ಸೋಮವಾರ, ಸೆಪ್ಟೆಂಬರ್ 16, 2019
27 °C
ನಗರಸಭೆ ಭ್ರಷ್ಟಾಚಾರ ವಿರೋಧಿಸಿ ಉಳ್ಳಾಲದಲ್ಲಿ ಪ್ರತಿಭಟನೆ

’ಮಾಜಿ ಸಚಿವರ ಪ್ರೇರಣೆಯಿಂದ ದುರಾಡಳಿತ‘

Published:
Updated:
Prajavani

ಉಳ್ಳಾಲ: ಮಾಜಿ ಸಚಿವರ ಪ್ರೇರಣೆಯಿಂದ ಅಧಿಕಾರಿಗಳು ದುರಾಡಳಿತ ನಡೆಸುತ್ತಿದ್ದು, ಉಳ್ಳಾಲದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸದೇ, ಸೌಹಾರ್ದಕ್ಕೆ ಧಕ್ಕೆಯಾಗುವಂತೆ ಮಾಡುತ್ತಿದ್ದಾರೆ ಎಂದು ಉಳ್ಳಾಲ ನಾಗರಿಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ದಿನಕರ್ ಉಳ್ಳಾಲ ಆರೋಪಿಸಿದರು.

ನಗರಸಭೆಯಲ್ಲಿ ನಡೆಯುವ ಅನ್ಯಾಯ ಹಾಗೂ ಭ್ರಷ್ಟಾಚಾರ ವಿರೋಧಿಸಿದ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಇಲ್ಲಿನ ಅಬ್ಬಕ್ಕ ವೃತ್ತದಿಂದ ನಗರಸಭೆ ಕಚೇರಿವರೆಗೆ ನಡೆದ ಪ್ರತಿಭಟನಾ ಜಾಥಾ ಹಾಗೂ ನಗರಸಭೆ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಯನ್ನು ಬಿಟ್ಟು, ದೇಶದ ಕುರಿತು ಮಾತನಾಡುತ್ತಾ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತಿದ್ದಾರೆ. ವಸತಿ ಹಾಗೂ ವಾಣಿಜ್ಯ ಸಂಕೀರ್ಣಗಳಿಗೆ ನಗರಸಭೆಯಿಂದ ಬೇಕಾಬಿಟ್ಟಿ ಅನುಮತಿ ನೀಡಿ, ಅವರಿಗೆ ಒಳಚರಂಡಿ ಯೋಜನೆಯನ್ನೂ ಕಲ್ಪಿಸದೇ, ಉಳ್ಳಾಲದಲ್ಲಿ ಸಮುದಾಯಗಳ ನಡುವೆ ಅಶಾಂತಿಗೆ ಕಾರಣವಾಗುತ್ತಿದ್ದಾರೆ ಎಂದು ದೂರಿದರು.

ಝಾಕಿರ್ ಹುಸೈನ್ ಮಾತನಾಡಿ, ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ರಾಜಕೀಯ ಪ್ರೇರಿತವಾಗಿ ಜಾರಿ ಮಾಡಲಾಗಿದೆ. ಸಂಗ್ರಹವಾದ ತೆರಿಗೆಯಲ್ಲಿ ಉಳ್ಳಾಲವನ್ನು ಮಾದರಿ ಪ್ರದೇಶವನ್ನು ರೂಪಿಸಬಹುದಿತ್ತು. ಅದು ಶಾಸಕರ ಹಾಗೂ ಅಧಿಕಾರಿಯ ಖಜಾನೆ ಸೇರುತ್ತಿದೆ. ಈ ವಿಚಾರವನ್ನು ಪ್ರತಿಭಟಿಸಿದಲ್ಲಿ ಅವರ ಮೇಲೆ ಕೇಸ್‌ ಹಾಕಿ ಜೈಲಿಗಟ್ಟುವ ಕೆಲಸವಾಗುತ್ತಿದೆ. ಆದರೆ ಇದೀಗ ಎಲ್ಲ ಸಮುದಾಯದವರು ಪ್ರತಿಭಟನೆಗೆ ಸಿದ್ಧರಾಗಿದ್ದಾರೆ. ಹೆದರಿಸಿದರೂ, ಉಳ್ಳಾಲದ ಜನತೆ ಹೆದರುವವರಲ್ಲ ಎಂದು ಎಚ್ಚರಿಸಿದರು.

