ಬುಧವಾರ, ಸೆಪ್ಟೆಂಬರ್ 18, 2019
21 °C
ಮೋಸದ ಜಾಲ ‘ಮಿಡ್ ಬ್ರೈನ್ ಆಕ್ಟಿವೇಶನ್ ’ಪರ ಪೊಲೀಸರು: ನರೇಂದ್ರ ನಾಯಕ್‌

ಇನ್‌ಸ್ಪೆಕ್ಟರ್‌ ಶರಣಗೌಡ ವಿರುದ್ಧ ಕ್ರಮಕ್ಕೆ ಆಗ್ರಹ

Published:
Updated:
Prajavani

ಮಂಗಳೂರು: ಮೋಸದ ಜಾಲ ‘ಮಿಡ್ ಬ್ರೈನ್ ಆಕ್ಟಿವೇಶನ್ ’ ವಿರುದ್ಧ ಗ್ರಾಹಕರ ವೇದಿಕೆ ನ್ಯಾಯಾಲಯದಲ್ಲಿ ಹಾಕಿರುವ ಪ್ರಕರಣವನ್ನು ವಾಪಸ್ ಪಡೆಯುವಂತೆ ವ್ಯಕ್ತಿಯೊಬ್ಬರಿಗೆ ಬೆದರಿಕೆಯೊಡ್ಡಿ ಅನುಚಿತವಾಗಿ ನಡೆದುಕೊಂಡಿರುವ ಬಂಟ್ವಾಳ ಇನ್‌ಸ್ಪೆಕ್ಟರ್‌ ಶರಣಗೌಡ ಹಾಗೂ ಎಎಸ್‌ಐ ಧನಂಜಯ್ಯ ಮತ್ತವರ ತಂಡದ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ ಎಂದು ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಬಂಟ್ವಾಳದ ಉದ್ಯಮಿ ಕೇಶವಮೂರ್ತಿ ಅವರನ್ನು ಈ ಪ್ರಕರಣದಲ್ಲಿ ಬಲಿಪಶುವನ್ನಾಗಿ ಮಾಡಲಾಗಿದೆ. ‘ಮಿಡ್ ಬ್ರೈನ್ ಆಕ್ಟಿವೇಶನ್’ ಜಾಲದ ಪರ ನಿಂತಿರುವ ಬಂಟ್ವಾಳ ಪೊಲೀಸ್ ಅಧಿಕಾರಿಗಳು ದೂರುದಾರ ಕೇಶವಮೂರ್ತಿ ಅವರಿಗೆ ಬೆದರಿಕೆ ಒಡ್ಡಿರುವುದು ಪೊಲೀಸ್ ದೌರ್ಜನ್ಯಕ್ಕೆ ಸಾಕ್ಷಿ. ವಿದ್ಯಾವಂತರಾಗಿರುವ ಕೇಶವಮೂರ್ತಿ ಅವರನ್ನು ಪೊಲೀಸರು ಹೀಗೆ ನಡೆಸಿಕೊಂಡರೆ, ಜನ ಸಾಮಾನ್ಯರ ಪರಿಸ್ಥಿತಿ ಏನು? ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಆಗಬೇಕು ಎಂದು ಅವರು ಒತ್ತಾಯಿಸಿದರು.

ಏನಿದು ಪ್ರಕರಣ?

2017 ರಲ್ಲಿ ಪುತ್ತೂರಿನಲ್ಲಿ ರಾಜೇಂದ್ರ ಕುಪ್ಪೆಟ್ಟಿ ಎಂಬುವವರು ‘ಮಿಡ್ ಬ್ರೈನ್ ಆಕ್ಟಿವೇಶನ್ ಸಂಸ್ಥೆ ನಡೆಸುತ್ತಿದ್ದರು. 50 ರಿಂದ 100 ರಷ್ಟು ಪೋಷಕರು ತಮ್ಮ ಮಕ್ಕಳನ್ನು ಅಲ್ಲಿಗೆ ಸೇರಿಸಿದ್ದರು. ಈ ಮೋಸದ ಜಾಲವನ್ನು ಬಹಿರಂಗಪಡಿಸಿದ ಬಳಿಕ ಆ ಸಂಸ್ಥೆ ನಿಲ್ಲಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಅದರಂತೆ ಸಂಸ್ಥೆಯ ಕಾರ್ಯ ಚಟುವಟಿಕೆ ಸ್ಥಗಿತಗೊಂಡಿತ್ತು. ಅಲ್ಲಿ ತಮ್ಮ ಮಕ್ಕಳನ್ನು ಸೇರಿಸಿದವರಲ್ಲಿ ಇಬ್ಬರು ಪೋಷಕರಾದ ಕೇಶವಮೂರ್ತಿ ಮತ್ತು ಪ್ರಶಾಂತ್ ಅವರು ರಾಜೇಂದ್ರ ಕುಪ್ಪೆಟ್ಟಿ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅದೀಗ ವಿಚಾರಣೆ ಕೊನೆಯ ಹಂತದಲ್ಲಿದೆ. ಈ ವೇಳೆಯಲ್ಲಿ ಪೊಲೀಸರು ಈ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿದ್ದಾರೆ. ಒತ್ತಾಯ ಪೂರ್ವಕವಾಗಿ ಮುಚ್ಚಳಿಕೆ ಬರೆದುಕೊಡುವಂತೆ ಒತ್ತಡ ಹಾಕಲಾಗುತ್ತಿದೆ  ಎಂದು ನರೇಂದ್ರ ನಾಯಕ್ ತಿಳಿಸಿದರು.

ಈ ನಡುವೆ, 2018 ರಲ್ಲಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಚೆಕ್ ಅಮಾನ್ಯ ಪ್ರಕರಣದಲ್ಲಿ (ಬೌನ್ಸ್‌) ಗುರುಶಿವ ದತ್ ಎಂಬುವವರ ವಿರುದ್ಧ ಕೇಶವ ಮೂರ್ತಿ ಅವರು ದೂರು ದಾಖಲಿಸಿದ್ದರು. ಇದೀಗ ರಾಜೇಂದ್ರ ಕುಪ್ಪೆಟ್ಟಿಯು ಗುರುಶಿವದತ್ ಜತೆ ಸೇರಿ, ಕೇಶವಮೂರ್ತಿ ಅವರು ₹60 ಸಾವಿರ ಪಡೆದು ಕ್ರಿಪ್ಟೊ ಕರೆನ್ಸಿ ನೀಡುತ್ತೇನೆಂದು ಹೇಳಿ ವಂಚಿಸಿದ್ದಾಗಿ ಬಂಟ್ವಾಳ ಠಾಣೆಯಲ್ಲಿ ದೂರು ನೀಡಿದ್ದಾರೆ.  ಇದೇ ವಿಚಾರಕ್ಕೆ ಸಂಬಂಧಿಸಿ ಮೇ 7 ರಂದು ತನಿಖೆ ಮಾಡುವುದಕ್ಕೆ ಕೇಶವ ಮೂರ್ತಿ ಅವರನ್ನು ಬಂಟ್ವಾಳ ಎಎಸ್‌ಐ ಧನಂಜಯ ಠಾಣೆಗೆ ಕರೆಯಿಸಿದ್ದರು. ಅಲ್ಲಿಗೆ ಹೋದಾಗ ಇನ್‌ಸ್ಪೆಕ್ಟರ್‌ ಶರಣ ಗೌಡ ಅವರು ಈ ಹಿಂದಿನ 2 ಪ್ರಕರಣಗಳನ್ನು ವಾಪಸ್ ಪಡೆಯದಿದ್ದರೆ ಬಿಟ್‌ ಕಾಯಿನ್‌ ಪ್ರಕರಣ ದಾಖಲಿಸಿ ಜೈಲಿಗೆ ಹಾಕುವುದು ಹಾಗೂ ಸಿಒಡಿ ತನಿಖೆಗೆ ಒಪ್ಪಿಸುವುದಾಗಿ ಬೆದರಿಸಿ ಒತ್ತಾಯ ಪೂರ್ವಕವಾಗಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಅಲ್ಲದೆ ವೈಯಕ್ತಿಕವಾಗಿ ಕೇಶವಮೂರ್ತಿ ಮತ್ತು ಅವರ ಕುಟುಂಬಕ್ಕೆ ಹಾನಿ ಮಾಡುವುದಾಗಿಯೂ ಹೇಳಿದ್ದಾರೆ. ಪೊಲೀಸರು ಮಿಡ್ ಬ್ರೈನ್ ಆಕ್ಟಿವೇಶನ್ ಜಾಲದವರ ಪರ ನಿಂತು ದೂರುದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ. ನೊಂದ ಕೇಶವಮೂರ್ತಿ ಅವರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ವಿವಿಧ ಸಂಘಟನೆಗಳ ಪ್ರಮುಖರಾದ ವಾಸುದೇವ ಉಚ್ಚಿಲ್, ಸಂತೋಷ್ ಬಜಾಲ್, ಮಿಡ್ ಬ್ರೈನ್ ಆಕ್ಟಿವೇಶನ್ ವಿರುದ್ಧ ದೂರು ನೀಡಿರುವ ಪ್ರಶಾಂತ್ ಇದ್ದರು.

Post Comments (+)