ಬುಧವಾರ, ನವೆಂಬರ್ 13, 2019
28 °C
ಅಕ್ಷರ ದಾಸೋಹ ನೌಕರರಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ

ಪ್ರಧಾನ ಮಂತ್ರಿ ಮಾನ್‌ಧನ್‌ ಯೋಜನೆ ಬೇಡ

Published:
Updated:
Prajavani

ಮಂಗಳೂರು: ಅಕ್ಷರದಾಸೋಹ ನೌಕರರಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮಾನ್‌ಧನ್ ಪಿಂಚಣಿ ಯೋಜನೆಯನ್ನು ಅಳವಡಿಸದೇ, ಹಾಲಿ ಇರುವ ಎಲ್‌ಐಸಿಯ ಪಿಂಚಣಿ ಯೋಜನೆ ಜಾರಿ ಮಾಡುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಉದ್ಘಾಟಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಕೇಂದ್ರ ಸರ್ಕಾರದ ಮಾನ್‌ಧನ್ ಯೋಜನೆಯಲ್ಲಿ 18 ವರ್ಷ ತುಂಬಿದ ಫಲಾನುಭವಿಗಳು ತಮ್ಮ 40ನೇ ವಯಸ್ಸಿನವರೆಗೆ ಮಾಸಿಕ ₹55 ಅನ್ನು ನಿರ್ದಿಷ್ಟ ಖಾತೆಗೆ ಪಾವತಿಸಬೇಕು. ಗರಿಷ್ಠ 40 ವರ್ಷದ ವೇಳೆಗೆ ₹200 ರಂತೆ ಮೊತ್ತ ಪಾವತಿಸಬೇಕಾಗುತ್ತದೆ. ಇದು ಬಿಸಿಯೂಟ ನೌಕರರಿಗೆ ಹೆಚ್ಚುವರಿ ಹೊರೆಯಾಗುತ್ತಿದೆ ಎಂದು ತಿಳಿಸಿದರು.

ಅಕ್ಷರದಾಸೋಹ ನೌಕರರಿಗೆ ಈಗಾಗಲೇ ಎಲ್‌ಐಸಿ ಸಂಯೋಜಿತ ಪಿಂಚಣಿ ಯೋಜನೆ ಇದ್ದು, ಇದೀಗ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮಾನ್‌ಧನ್ ಯೋಜನೆಯನ್ನು ಅಳವಡಿಸಲು ಸರ್ಕಾರದ ಸೂಚನೆ ಬಂದಿದೆ. ಅದು ಕಾರ್ಯರೂಪಕ್ಕೆ ಬಂದರೆ, ಅಕ್ಷರದಾಸೋಹ ನೌಕರರು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿದೆ ಎಂದು ಹೇಳಿದರು.

ಅಂತಿಮ ಪಿಂಚಣಿ ಲಭ್ಯತೆಯಲ್ಲಿ ಕೆಲವು ತೊಡಕುಗಳಿವೆ. ಪ್ರಧಾನಮಂತ್ರಿ ಮಾನ್‌ಧನ್ ಯೋಜನೆ ಜಾರಿಗೊಳಿಸದೇ, ಈಗಾಗಲೇ ಚಾಲ್ತಿಯಲ್ಲಿರುವ ಪಿಂಚಣಿ ಯೋಜನೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ವಸಂತ ಆಚಾರಿ, ಜಿಲ್ಲಾ ಘಟಕದ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಜಿಲ್ಲಾ ಮುಖಂಡರಾದ ಜಯಂತಿ ಬಿ. ಶೆಟ್ಟಿ, ಅಕ್ಷರದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ ಮಾತನಾಡಿದರು.

ಜಿಲ್ಲಾ ಸಮಿತಿ ಕಾರ್ಯದರ್ಶಿ ಗಿರಿಜಾ ಮೂಡುಬಿದಿರೆ ಸ್ವಾಗತಿಸಿದರು. ಖಜಾಂಚಿ ಭವ್ಯಾ ಮುಚ್ಚೂರು ವಂದಿಸಿದರು. ಪ್ರತಿಭಟನೆಗೂ ಮೊದಲು ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪ್ರತಿಕ್ರಿಯಿಸಿ (+)