ಜನರಿಂದ ತೆರಿಗೆ ಹೆಸರಿನಲ್ಲಿ ಭಾರೀ ಸುಲಿಗೆ ಮಾಡಲಾಗುತ್ತಿದೆ. ತೆರಿಗೆ ಹೆಚ್ಚಾಗಿದ್ದರೂ, ಅಭಿವೃದ್ಧಿ ಕುಂಠಿತವಾಗಿದೆ. ಒಳಚರಂಡಿ ವ್ಯವಸ್ಥೆಯಿಲ್ಲದೇ ಕೆಟ್ಟ ನಗರವಾಗಿದೆ. ಕೋಟಿಗಟ್ಟಲೆ ವ್ಯಯಿಸಿದ ಒಂಬತ್ತುಕೆರೆ ಆಶ್ರಯ ಯೋಜನೆ ಮನೆಗಳು ಪಾಳುಬಿದ್ದಿವೆ ಎಂದು ಉಳ್ಳಾಲ ಪುರಸಭೆ ಮಾಜಿ ವಿಪಕ್ಷ ನಾಯಕ ಭಗವಾನ್ ದಾಸ್ ಆಕ್ರೋಶ ವ್ಯಕ್ತಪಡಿಸಿದರು.

ತೊಕ್ಕೊಟ್ಟು ಜಂಕ್ಷನ್ ಬಳಿ ಸಾರ್ವಜನಿಕ ಶೌಚಾಲಯಕ್ಕಾಗಿ ₹1.5 ಲಕ್ಷದ ಎರಡು ಬಿಲ್ ಪಾವತಿಯಾಗಿದೆ ಎಂದು ನಗರಸಭೆ ಹೇಳುತ್ತಿದೆ. ಈವರೆಗೆ ಶೌಚಾಲಯ ಆಗಿಲ್ಲ. ಉಳ್ಳಾಲ ನಗರಸಭೆ ಎದುರಿ ಫ್ಲಾಟ್‌ನಲ್ಲಿ ಮಾಜಿ ಸಚಿವರು, ಅಧಿಕಾರಿಗಳು ಪಾಲು ಹೊಂದಿದ್ದಾರೆ ಎನ್ನುವ ಮಾತು ಸಾರ್ವಜನಿಕವಾಗಿದೆ. ಇದರಿಂದ ಇಡೀ ಉಳ್ಳಾಲ ಜಂಕ್ಷನ್‌ನನಲ್ಲಿ ಅನಾರೋಗ್ಯದ ವಾತಾವರಣವಿದ್ದರೂ, ಹೆಸರಿಗಷ್ಟೇ ದಂಡ ಪಡೆಯಲಾಗುತ್ತಿದೆ ಎಂದು ಯಶವಂತ ಅಮೀನ್‌ ದೂರಿದರು.

ಮೂಲಸೌಕರ್ಯ, ನೀರು ಬೇಕಾಗಿದೆ. ಕುಡಿಯುವ ನೀರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸೌಹಾರ್ದದ ಪ್ರದೇಶ ಉಳ್ಳಾಲದಲ್ಲಿ ಅಧಿಕಾರಿಗಳು ವರ್ತನೆಯನ್ನು ಹತೋಟಿಯಲ್ಲಿ ಇಟ್ಟುಕೊಂಡು ಹೋಗುವುದು ಸೂಕ್ತ ಎಂದು ಚಂದ್ರಹಾಸ್ ಪಂಡಿತ್ ಹೌಸ್ ತಾಕೀತು ಮಾಡಿದರು.

ಈ ಸಂದರ್ಭ ಗೌರವಾಧ್ಯಕ್ಷ ದಿನಕರ್ ಉಳ್ಳಾಲ್, ಅಧ್ಯಕ್ಷ ಯು.ಕೆ ಮಹಮ್ಮದ್ ಮುಸ್ತಾಫ, ಪ್ರಧಾನ ಕಾರ್ಯದ ರ್ಶಿ ಝಾಕಿರ್ ಉಳ್ಳಾಲ, ಮಾಜಿ ಅಧ್ಯಕ್ಷ ಯಶವಂತ ಅಮೀನ್, ಭಗವಾನ್ ದಾಸ್, ಮುಸ್ತಾಕ್ ಅಹಮ್ಮದ್ ಪಟ್ಲ, ಹಮೀದ್ ಉಳ್ಳಾಲ್, ನಮಿತಾ ಗಟ್ಟಿ, ಅಶ್ರಫ್ ಬಾವಾ ಕೋಡಿ, ಶಬೀರ್ ಕಾಸಿಂ, ಇಮ್ತಿಯಾಝ್ ಕೋಟೆಪುರ, ಕಬೀರ್ ಉಳ್ಳಾಲ ಮುಂತಾದವರು ಉಪಸ್ಥಿತರಿದ್ದರು.

Post Comments (+)