ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈತೋಟ ರಕ್ಷಣೆಗೆ ಜೈವಿನ ಬೇಲಿ’

ಸರ್ಕಾರಿ ಶಾಲೆಗಳಲ್ಲಿ ಕೈತೋಟ ನಿರ್ಮಾಣಕ್ಕೆ ಚಾಲನೆ
Last Updated 4 ಜುಲೈ 2018, 12:59 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಕೈತೋಟ ನಿರ್ಮಾಣಕ್ಕೆ ಪೂರಕವಾಗಿ ಶಾಲಾ ಮುಖ್ಯೋಪಾಧ್ಯಾಯರಿಗೆ ಮಾಹಿತಿ ಕಾರ್ಯಾಗಾರ ಬುಧವಾರ ನಗರದ ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.

ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಲಾ ಪರಿಸರದಲ್ಲಿ ಕೈತೋಟ ನಿರ್ಮಾಣಕ್ಕೆ ಉದ್ಯೋಗ ಖಾತರಿ ಯೋಜನೆಯನ್ನು ಪೂರಕವಾಗಿ ಬಳಸಿಕೊಳ್ಳಲಾಗುವುದು. ಇದರಿಂದ ಕೈತೋಟ ನಿರ್ಮಾಣಕ್ಕೆ ಉತ್ತೇಜನ ದೊರಕಲಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಡಾ. ಎಂ.ಆರ್ ರವಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ 407 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಈಗಾಗಲೇ ಕೈತೋಟ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಅಕ್ಷರದಾಸೋಹ ಪ್ರಯೋಜನ ಪಡೆಯುತ್ತಿರುವ 1,453 ಶಾಲೆಗಳಲ್ಲಿ ಕೈತೋಟ ನಿರ್ಮಿಸುವ ಉದ್ದೇಶವಿಟ್ಟುಕೊಳ್ಳಲಾಗಿದೆ. ಈ ಪೈಕಿ 942 ಶಾಲೆಗಳು ಗ್ರಾಮೀಣ ಪ್ರದೇಶದಲ್ಲಿದ್ದು, ಇಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ನೆರವು ಪಡೆದು ಕೈತೋಟ ನಿರ್ಮಿಸಲಾಗುವುದು ಎಂದರು.

ಜಿಲ್ಲೆಯ 730 ಶಾಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಲಭ್ಯವಿದೆ. ಈ ಜಮೀನಿನಲ್ಲಿ ಕೈತೋಟ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. ಅಲ್ಲದೇ ಕೈತೋಟ ನಿರ್ಮಾಣದ ಬಳಿಕ ಅವುಗಳ ರಕ್ಷಣೆಗೆ ಜೈವಿಕ ಬೇಲಿ ನಿರ್ಮಿಸಲಾಗುವುದು. ಶಾಲಾ ವಿದ್ಯಾರ್ಥಿಗಳನ್ನು ಕೈತೋಟ ಚಟುವಟಿಕೆಗಳಲ್ಲಿ ತೊಡಗಿಸಿ, ಅವರನ್ನೂ ಪರಿಸರ ಮುಖಿಯಾಗಿ ಬೆಳೆಯಲು ಗಮನ ಹರಿಸುವಂತೆ ಶಿಕ್ಷಕರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ಶಾಲೆಗಳಲ್ಲಿ ಕೈತೋಟವನ್ನು ಬಳಸುವುದರಿಂದ ಸಾವಯವವಾಗಿ ತರಕಾರಿಗಳು ಬೆಳೆದು, ಶಾಲಾ ಬಿಸಿಯೂಟ ಯೋಜನೆಯಲ್ಲಿ ಪೌಷ್ಟಿಕ ಆಹಾರ ಮಕ್ಕಳಿಗೆ ದೊರಕಲಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ದನ ಗೌಡ, ಸದಸ್ಯೆ ಮಂಜುಳಾ ಮಾಧವ ಮಾವೆ, ಕೃಷಿ ವಿಜ್ಞಾನಿ ಡಾ. ಶಿವಕುಮಾರ್ ಮಗದ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಚ್.ಆರ್. ನಾಯಕ್, ಮಂಗಳೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸದಾನಂದ ಇದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೈ. ಶಿವರಾಮಯ್ಯ ಸ್ವಾಗತಿಸಿದರು. ಅಕ್ಷರದಾಸೋಹ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ ವಂದಿಸಿದರು. ಕಾರ್ಯಾಗಾರದಲ್ಲಿ ಶಾಲಾ ಮುಖ್ಯ ಶಿಕ್ಷಕರಿಗೆ ಕೈತೋಟ ನಿರ್ಮಾಣ ಹಾಗೂ ನಿರ್ವಹಣೆ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ತಜ್ಞರಿಂದ ಮಾಹಿತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT