ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್: 142 ಕಿ.ಮೀ ನಡೆದೇ ಸಾಗಿದ ಗರ್ಭಿಣಿ

ಲಾಕ್‌ ಡೌನ್‌ನಿಂದ ಅತಂತ್ರರಾದ ವಿಜಯಪುರದ ಕಾರ್ಮಿಕರು
Last Updated 8 ಏಪ್ರಿಲ್ 2020, 20:14 IST
ಅಕ್ಷರ ಗಾತ್ರ

ಉಳ್ಳಾಲ: ಲಾಕ್ ಡೌನ್‌ನಿಂದ ಅತಂತ್ರ ಸ್ಥಿತಿಯಲ್ಲಿರುವ ವಿಜಯಪುರ ಜಿಲ್ಲೆಯ ಗರ್ಭಿಣಿಯೊಬ್ಬರು ಸೇರಿದಂತೆ ಎಂಟು ಮಂದಿ ಕಾರ್ಮಿಕರು ಕೇರಳ ಕಣ್ಣೂರಿನಿಂದ ನಡೆದುಕೊಂಡೇ ಬುಧವಾರ ತೊಕ್ಕೊಟ್ಟು ತಲುಪಿದ್ದಾರೆ. ಗರ್ಭಿಣಿ ಕಾಲ್ನಡಿಗೆಯಲ್ಲೇ 142 ಕಿ.ಮೀ. ಕ್ರಮಿಸಿದ್ದಾರೆ.

ಕಟ್ಟಡ ನಿರ್ಮಾಣ ಕೆಲಸಕ್ಕಾಗಿ ರಾಜ್ಯದ ವಿಜಯಪುರ ಜಿಲ್ಲೆಯ ಕಾರ್ಮಿಕರು ಕೇರಳದ ಕಣ್ಣೂರಿಗೆ ತೆರಳಿದ್ದರು. ಕೋವಿಡ್–19 ಸೋಂಕು ತಡೆಯಲು ಲಾಕ್‌ ಡೌನ್‌ ಘೋಷಣೆಯಾದ ಬಳಿಕ ಅಲ್ಲಿನ ಗುತ್ತಿಗೆದಾರ ಕಾರ್ಮಿಕರಿಗೆ ವಾಪಸ್‌ ಊರಿಗೆ ಹೋಗುವಂತೆ ಸೂಚಿಸಿದ್ದ. ಆ ಬಳಿಕ ಕೆಲಸದ ಸ್ಥಳದಿಂದ ಹೊರಟಿದ್ದ ಎಂಟು ಜನರು ನಾಲ್ಕು ದಿನಗಳಿಂದ ನಡೆಯುತ್ತಲೇ ಇದ್ದಾರೆ.

ಹೇಗಾದರೂ ಊರು ತಲುಪಲೇಬೇಕು ಎಂಬ ನಿರ್ಧಾರಕ್ಕೆ ಬಂದಿರುವ ಕಾರ್ಮಿಕರು, ಮಾರ್ಗ ಮಧ್ಯದಲ್ಲಿ ಆಹಾರ ಸಿಕ್ಕಾಗ ಸೇವಿಸಿದ್ದಾರೆ. ಏನೂ ಸಿಗದೇ ಇದ್ದಾಗ ಹಸಿದ ಹೊಟ್ಟೆಯಲ್ಲೇ ನಡಿಗೆ ಮುಂದುವರಿಸಿದ್ದಾರೆ. ತುಂಬು ಗರ್ಭಿಣಿ ಕೂಡ ಹಸಿವಿನ ನಡುವೆಯೇ 142 ಕಿ.ಮೀ. ದೂರವನ್ನು ಕ್ರಮಿಸಿ ಬಂದಿದ್ದಾರೆ.

ನಡಿಗೆಯಲ್ಲೇ ಸಾಗುತ್ತಿರುವ ಈ ಕಾರ್ಮಿಕರನ್ನು ಸ್ಥಳೀಯ ಜಿಲ್ಲಾಡಳಿತವಾಗಲೀ, ಇತರೆ ಅಧಿಕಾರಿಗಳಾಗಲೀ ವಿಚಾರಿಸುವ ಗೋಜಿಗೂ ಹೋಗಿಲ್ಲ. ಅವರ ಆರೋಗ್ಯ ತಪಾಸಣೆ ಕೂಡ ನಡೆಸಿಲ್ಲ. ರಾಜ್ಯದ ಗಡಿಯಲ್ಲೂ ಅವರ ಆರೋಗ್ಯ ತಪಾಸಣೆ ನಡೆಸಿಲ್ಲ. ಎಲ್ಲಿಯೂ ಯಾರೊಬ್ಬರೂ ತಮ್ಮ ನೆರವಿಗೆ ಬಂದಿಲ್ಲ, ಆರೋಗ್ಯ ತಪಾಸಣೆಯೂ ಆಗಿಲ್ಲ ಎಂದು ಈ ಕಾರ್ಮಿಕರೇ ಹೇಳಿದ್ದಾರೆ.

ಕಣ್ಣೂರು, ಕಾಸರಗೋಡು ಸೇರಿದಂತೆ ಕೇರಳದಲ್ಲಿ ಕೊರೊನಾ ವೈರಸ್‌ನಿಂದ ಸೋಂಕಿತರಾದವರ ಸಂಖ್ಯೆ ಜಾಸ್ತಿ ಇದೆ. ಆ ಮಾರ್ಗವಾಗಿ ಬಂದ ಈ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸದೇ ಇರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕ್ರಮಕ್ಕೆ ಆಗ್ರಹ:ಕಾರ್ಮಿಕರ ಕುರಿತು ಕಾಳಜಿ ವಹಿಸದೇ, ಅವರನ್ನು ಕಾಲ್ನಡಿಗೆಯಲ್ಲೇ ಕಳುಹಿಸಿರುವ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಬೇಕೆಂಬ ಆಗ್ರಹ ಕೇಳಿಬಂದಿದೆ.

ಜಿಲ್ಲಾಡಳಿತ ತಕ್ಷಣವೇ ಈ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಬೇಕು. ಸೋಂಕು ಕಂಡುಬರದಿದ್ದಲ್ಲಿ ಅವರಿಗೆ ಊರು ತಲುಪಲು ನೆರವು ಒದಗಿಸಬೇಕು. ಗರ್ಭಿಣಿಗೆ ಅಗತ್ಯ ನೆರವನ್ನು ತ್ವರಿತವಾಗಿ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT