ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೇಲೆ ಒತ್ತಡ ಬೇಡ; ಆತ್ಮಸ್ಥೈರ್ಯ ತುಂಬಿ

ಎಸ್ಸೆಸ್ಸೆಲ್ಸಿ ಪರೀಕ್ಷೆ ‘ಪ್ರಜಾವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ಡಿಡಿಪಿಐ ಡಿ.ಆರ್‌.ನಾಯಕ ಸಲಹೆ
Last Updated 20 ಮಾರ್ಚ್ 2023, 16:50 IST
ಅಕ್ಷರ ಗಾತ್ರ

ಮಂಗಳೂರು: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದ್ದು, ಶಾಲಾ ಹಂತದಲ್ಲಿ ಘಟಕ, ಅರ್ಧ ವಾರ್ಷಿಕ, ರೂಪಣಾತ್ಮಕ ಪರೀಕ್ಷೆ ಎದುರಿಸಿರುವ ಮಕ್ಕಳು ಮಾನಸಿಕವಾಗಿ ಅಂತಿಮ ಪರೀಕ್ಷೆಗೆ ಅಣಿಯಾಗಿದ್ದಾರೆ. ಪಾಲಕರು ವಿನಾಕಾರಣ ಮಕ್ಕಳ ಮೇಲೆ ಒತ್ತಡ ಹೇರಬಾರದು. ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಜತೆಗೆ, ಮಕ್ಕಳು ಲವಲವಿಕೆಯಿಂದ ಪರೀಕ್ಷೆಗೆ ಹೋಗಲು ಆತ್ಮಸ್ಥೈರ್ಯ ತುಂಬಬೇಕು...

ಹೀಗೆ ಪಾಲಕರಿಗೆ ಸಲಹೆ ನೀಡಿದವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ದಯಾನಂದ ಆರ್. ನಾಯಕ ಅವರು.

‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲಕರು ಮತ್ತು ಮಕ್ಕಳ ಪ್ರಶ್ನೆಗೆ ಅವರು ಉತ್ತರಿಸಿದರು.

ಹಲವಾರು ವಿದ್ಯಾರ್ಥಿಗಳು, ಪೋಷಕರು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಬಗ್ಗೆ ಪ್ರಶ್ನೆ ಕೇಳಿ ಆತಂಕ ನಿವಾರಣೆ ಮಾಡಿಕೊಂಡರು. ಅದರ ಆಯ್ದ ಭಾಗ ಇಲ್ಲಿದೆ.

ಉತ್ತಮ ಫಲಿತಾಂಶಕ್ಕೆ ಪ್ರಯತ್ನ

ಕೋವಿಡ್ ಕಾರಣಕ್ಕೆ ಹಿಂದಿನ ಎರಡು ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಬದಲಾವಣೆ ಮಾಡಲಾಗಿತ್ತು. ಆದರೆ, ಈ ಬಾರಿ 2019ರ ಮಾದರಿಯಲ್ಲೇ ಪ್ರಶ್ನೆಪತ್ರಿಕೆ ಇರಲಿದೆ. ಕಳೆದ ವರ್ಷ ಮೇ 16ಕ್ಕೇ ಶಾಲೆಗಳಲ್ಲಿ ತರಗತಿ ಪ್ರಾರಂಭಿಸಿ, ‘ಕಲಿಕಾ ಚೇತರಿಕೆ’ ಮೂಲಕ ಶೈಕ್ಷಣಿಕ ಹಿನ್ನಡೆಯನ್ನು ಸರಿದೂಗಿಸಲು ‍ಪ್ರಯತ್ನಿಸಲಾಗಿದೆ.

ತಾಲ್ಲೂಕು ಮಟ್ಟದಲ್ಲಿ ಪ್ರಶ್ನೆಪತ್ರಿಕೆ ಬ್ಯಾಂಕ್, ಸಬ್ಜೆಕ್ಟ್ ಫೋರಮ್‌ ಮೂಲಕ ಮಕ್ಕಳಿಗೆ ಸಂಭವನೀಯ ಪ್ರಶ್ನೆಗಳ ಪುನರ್ ಮನನ, ಶಾಲಾ ಅವಧಿಯ ಪೂರ್ವ ಮತ್ತು ನಂತರ ಹೆಚ್ಚುವರಿ ತರಗತಿ ಹೀಗೆ ಪ್ರತಿ ಶಾಲೆಯಲ್ಲಿ ಮುಖ್ಯ ಶಿಕ್ಷಕರು, ವಿಷಯವಾರು ಶಿಕ್ಷಕರು ವಿಶೇಷ ಶ್ರಮವಹಿಸಿ ಮಕ್ಕಳನ್ನು ಅಂತಿಮ ಪರೀಕ್ಷೆಗೆ ಸಿದ್ಧಗೊಳಿಸಿದ್ದಾರೆ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷೆಯ ನೋಡಲ್ ಅಧಿಕಾರಿ ವೆಂಕಟೇಶ ನಾಯಕ ತಿಳಿಸಿದರು.

-ಉಮಾಶಂಕರ್, ಸುಲ್ತಾನ್‌ಬತ್ತೇರಿ

* ತಾಪಮಾನ ಹೆಚ್ಚಿರುವ ಕಾರಣ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ನೀರಿನ ಸೌಲಭ್ಯ ಮಾಡಲಾಗುತ್ತದೆಯೇ? ಅರ್ಧ ದಿನ ತರಗತಿ ನಡೆಸುವ ಪ್ರಸ್ತಾವ ಇದೆಯೇ?

ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ‘ವಾಟರ್ ಬಾಯ್’ ವ್ಯವಸ್ಥೆ ಒದಗಿಸಲಾಗುತ್ತದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾ.21ರಂದು ಅಧೀಕ್ಷಕರ ಸಭೆ ಕರೆದು ಪರೀಕ್ಷಾ ಕೇಂದ್ರದ ವ್ಯವಸ್ಥೆಗಳ ಬಗ್ಗೆ ಮಾರ್ಗದರ್ಶನ ಮಾಡಲಿದ್ದಾರೆ.

ತಾಪಮಾನ ಹೆಚ್ಚುತ್ತಿರುವುದು ನಿಜ. ಇನ್ನು 20 ದಿನ ಶಾಲೆಗಳು ನಡೆಯಲಿದ್ದು, ತರಗತಿಗಳನ್ನು ಬೇಗ ಆರಂಭಿಸಿ, ಬೇಗ ಮುಗಿಸುವಂತೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದಲ್ಲಿ ಅದನ್ನು ತಕ್ಷಣ ಅನುಷ್ಠಾನಗೊಳಿಸಲಾಗುವುದು.

-ಸುರೇಶ್ ಮಂಗಳೂರು:

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯುತ್ ಸಮಸ್ಯೆ ಆಗದಂತೆ, ದೂರದಿಂದ ಬರುವ ಮಕ್ಕಳಿಗೆ ಬಸ್ ಸೌಲಭ್ಯಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ?

ದೂರದಿಂದ ಬರುವ ಮಕ್ಕಳು ಸಕಾಲದಲ್ಲಿ ಪರೀಕ್ಷಾ ಕೇಂದ್ರಕ್ಕೆ ತಲುಪಲು ಅನುಕೂಲವಾಗುವಂತೆ ಸಾರಿಗೆ ಬಸ್‌ಗಳಲ್ಲಿ ಅವರಿಗೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ವಿನಂತಿಸಲಾಗುವುದು. ವಿದ್ಯುತ್ ವ್ಯತ್ಯಯ ಆಗದಂತೆ ಕೂಡ ಮೆಸ್ಕಾಂಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

- ಅಶ್ವಿನ್, ಬಿಜೈ

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕೊಠಡಿ ಹುಡುಕುವುದು ಸಮಸ್ಯೆಯಾಗಿ, ಅವರು ಕೆಲವೊಮ್ಮೆ ಗಲಿಬಿಲಿ ಆಗುವ ಸಂದರ್ಭಗಳಿರುತ್ತವೆ. ಇದಕ್ಕೆ ಕ್ರಮವಹಿಸಬೇಕು.

ಉತ್ತಮ ಸಲಹೆ. ನಮ್ಮ ಒಬ್ಬರು ಸಿಬ್ಬಂದಿಯನ್ನು ನೇಮಿಸಿ, ನಿಗದಿತ ಕೊಠಡಿ ಸಂಖ್ಯೆಯ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಗುವುದು.

-ಜಿ.ಕೆ.ಭಟ್: ಮಂಗಳೂರು

ಕೆಲವು ಮಕ್ಕಳಿಗೆ ಪರೀಕ್ಷಾ ಭಯ ಇರುತ್ತದೆ. ಪರೀಕ್ಷೆಗೆ ಹೆದರಿ ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳನ್ನು ಅಲ್ಲಲ್ಲಿ ಕೇಳುತ್ತೇವೆ. ಮಕ್ಕಳಿಗೆ ಮಾನಸಿಕ ತಜ್ಞರ ಮೂಲಕ ಆತ್ಮವಿಶ್ವಾಸ ಬೆಳೆಸುವ ಕಾರ್ಯ ಆಗಬೇಕು.

ಯಾವ ಮಕ್ಕಳು ಪರೀಕ್ಷೆಗೆ ಅಂಜುತ್ತಾರೆ ಎಂಬುದು ಆಯಾ ಶಾಲೆಯ ಶಿಕ್ಷಕರಿಗೆ ಗೊತ್ತಿರುತ್ತದೆ. ಶಾಲಾ ಮಟ್ಟದಲ್ಲಿ ಅಂತಹ ಮಕ್ಕಳಿಗೆ ಶಿಕ್ಷಕರು ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಾರೆ. ತಾಯಂದಿರನ್ನು ಶಾಲೆಗೆ ಕರೆದು ಮಕ್ಕಳ ಕಾಳಜಿ ಬಗ್ಗೆ ಮಾಹಿತಿ ನೀಡುತ್ತೇವೆ. ತಜ್ಞರಿಂದ ಮಕ್ಕಳಿಗೆ ಉಪನ್ಯಾಸ ಕೊಡಿಸುವ ಕಾರ್ಯವೂ ನಡೆಯುತ್ತದೆ.

- ಕೃಷ್ಣಪ್ರಿಯಾ, ಬಲ್ಮಠ

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಗೊಂಡ ಮೇಲೆ ಶಿಕ್ಷಕರು ಅಪ್‌ಡೇಟ್‌ ಆಗಲು ಇಲಾಖೆ ಏನು ಕ್ರಮ ಕೈಗೊಂಡಿದೆ, ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳಲು ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆಯೇ?

ಎನ್ಇಪಿ ಅನುಷ್ಠಾನಗೊಳಿಸಿದ ಮೊದಲ ರಾಜ್ಯ ಕರ್ನಾಟಕ. ನಮ್ಮ ರಾಜ್ಯದಲ್ಲೂ ಶೇ 100ರಷ್ಟು ಇನ್ನೂ ಅನುಷ್ಠಾನಗೊಂಡಿಲ್ಲ. ಹಂತಹಂತವಾಗಿ ಶಿಕ್ಷಕರನ್ನು ಇದಕ್ಕೆ ಅಣಿಗೊಳಿಸಲಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳ ಮೂಲಕ ತರಬೇತಿ ಕೊಡಲಾಗುತ್ತದೆ. ಶಿಕ್ಷಕರು ಅಪ್‌ಡೇಟ್‌ ಆಗಲು ‘ಗುರುಚೇತನ’ ಕಾರ್ಯಕ್ರಮ ಇತ್ತು. ಎನ್‌ಇಪಿ ಸಂಬಂಧ ಶಿಕ್ಷಣ ಇಲಾಖೆ ಮುಂದಿನ ಸಾಲಿನಲ್ಲಿ ಶಿಕ್ಷಕರಿಗೆ ಇನ್ನೂ ಹೆಚ್ಚಿನ ತರಬೇತಿ ನೀಡಲಿದೆ.

ಅಮೃತ್ ಪ್ರಭು ಗಂಜಿಮಠ

ಗಣಿತವನ್ನು ಕಡ್ಡಾಯ ವಿಷಯ ಮಾಡದೆ, ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಬೇಕು. ಮಕ್ಕಳ ಆಸಕ್ತಿ ವಿಷಯದ ಆಯ್ಕೆ ಇರಬೇಕು. ನಾಗೋರಿ ಪಕ್ಕದಲ್ಲಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಎರಡು ಶಾಲೆಗಳು ಇವೆ. ಎರಡು ಶಾಲೆಗಳನ್ನು ವಿಲೀನಗೊಳಿಸಬೇಕು ಎಂದು ಹಲವು ಬಾರಿ ಮನವಿ ನೀಡಲಾಗಿದೆ.

ತಜ್ಞರ ಸಮಿತಿ ಹಲವು ಸುತ್ತುಗಳಲ್ಲಿ ಸಭೆ ನಡೆಸಿ, ಪಠ್ಯವನ್ನು ಸಿದ್ಧಪಡಿಸುತ್ತದೆ. ಇದು ಉನ್ನತ ಮಟ್ಟದಲ್ಲಿ ಆಗಬೇಕಾದ ನಿರ್ಧಾರ. ಇನ್ನು ಮುಂದೆ ಎನ್‌ಇಪಿ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿಷಯಗಳ ಆಯ್ಕೆಗೆ ಅವಕಾಶ ಇರುತ್ತದೆ.ಶಾಲೆ ವಿಲೀನ ಸರ್ಕಾರದ ಮಾನದಂಡದಂತೆ ನಡೆಯುತ್ತದೆ.

ಆರ್ಯ, ಉರ್ವ:

ಪರೀಕ್ಷೆಯಲ್ಲಿ ಕೋರ್ ವಿಷಯಗಳಲ್ಲಿ ಹೆಚ್ಚು ಅಂಕಗಳಿಸಲು ಏನು ಮಾಡಬೇಕು?

ಪರೀಕ್ಷೆ ಪೂರ್ವ ತಯಾರಿ ನಡೆಸುವಾಗ ಯಾವುದೇ ಅನುಮಾನ ಬಂದರೆ, ಆಯಾ ವಿಷಯದ ಶಿಕ್ಷಕರಿಗೆ ಕರೆ ಮಾಡಿ ಅನುಮಾನ ಬಗೆಹರಿಸಿಕೊಳ್ಳಿ. ಪ್ರಶ್ನೆಪತ್ರಿಕೆ ಬ್ಯಾಂಕ್‌ ಬಳಸಿ ಹೆಚ್ಚು ಪ್ರಶ್ನೆಗಳನ್ನು ಬಿಡಿಸುವುದು ಅನುಕೂಲ. ಪ್ರಶ್ನೆಪತ್ರಿಕೆ ಕೈಗೆ ಸಿಕ್ಕಿದ ಕೂಡಲೇ ಭಯಗೊಳ್ಳಬೇಡಿ. ಇಡೀ ಪ್ರಶ್ನೆಪತ್ರಿಕೆಯನ್ನು ಒಮ್ಮೆ ಓದಿ, ಶಾಂತವಾಗಿ ಯೋಚಿಸಿ. ಸರಿಯಾಗಿ ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆಯಿರಿ.

ಸಂಜಿತಾ, ಮಂಗಳೂರು

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಏನೆಲ್ಲ ಕ್ರಮಗಳು ನಡೆಯುತ್ತಿವೆ.

ಸರ್ಕಾರಿ ಶಾಲೆಗಳಲ್ಲಿ ಎಲ್ಲವೂ ಉಚಿತವಾಗಿ ಸಿಗುತ್ತವೆ, ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂಬ ಕುರಿತ ಫ್ಲೆಕ್ಸ್‌ಗಳನ್ನು ಶೈಕ್ಷಣಿಕ ವರ್ಷ ಆರಂಭದ ಪೂರ್ವದಲ್ಲಿ ಪ್ರಮುಖ ಪ್ರದೇಶಗಳಲ್ಲಿ ಹಾಕಲು ಯೋಚಿಸಲಾಗಿದೆ.

ಉತ್ತಮ ಫಲಿತಾಂಶಕ್ಕೆ ಪ್ರಯತ್ನ

ಕೋವಿಡ್ ಕಾರಣಕ್ಕೆ ಹಿಂದಿನ ಎರಡು ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಬದಲಾವಣೆ ಮಾಡಲಾಗಿತ್ತು. ಆದರೆ, ಈ ಬಾರಿ 2019ರ ಮಾದರಿಯಲ್ಲೇ ಪ್ರಶ್ನೆಪತ್ರಿಕೆ ಇರಲಿದೆ. ಕಳೆದ ವರ್ಷ ಮೇ 16ಕ್ಕೇ ಶಾಲೆಗಳಲ್ಲಿ ತರಗತಿ ಪ್ರಾರಂಭಿಸಿ, ‘ಕಲಿಕಾ ಚೇತರಿಕೆ’ ಮೂಲಕ ಶೈಕ್ಷಣಿಕ ಹಿನ್ನಡೆಯನ್ನು ಸರಿದೂಗಿಸಲು ‍ಪ್ರಯತ್ನಿಸಲಾಗಿದೆ.

ತಾಲ್ಲೂಕು ಮಟ್ಟದಲ್ಲಿ ಪ್ರಶ್ನೆಪತ್ರಿಕೆ ಬ್ಯಾಂಕ್, ಸಬ್ಜೆಕ್ಟ್ ಫೋರಮ್‌ ಮೂಲಕ ಮಕ್ಕಳಿಗೆ ಸಂಭವನೀಯ ಪ್ರಶ್ನೆಗಳ ಪುನರ್ ಮನನ, ಶಾಲಾ ಅವಧಿಯ ಪೂರ್ವ ಮತ್ತು ನಂತರ ಹೆಚ್ಚುವರಿ ತರಗತಿ ಹೀಗೆ ಪ್ರತಿ ಶಾಲೆಯಲ್ಲಿ ಮುಖ್ಯ ಶಿಕ್ಷಕರು, ವಿಷಯವಾರು ಶಿಕ್ಷಕರು ವಿಶೇಷ ಶ್ರಮವಹಿಸಿ ಮಕ್ಕಳನ್ನು ಅಂತಿಮ ಪರೀಕ್ಷೆಗೆ ಸಿದ್ಧಗೊಳಿಸಿದ್ದಾರೆ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷೆಯ ನೋಡಲ್ ಅಧಿಕಾರಿ ವೆಂಕಟೇಶ ನಾಯಕ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT