ಮಂಗಳೂರು: ಮಹಿಳೆ ಮೇಲಿನ ದೌರ್ಜನ್ಯ, ಅತ್ಯಾಚಾರವು ಆಕೆಯ ಆತ್ಮದ ಕೊಲೆಯಾಗಿದೆ. ಜೀವನ ಪರ್ಯಂತ ಆಕೆ ಕ್ರೌರ್ಯದ ನೆರಳಿನಲ್ಲಿ ಬದುಕಬೇಕಾದ ಪರಿಸ್ಥಿತಿ ಇದೆ. ಸಂತ್ರಸ್ತೆಯನ್ನು ಗೌರವಯುತವಾಗಿ ನೋಡಿಕೊಳ್ಳುವುದು ಇಡೀ ಸಮಾಜದ ಜವಾಬ್ದಾರಿಯಾಗಿದೆ ಎಂದು ವಕೀಲೆ ಪಿಂಕಿ ವಿಜೇತಾ ಡೇಸಾ ಹೇಳಿದರು.
ಮಂಗಳೂರು ಧರ್ಮಪ್ರಾಂತ್ಯದ ಮಹಿಳೆ ಮತ್ತು ಸಾಮಾಜಿಕ ನ್ಯಾಯ ವಿಭಾಗ, ಅಖಿಲ ಕರ್ನಾಟಕ ಸಂಯುಕ್ತ ಕ್ರೈಸ್ತ ಫೋರಂ, ಕ್ಯಾಥೋಲಿಕ್ ಸಭಾ, ಮದರ್ ತೆರೇಸಾ ವಿಚಾರ ವೇದಿಕೆ, ಕಮಿಷನ್ ಫಾರ್ ಯೂತ್ ಆ್ಯಂಡ್ ಸೋಷಿಯಲ್ ಕಮ್ಯುನಿಕೇಷನ್ ಕಾನ್ಫರೆನ್ಸ್ ಆಫ್ ರಿಲೀಜಿಯಸ್ ಇಂಡಿಯಾ (ಸಿಆರ್‌ಐ) ಮಂಗಳೂರು ಘಟಕ, ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಜಂಟಿಯಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಶುಕ್ರವಾರ ಇಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಅತ್ಯಾಚಾರ ಪ್ರಕರಣ ಅಪರಾಧಿಯು ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಹೊರಬರುತ್ತಾನೆ, ಆತನಿಗೆ ಹೂಹಾರದ ಸ್ವಾಗತ ನೀಡುವವರೂ ಇದ್ದಾರೆ. ಆದರೆ, ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಹಾಗೂ ಆಕೆಯ ಕುಟುಂಬಸ್ಥರು, ಯಾವ ತಪ್ಪೂ ಮಾಡದೆ, ಜೀವನ ಪರ್ಯಂತ ನೋವಿನ ಶಿಕ್ಷೆ ಅನುಭವಿಸುವ ಪರಿಸ್ಥಿತಿ ನಮ್ಮ ಸಮಾಜದಲ್ಲಿದೆ. ಇದನ್ನು ನಿಯಂತ್ರಿಸಬೇಕಾದರೆ, ಅಪರಾಧಿ ಬದುಕಿರುವವರೆಗೂ ಜೈಲಿನಲ್ಲೇ ಕಳೆಯುವ ಶಿಕ್ಷೆ ನೀಡಬೇಕು, ಆತನಿಗೆ ಪೆರೋಲ್ ರಜೆ ಕೂಡ ನೀಡಬಾರದು ಎಂದು ಸಲಹೆ ಮಾಡಿದರು.
ಹೆಣ್ಣು ಮಕ್ಕಳ ಬಗ್ಗೆ ನಿಗಾವಹಿಸಿದಷ್ಟೇ, ಗಂಡು ಮಕ್ಕಳ ಬಗ್ಗೆಯೂ ತಾಯಂದಿರು ನಿಗಾವಹಿಸಬೇಕು. ಗಂಡು ಮಕ್ಕಳ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬಂದರೆ, ಅವರ ಮಾನಸಿಕ ಕಾಯಿಲೆಯನ್ನು ಗುರುತಿಸಿ, ಚಿಕಿತ್ಸೆ ಕೊಡಿಸಬೇಕಾದ ತುರ್ತು ಅಗತ್ಯವಿದೆ ಎಂದು ವಕೀಲೆ ಮರಿಯಮ್ಮ ಥೋಮಸ್ ಹೇಳಿದರು.
‘ಮಹಿಳೆಯರು ಸ್ವಯಂ ರಕ್ಷಣೆಯ ಬಗ್ಗೆ ಯೋಚಿಸಬೇಕು. ನಾವು ಧೈರ್ಯದಿಂದ ಇದ್ದು, ಪುರುಷರನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಹಟ ಸಾಧಿಸಿದರೆ ಆಕೆಗೆ ಯಾವುದೂ ಅಸಾಧ್ಯವಲ್ಲ. ಗುಜರಾತಿನಲ್ಲಿ ನಡೆದ ಬಿಲ್ಕಿಸ್‌ಬಾನು ಪ್ರಕರಣವು ಇದನ್ನು ಸಾಬೀತುಪಡಿಸಿದೆ. ಮಹಿಳೆ ಮುನಿದರೆ, ಸುಮ್ಮನಿರಲಾರಳು. ಆಕೆಯ ಸಹನೆಯನ್ನು ಪರೀಕ್ಷಿಸಬೇಡಿ’ ಎಂದು ಎಚ್ಚರಿಸಿದರು.
ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ವಿದ್ಯಾರ್ಥಿನಿ ಶೈನಾ, ವಿವಿಧ ಧರ್ಮಗುರುಗಳು, ಅಲೋಶಿಯಸ್ ಕಾಲೇಜು, ಥಿಯಾಲಾಜಿಕಲ್ ಕಾಲೇಜಿನ ವಿದ್ಯಾರ್ಥಿಗಳು, ಭಾಗವಹಿಸಿದ್ದರು. ಅನಿತಾ ಫ್ರಾಂಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಸ್ಟರ್ ಸೆವರಿನ್ ಸ್ವಾಗತಿಸಿದರು. ಫಾದರ್ ರೂಪೇಶ್ ಹಕ್ಕೊತ್ತಾಯ ಮಂಡಿಸಿದರು. ಸ್ಟೀವನ್ ರಾಡ್ರಿಗಸ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.