ಶನಿವಾರ, ಸೆಪ್ಟೆಂಬರ್ 24, 2022
21 °C
ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಎಸ್‌ಡಿಪಿಐ ಕಚೇರಿಗಳಲ್ಲಿ ಸ್ಥಳ ಮಹಜರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಳ್ಯ: ಬಿಜೆಪಿ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿಸಿರುವ ಆರೋಪಿಗಳನ್ನು ಪೊಲೀಸರು ಸ್ಥಳ ಮಹಜರು ನಡೆಸುವ ಸಲುವಾಗಿ ಇಲ್ಲಿನ ಹಾಗೂ ಬೆಳ್ಳಾರೆಯ ಎಸ್‌ಡಿಪಿಐ ಕಚೇರಿಗಳಿಗೆ ಸೋಮವಾರ ಕರೆದೊಯ್ದರು.

ಪ್ರಕರಣ ಸಂಬಂಧ ಭಾನುವಾರ ಬಂಧಿಸಲಾಗಿದ್ದ ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಾಲ್ ಮತ್ತು ಸುಳ್ಯ ನಾವೂರು ನಿವಾಸಿ ಆಬಿದ್‌ನನ್ನು ಪುತ್ತೂರಿನ ಡಿವೈಎಸ್ಪಿ ಡಾ.ಪಿ. ಗಾನಾ ಕುಮಾರ್ ನೇತೃತ್ವದಲ್ಲಿ ಸೋಮವಾರ ಸಂಜೆ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಕೃತ್ಯಕ್ಕೆ ಬಳಸಲಾದ ಬೈಕ್‌ ವ್ಯವಸ್ಥೆ ಮಾಡಿದ್ದು ನೌಫಾಲ್‌ ಹಾಗೂ ಆಬೀದ್‌ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ನ್ಯಾಯಾಲಯಕ್ಕೆ ಹಾಜರುಪಡಿಸುವುದಕ್ಕೆ ಮುನ್ನ ಆರೋಪಿಗಳನ್ನು ಪೊಲೀಸರು ಅನೇಕ ಸ್ಥಳಗಳಿಗೆ ಕರೆದೊಯ್ದರು. ಕೃತ್ಯಕ್ಕೆ ಸಂಚು ನಡೆಸಿದ್ದರು ಎನ್ನಲಾದ ಸುಳ್ಯ ಮತ್ತು ಬೆಳ್ಳಾರೆಯ ಕೆಲವು ಸ್ಥಳಗಳಲ್ಲಿ ಆರೋಪಿಗಳ ಸಮ್ಮುಖದಲ್ಲಿ ಮಹಜರು ನಡೆಸಿದರು.  

‘ಪ್ರಕರಣದ ಆರೋಪಿಗಳಾದ ನೌಫಾಲ್‌ ಹಾಗೂ ಆಬೀದ್‌ನನ್ನು ಸ್ಥಳ ಮಹಜರಿಗೆ ಕರೆದೊಯ್ದಿದ್ದೇವೆ. ತನಿಖೆಯ ಹೆಚ್ಚಿನ ವಿವರಗಳನ್ನು ಈ ಹಂತದಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಷ್‌ ಸೋನಾವಣೆ ‘ಪ್ರಜಾವಾಣಿ’ಗೆ ತಿಳಿಸಿದರು.

ಆರೋಪಿಗಳಿಬ್ಬರನ್ನು ಸುಳ್ಯ ನ್ಯಾಯಾಲಯಕ್ಕೆ ಸೋಮವಾರ ಸಂಜೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ಕಿರಿಯ ಸಿವಿಲ್ ನ್ಯಾಯಾಧೀಶರಾದ ಅರ್ಪಿತಾ ಅವರು ಆರೋಪಿಗಳಿಗೆ ಆ.12 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಪ್ರವೀಣ್‌ ನೆಟ್ಟಾರು ಅವರನ್ನು ಬೆಳ್ಳಾರೆಯಲ್ಲಿ ಜುಲೈ 26ರಂದು ರಾತ್ರಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಎಲ್ಲರೂ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರೋಪಿಗಳಾದ ಜಾಕೀರ್‌ ಹಾಗೂ ಶಫೀಕ್‌ ಅವರನ್ನು ಜುಲೈ 28ರಂದು ಹಾಗೂ ಮತ್ತಿಬ್ಬರು ಆರೋಪಿಗಳಾದ ಬೆಳ್ಳಾರೆ ಪಳ್ಳಿಮಜಲುವಿನ ಸದ್ದಾಂ ಹಾಗೂ ಹ್ಯಾರಿಸ್‌ನನ್ನು ಆ.2ರಂದು ಬಂಧಿಸಲಾಗಿತ್ತು. ಆರೋಪಿಗಳ ವಿರುದ್ಧ ಪೊಲೀಸರು 1967ರ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆಯ (ಯುಎಪಿಎ) ಸೆಕ್ಷನ್ 16 ಹಾಗೂ ಸೆಕ್ಷನ್‌ 18ರ ಅಡಿ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು