೇವೆ. ಆದರೆ, ಪರಿಸರದಲ್ಲಿರುವ ಪ್ರಾಣಿಗಳ ಅಗತ್ಯಗಳಾದ ಮರ–ಗಿಡ, ಪೊಟರೆ, ನೀರು, ಆಹಾರದ ಬಗ್ಗೆ ನಾವು ಯೋಚಿಸುವುದಿಲ್ಲ. ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಾಣಿ–ಪಕ್ಷ ಸಂಕುಲಗಳ ರಕ್ಷಣೆ ಮಹತ್ವದ್ದಾಗಿದೆ. ಅವುಗಳನ್ನು ನಾವು ತಾಯಿಯಂತೆ ಪ್ರೀತಿಸಿ ಪೊರೆಯಬೇಕು’ ಎಂದು ಕಿವಿಮಾತು ಹೇಳಿ ಹುರಿದುಂಬಿಸಿದರು.

‘ಮಂಗಳೂರಿನಲ್ಲಿ ಈ ಬಾರಿ ಗರಿಷ್ಠ 35–36 ಡಿಗ್ರಿ, ಕಡಬ, ಸುಳ್ಯ ಭಾಗದಲ್ಲಿ 38 ಡಿಗ್ರಿ ತಾಪಮಾನ ದಾಖಲಾಗುತ್ತಿದೆ. ಫೆಬ್ರುವರಿ ತಿಂಗಳಿನಲ್ಲಿ ಭಾರತದಲ್ಲೇ ಗರಿಷ್ಠ ತಾಪಮಾನ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ (39.9 ಡಿಗ್ರಿ) ದಾಖಲಾಗಿದೆ. ಈ ತಾಪಮಾನ ಏರಿಕೆಯ ಜತೆಗೆ ಕಾಡಿಗೆ ಬೆಂಕಿ ಬೀಳುವ ಪ್ರಕರಣಗಳು ಹೆಚ್ಚುತ್ತಿವೆ. ಮಾನವ ಹಸ್ತಕ್ಷೇಪದಿಂದ ಇಂತಹ ದುರ್ಘಟನೆಗಳು ಹೆಚ್ಚುತ್ತಿವೆ. ಕಾಡಿನ ಬೆಂಕಿಯಿಂದ ಮರಗಳು ಮಾತ್ರವಲ್ಲ, ಮೂಕ ಪ್ರಾಣಿ–ಪಕ್ಷಿಗಳು, ಉಪಯುಕ್ತ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ವಿದ್ಯಾರ್ಥಿಗಳು ಇಂತಹ ಸೂಕ್ಷ್ಮ ಸಂಗತಿಗಳ ಬಗ್ಗೆ ಜ್ಞಾನ ಬೆಳೆಸಿಕೊಳ್ಳುವ ಜತೆಗೆ, ಜನರಲ್ಲಿ ಅರಿವು ಮೂಡಿಸಬೇಕು’ ಎಂದು ತಿಳಿ ಹೇಳಿದರು.

ಸೇಂಟ್ ಅಲೋಶಿಯಸ್ ಕಾಲೇಜಿನ ಆವರಣದಲ್ಲಿ ಬೆಳೆಸಿರುವ ಗಿಡ–ಮರಗಳು, ಅವುಗಳನ್ನು ಆಶ್ರಯಿಸಿರುವ ಪಕ್ಷಿಗಳ ಕಲರವಕ್ಕೆ ಮನಸೋತ ಜಿಲ್ಲಾಧಿಕಾರಿ ಮುಕ್ತಕಂಠದಿಂದ, ಕಾಲೇಜಿನ ಶ್ರಮವನ್ನು ಶ್ಲಾಘಿಸಿದರು.

ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಅರುಣಕುಮಾರ್ ಶೆಟ್ಟಿ, ಸೇಂಟ್ ಅಲೋಶಿಯಸ್ ಕಾಲೇಜಿನ ಕ್ಸೇವಿಯರ್ ಬ್ಲಾಕ್ ನಿರ್ದೇಶಕ ಡಾ. ನಾರಾಯಣ ಭಟ್, ಪ್ರಾಣಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಗ್ಲಾವಿನ್ ಟಿ. ರಾಡ್ರಿಗಸ್, ‘ಪ್ರಜಾವಾಣಿ’ ಮಂಗಳೂರು ಬ್ಯೂರೊ ಮುಖ್ಯಸ್ಥ ಗಣೇಶ ಚಂದನಶಿವ ಇದ್ದರು.

ಅರುನಿಮಾ ಕೆ. ಮತ್ತು ಅಂಜಲಿ ಸಾಹಿನಿ ನೃತ್ಯ ಪ್ರದರ್ಶಿಸಿದರು. ಪ್ರಜಾವಾಣಿ ಹಿರಿಯ ವರದಿಗಾರ ಪ್ರವೀಣ್‌ಕುಮಾರ್ ಪಿ.ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಖುಷಿ ಎಚ್‌. ಆಳ್ವ ಕಾರ್ಯಕ್ರಮ ನಿರೂಪಿಸಿದರು.

‘ಜನರ ಮನ ಗೆದ್ದಿರುವ ‘ಪ್ರಜಾವಾಣಿ’
‘ಈ ಭೂಮಿಯು ದೇವರು ನಮಗೆ ನೀಡಿರುವ ದೊಡ್ಡ ಕೊಡುಗೆ. ರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಪರಿಸರ, ಪ್ರಾಣಿ–ಪಕ್ಷಿಗಳ ರಕ್ಷಣೆ ಮಾಡಿದಾಗ ಮಾತ್ರ ಈ ಭೂಮಿಯ ರಕ್ಷಣೆಯಾಗುತ್ತದೆ’ ಎಂದು ಅರ್ಥಗರ್ಭಿತವಾಗಿ ಹೇಳಿದವರು ಸೇಂಟ್ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ.

‘ಕಾಲೇಜಿನ ಕ್ಯಾಂಪಸ್‌ನಲ್ಲಿರುವ ಮರಗಳು ಪಕ್ಷಿಗಳಿಗೆ ಆಶ್ರಯ ತಾಣವಾಗಿವೆ. ಇಲ್ಲಿ 36 ಜಾತಿಯ ಪಕ್ಷಿಗಳು ಇರುವುದನ್ನು ವಿದ್ಯಾರ್ಥಿಗಳು ಗುರುತಿಸಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳ ತಂಡವೇ ಇಲ್ಲಿನ ಗಿಡ–ಮರಗಳ ರಕ್ಷಣೆ, ಪಕ್ಷಿಗಳಿಗೆ ನೀರು ಇಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. 40ರಷ್ಟು ವಿದ್ಯಾರ್ಥಿಗಳು ಇರುವ ‘ಇಕೊ ವಾರಿಯರ್ಸ್’ ತಂಡವು ಕಾಲೇಜಿನ ಪರಿಸರ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಕಳೆದ ವರ್ಷ ವಿದ್ಯಾರ್ಥಿಗಳು ಸುಮಾರು 30ಸಾವಿರ ಗಿಡಗಳನ್ನು ನಾಟಿ ಮಾಡಿದ್ದಾರೆ’ ಎಂದು ಹೇಳಿದರು.

‘ನಾವು ಚಿಕ್ಕಂದಿನಿಂದ ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’, ‘ಸುಧಾ’, ‘ಮಯೂರ’ ಓದಿ ಬೆಳೆದವರು. ಸಾಮಾಜಿಕ ಚಟುವಟಿಕೆಯಲ್ಲಿ ಈ ಪತ್ರಿಕೆಗಳು ಮುಂಚೂಣಿಯಲ್ಲಿವೆ. 75 ವರ್ಷ ಕಂಡಿರುವ ‘ಪ್ರಜಾವಾಣಿ’ ಕರ್ನಾಟಕ ಜನರ ಹೃದಯವನ್ನು ಗೆದ್ದಿದೆ. ಇಂತಹ ವಿಭಿನ್ನ ಕಾರ್ಯಕ್ರಮ ಆಯೋಜಿಸುವ ಮೂಲಕ ಪ್ರಾಣಿ –ಪಕ್ಷಿಗಳ ನೋವು ಅರಿಯುವ ಪ್ರಯತ್ನ ಮಾಡಿದೆ’ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT