ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸ್ತುತ, ಪ್ರಾಯೋಗಿಕ ಪಠ್ಯಕ್ರಮ

ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ
Last Updated 18 ಡಿಸೆಂಬರ್ 2019, 15:46 IST
ಅಕ್ಷರ ಗಾತ್ರ

ಮಂಗಳೂರು: ಅಧ್ಯಯನ ಮಂಡಳಿ (ಬಿಒಎಸ್)ಯಲ್ಲಿ ಕ್ಷೇತ್ರ ತಜ್ಞರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ‘ಪ್ರಸ್ತುತ ಹಾಗೂ ಪ್ರಾಯೋಗಿಕ ಪಠ್ಯಕ್ರಮ’ವನ್ನು ಮಂಗಳೂರು ವಿಶ್ವವಿದ್ಯಾಲಯವುಮುಂದಿನ ಶೈಕ್ಷಣಿಕ ವರ್ಷದಲ್ಲಿ ಜಾರಿಗೊಳಿಸಲಿದೆ.

ವಿಶ್ವವಿದ್ಯಾಲಯದ ಆಡಳಿತ ಸೌಧದಲ್ಲಿ ಬುಧವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಮಾತನಾಡಿದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ, ‘ಈ ಪ್ರಕ್ರಿಯೆಗೆ ಜನವರಿ ಅಂತ್ಯದಲ್ಲಿ ರೂಪುರೇಷೆ ನೀಡಲಾಗುವುದು. ಮೂರು ವರ್ಷಕ್ಕೊಮ್ಮೆ ಬದಲಾಗಿ, ಪ್ರತಿ ವರ್ಷ ಪಠ್ಯಕ್ರಮ ಪರಿಷ್ಕರಿಸಲಾಗುವುದು’ ಎಂದರು.

‘ಉದ್ಯೋಗ ಹಾಗೂ ಉನ್ನತ ಶಿಕ್ಷಣದ ಬೇಡಿಕೆಗೆ ಅನುಗುಣವಾಗಿ ಪಠ್ಯಕ್ರಮ ರೂಪಿಸಬೇಕಾಗಿದೆ. ಆದರೆ, ಈಗಿರುವ ಪಠ್ಯಕ್ರಮವು ಪ್ರಸ್ತುತ ಹಾಗೂ ಔದ್ಯೋಗಿಕ ಅಲ್ಲ. ಉನ್ನತ ಶಿಕ್ಷಣಕ್ಕೂ ಪೂರಕವಾಗಿಲ್ಲ ಎಂಬ ಮಾತುಗಳು ತಜ್ಞರಿಂದ ಕೇಳಿಬರುತ್ತಿವೆ. ಅದಕ್ಕಾಗಿ ಬಿಒಎಸ್‌ನಲ್ಲಿ ವಿಷಯದ ಕ್ಷೇತ್ರ ತಜ್ಞರು ಹಾಗೂ ಪಠ್ಯದಲ್ಲಿ ಪ್ರಾಯೋಗಿಕತೆಗೆ ಒತ್ತು ನೀಡಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಬಿಒಎಸ್‌ಗೆ ಮೂರರಿಂದ ಒಂಭತ್ತು ಸದಸ್ಯರನ್ನು ನೇಮಕ ಮಾಡಬಹುದು. ಈ ಪೈಕಿ ನಾಲ್ಕರಿಂದ ಐದು ಮಂದಿ ಕ್ಷೇತ್ರ ತಜ್ಞರು ಇರಬೇಕಾಗುತ್ತದೆ. ಉದಾಹರಣೆಗೆ, ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದಂತೆ ಐಐಟಿ ಪ್ರಾಧ್ಯಾಪಕರು, ಕೈಗಾರಿಕೋದ್ಯಮಿಗಳು, ಲೆಕ್ಕಪರಿಶೋಧಕರು, ಮಾರುಕಟ್ಟೆ ತಜ್ಞರು ಮತ್ತಿತರರನ್ನು ಒಳಗೊಳ್ಳಬಹುದು’ ಎಂದು ವಿವರಿಸಿದರು.

‘ಇದರಿಂದ ನಮ್ಮ ಪ್ರಾಧ್ಯಾಪಕ ಬಳಗಕ್ಕೆ ಸ್ವಲ್ಪ ಕೆಲಸದ ಹೊರೆಯಾಗಬಹುದು. ಆದರೆ, ವಿದ್ಯಾರ್ಥಿ ಹಾಗೂ ವಿಶ್ವವಿದ್ಯಾಲಯದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅವರೇ ಪ್ರೋತ್ಸಾಹಿಸಿದ್ದಾರೆ’ ಎಂದು ಮುಗುಳ್ನಕ್ಕರು.

‘ಉತ್ತರ ಪತ್ರಿಕೆ, ಪ್ರಾಜೆಕ್ಟ್‌ಗಳ ಮೌಲ್ಯಮಾಪನವನ್ನೂ ಪರಿಣಾಮಕಾರಿಯಾಗಿ ಮಾಡಲಾಗುವುದು. ಬದಲಾವಣೆಗೆ ತೆರೆದುಕೊಳ್ಳದಿದ್ದರೆ, ಖಾಸಗಿ ವಿಶ್ವವಿದ್ಯಾಲಯಗಳು ಮುಂದೆ ಹೋಗುತ್ತವೆ. ನಾವು ಹಿಂದೆ ನಿಂತು ವೀಕ್ಷಿಸಬೇಕಾದ ದುಸ್ಥಿತಿ ಬರಬಹುದು’ ಎಂದು ಅವರು ಎಚ್ಚರಿಸಿದರು.

‘ಹಲವು ಕೋರ್ಸ್‌ಗಳಿಗೆ ಬೇಡಿಕೆ ಕುಸಿಯುತ್ತಿದೆ. ಹೀಗಾಗಿ ಬೋಧಕ ವರ್ಗವು ಎಚ್ಚೆತ್ತುಕೊಂಡು ಪ್ರಸ್ತುತ ಬೆಳವಣಿಗೆಗಳಿಗೆ ಸ್ಪಂದಿಸಲೇ ಬೇಕಾಗಿದೆ’ ಎಂದರು.

ಪದವಿ ಮಟ್ಟದ ರಸಾಯನಶಾಸ್ತ್ರ ಐಚ್ಛಿಕ ಕೋರ್ಸ್‌ ಪಠ್ಯಕ್ರಮ ಪರಿಷ್ಕರಣೆಯಲ್ಲಿ ತರಗತಿ ಜೊತೆ ಪ್ರಯೋಗಕ್ಕೂ ಆದ್ಯತೆ ನೀಡಿದ ಬಗ್ಗೆ ಶ್ಲಾಘಿಸಿದ ಅವರು, ‘ನಮ್ಮ ವಿವಿಧ ವಿಭಾಗಗಳಿಂದ ಮಾದರಿ ಪಠ್ಯಕ್ರಮಗಳು ಬರಬೇಕು’ ಎಂದು ಆಶಿಸಿದರು.

ಉಜಿರೆಯ ಎಸ್‌ಡಿಎಂ ಕಾಲೇಜು ಪ್ರಾರಂಭಿಸಿರುವ ವೃತ್ತಿಪರ ಪದವಿ (ಬಿ.ವೊ.)ಯ ಪಠ್ಯಕ್ರಮದ ಹೊಸತನಕ್ಕೆ ಸಭೆ ಶ್ಲಾಘಿಸಿತು.

ಉಜಿರೆಯ ಪ್ರಸನ್ನ ಕಾಲೇಜ್ ಆಫ್ ಎಜ್ಯುಕೇಶನ್ ಹಾಗೂ ಮೂಡುಬಿದಿರೆಯ ಆಳ್ವಾಸ್ ಕಾಲೇಜ್ ಆಫ್ ಎಜ್ಯುಕೇಶನ್‌ನ ವಿದ್ಯಾರ್ಥಿಗಳ ಆಂತರಿಕ ಅಂಕವನ್ನು ಮೊಡರೇಷನ್ ಸಮಿತಿ ಪರಿಗಣಿಸದ ಕಾರಣ, ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿದೆ. ಇಂತಹ ನಿಯಮಾವಳಿಯನ್ನು ನಾವು ವಿದ್ಯಾರ್ಥಿಯ ಹಿತದೃಷ್ಟಿಯಿಂದ ರೂಪಿಸಬೇಕು ಎಂದು ಸಭೆ ಅಭಿಪ್ರಾಯ ಪಟ್ಟಿತು.

‘ಪರಿಸರ ಸ್ನೇಹಿ ಆವರಣ, ಕಾಗದ ರಹಿತ ಕಚೇರಿ, ಬಾಲಕರ ವಸತಿ ನಿಲಯದ ನೀರಿನ ಸಂಸ್ಕರಣೆ ಮತ್ತಿತರ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಕುಲಸಚಿವ ಡಾ.ಎ.ಎಂ. ಖಾನ್, ಕುಲಸಚಿವ (ಮೌಲ್ಯಮಾಪನ) ಡಾ.ವಿ.ರವೀಂದ್ರಾಚಾರ್ಯ, ಹಣಕಾಸು ಅಧಿಕಾರಿ ಶ್ರೀಪತಿ ಕಲ್ಲೂರಾಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT