ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂ.1 ರಿಂದ ಖಾಸಗಿ ಬಸ್‌ ಸಂಚಾರ

ಸಿಗದ ಮಾರ್ಗಸೂಚಿ; ಖಾಸಗಿ ಬಸ್‌ಗಳ ಮಾಲೀಕರಲ್ಲಿ ಗೊಂದಲ
Last Updated 24 ಮೇ 2020, 16:45 IST
ಅಕ್ಷರ ಗಾತ್ರ

ಮಂಗಳೂರು: ಲಾಕ್‌ಡೌನ್‌ ಬಳಿಕ ಸ್ಥಗಿತಗೊಂಡಿದ್ದ ಖಾಸಗಿ ಬಸ್‌ಗಳು ಜೂನ್ 1ರಿಂದ ರಸ್ತೆಗೆ ಇಳಿಯಲಿವೆ. ಆದರೆ, ಈ ಕುರಿತ ಮಾರ್ಗಸೂಚಿ ಹಾಗೂ ಅಧಿಸೂಚನೆಯನ್ನು ಆರ್‌ಟಿಎ ಇನ್ನೂ ಹೊರಡಿಸದೇ ಇರುವ ಕಾರಣ ಖಾಸಗಿ ಬಸ್ ಮಾಲೀಕರಲ್ಲಿ ಗೊಂದಲ ಮುಂದುವರಿದಿದೆ.

‘ಲಾಕ್‌ಡೌನ್ ಬಳಿಕ ಸ್ಥಗಿತಗೊಂಡಿದ್ದ ಬಸ್‌ಗಳ ಸಂಚಾರವನ್ನು, ಜೂನ್‌ 1ರಿಂದಲೇ ಆರಂಭಿಸುತ್ತೇವೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಮಾರ್ಗ ಸೂಚಿಯ ನಿರೀಕ್ಷೆಯಲ್ಲಿದ್ದೇವೆ.ಅಲ್ಲದೇ,ನಮ್ಮ ಕೆಲವು ಬೇಡಿಕೆಗಳನ್ನು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ಮುಂದಿಟ್ಟಿದ್ದು, ಈಡೇರಿಸುವಂತೆ ಮನವಿ ಮಾಡಿದ್ದೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದರು.

‘ಖಾಸಗಿ ಬಸ್‌ಗಳ ಸಂಚಾರ ಆರಂಭಕ್ಕೂ ಪೂರ್ವದಲ್ಲಿ ಕೇಂದ್ರ ಆರೋಗ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದ ಆಧಾರದಲ್ಲಿ ಪ್ರಾದೇಶಿಕ ಸಂಚಾರ ಪ್ರಾಧಿಕಾರ (ಆರ್‌ಟಿಎ)ವು ಕೋವಿಡ್‌ –19 ಮಾರ್ಗ ಸೂಚಿಗಳನ್ನು ನೀಡಲಿದೆ.

ಅಲ್ಲದೇ, ಖಾಸಗಿ ಬಸ್ ಮಾಲೀಕರ ಬೇಡಿಕೆಗಳ ಕುರಿತು ಆರ್‌ಟಿಎ ಹಾಗೂ ರಾಜ್ಯ ಸರ್ಕಾರವು ನಿರ್ಧಾರ ಪ್ರಕಟಿಸಲಿದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ. ವರ್ಣೇಕರ ತಿಳಿಸಿದರು.

ಬಸ್‌ ಮಾಲೀಕರಲ್ಲಿ ಗೊಂದಲ: ಬಸ್‌ ಸಂಚಾರ ಆರಂಭಿಸಿದರೆ, ದಿನಕ್ಕೆ ಎಷ್ಟು ಬಾರಿ ಸ್ಯಾನಿಟೈಸ್‌ ಮಾಡಬೇಕು. ಏಕಕಾಲಕ್ಕೆ ಎಷ್ಟು ಪ್ರಯಾಣಿಕರು ಪ್ರಯಾಣಿಸಬಹುದು, ಬಸ್‌ನಲ್ಲಿ ಸ್ಯಾನಿಟೈಸರ್‌ ಇಡಬೇಕೇ, ನಿಗದಿತ ರೂಟ್‌ನಲ್ಲಿ ಮಾತ್ರ ಸಂಚರಿಸಬೇಕೇ, ಎಲ್ಲೆಲ್ಲಿ ನಿಲುಗಡೆ ನೀಡಬೇಕು, ಬಸ್‌ದರ ಏರಿಕೆ ಎಂಬಿತ್ಯಾದಿ ಪ್ರಶ್ನೆಗಳು ಅವರನ್ನು ಕಾಡುತ್ತಿವೆ. ಹೀಗಾಗಿ, ಮಾರ್ಗಸೂಚಿಯ ನಿರೀಕ್ಷೆಯಲ್ಲಿದ್ದಾರೆ.

ನರ್ಮ್ ಬಸ್‌ ದೂರ: ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಲ್ಲಿ ಒಟ್ಟು 42 ನರ್ಮ್ ಬಸ್‌ಗಳಿದ್ದು, ಸಂಚಾರ ಆರಂಭಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದರು.ಆದರೆ, ಈ ತನಕ ಮುಡಿಪುಗೆ ಒಂದು ಬಸ್‌ ಹೊರತು ಪಡಿಸಿ, ಬೇರೆ ಯಾವುದೂ ಸಂಚಾರ ಆರಂಭಿಸಿಲ್ಲ.

‘ನಮ್ಮ ವಿಭಾಗ (ಉಡುಪಿ, ಕುಂದಾಪುರ, ಮಂಗಳೂರು)ದಲ್ಲಿ ಒಟ್ಟು 42 ನರ್ಮ್‌ ಬಸ್‌ಗಳಿವೆ. ಮಂಗಳೂರಿನಲ್ಲಿ ಒಂದು ನರ್ಮ್‌ ಬಸ್‌ ಮುಡಿಪಿಗೆ ಸಂಚಾರ ಮಾಡಿದೆ. ಆದರೆ, ನಾವು ಸದ್ಯ ಪ್ರಯಾಣಿಕರ ಬೇಡಿಕೆ, ಕೋವಿಡ್‌–19 ಮಾರ್ಗಸೂಚಿ ಪಾಲನೆಯ ಅನ್ವಯ ಕಾರ್ಯ ನಿರ್ವಹಿಸುತ್ತಿದ್ದೇವೆ. ಹೀಗಾಗಿ, ಪರಿಸ್ಥಿತಿ ಅವಲೋಕಿಸಿಕೊಂಡು ಬಸ್‌ಗಳನ್ನು ಬಿಡುತ್ತಿದ್ದೇವೆ’ ಎಂದು ಕೆಎಸ್ಆರ್‌ಟಿಸಿ ಮಂಗಳೂರು ವಿಭಾಗೀಯನಿಯಂತ್ರಣಾಧಿಕಾರಿ ಅರುಣ್‌ಕುಮಾರ್ ಸ್ಪಷ್ಟಪಡಿಸಿದರು.

ಬಸ್‌ ದರ ಏರಿಕೆಗೆ ಮನವಿ

‘2013ರಲ್ಲಿ ನಾವು ಇಟ್ಟಿದ್ದ ಬಸ್ ಟಿಕೆಟ್‌ ದರ ಏರಿಕೆಯ ಪ್ರಸ್ತಾವವನ್ನು ಅಂಗೀಕರಿಸುವಂತೆ ಮತ್ತೆ ಮನವಿ ಮಾಡಿದ್ದೇವೆ. ಕೋವಿಡ್–19 ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯೂ ನಿರ್ಬಂಧಗೊಳ್ಳಲಿದೆ. ಇದರಿಂದ ನಮಗೆ ನಷ್ಟ ಹೆಚ್ಚಲಿದೆ. ಅದಕ್ಕಾಗಿ ಆರ್‌ಟಿಎ ಶೀಘ್ರವೇ ನಮ್ಮ ಮನವಿಯನ್ನು ಪುರಸ್ಕರಿಸಿ, ದರ ಏರಿಕೆ ಅಧಿಸೂಚನೆ ಹೊರಡಿಸಬೇಕು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್‌ ಮಾಲೀಕರು ಮನವಿ ಮಾಡಿದ್ದಾರೆ.

‘ಖಾಸಗಿ ಬಸ್ ಮಾಲೀಕರು ದರ ಏರಿಕೆಯ ಪ್ರಸ್ತಾವ ಇಟ್ಟಿದ್ದಾರೆ. ಈ ಬಗ್ಗೆ ಆರ್‌ಟಿಎ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೇ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ. ವರ್ಣೇಕರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT