ಪುತ್ತೂರು: ಹೊಟ್ಟೆನೋವಿನಿಂದ ಚಿಕಿತ್ಸೆಗಾಗಿ ಪುತ್ತೂರಿನ ಚೇತನಾ ಆಸ್ಪತ್ರೆಗೆ ದಾಖಲಾದ 17ರ ಹರೆಯದ ಬಾಲಕ ಶ್ರೀಜಿತ್ ಮೃತಪಟ್ಟ ಘಟನೆ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದಿಂದಾಗಿ ಸಾವು ಸಂಭವಿಸಿದೆ ಎಂದು ಆರೋಪಿಸಿ, ನ್ಯಾಯಕ್ಕಾಗಿ ಆಗ್ರಹಿಸಿ ದಲಿತ್ ಸೇವಾ ಸಮಿತಿ ನೇತೃತ್ವದಲ್ಲಿ ವಿವಿಧ ದಲಿತ ಸಂಘಟನೆಗಳು, ಬಾಲಕನ ಸಂಬಂಧಿಕರು ಮೃತದೇಹ ಇದ್ದ ಆಂಬುಲೆನ್ಸ್ ಅನ್ನು ಆಸ್ಪತ್ರೆಯ ಮುಂಭಾಗ ನಿಲ್ಲಿಸಿ ಮಂಗಳವಾರ ಪ್ರತಿಭಟಿಸಿದರು.
ಬಾಲಕನ ಕುಟುಂಬಕ್ಕೆ ಸರ್ಕಾರ ₹25 ಲಕ್ಷ ಪರಿಹಾರ ನೀಡಬೇಕು. ನಿರ್ಲಕ್ಷ್ಯ ವಹಿಸಿ ಬಾಲಕನ ಸಾವಿಗೆ ಕಾರಣವಾದ ವೈದ್ಯರನ್ನು ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕು. ಮೂರು ದಿನಗಳೊಳಗೆ ನ್ಯಾಯ ಸಿಗದಿದ್ದರೆ ಪುತ್ತೂರು ನಗರಠಾಣೆ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಮೃತಪಟ್ಟ ಬಾಲಕನ ಮೃತದೇಹವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಆಂಬುಲೆನ್ಸ್‌ನಲ್ಲಿ ತಂದು, ಆಸ್ಪತ್ರೆ ಮುಂಭಾಗದಲ್ಲಿ ನಿಲ್ಲಿಸಿ ಪ್ರತಿಭಟನೆ ಆರಂಭಿಸಿದರು. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಆಸ್ಪತ್ರೆಯ ವಿರುದ್ಧ, ವೈದ್ಯರ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು, 5 ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿ ಮಲಗಿದ ಸ್ಥಿತಿಯಲ್ಲಿರುವ ತಂದೆ ಮತ್ತು ತಾಯಿಯನ್ನು ಸಲಹಬೇಕಾಗಿದ್ದ ಬಾಲಕ ಇಲ್ಲಿನ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾನೆ. ಈ ಹಿಂದೆಯೂ ಇಲ್ಲಿನ ವೈದ್ಯರ ನಿರ್ಲಕ್ಷ್ಯಕ್ಕೆ ಮಗುವೊಂದು ಬಲಿಯಾಗಿತ್ತು. ಮಹಿಳೆಯೊಬ್ಬರನ್ನು ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಪೀಡಿಸಿದ ಘಟನೆಯೂ ಈ ಹಿಂದೆ ನಡೆದಿದೆ. ಇದು ನಿಲ್ಲಬೇಕು ಎಂದು ಆಗ್ರಹಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣ ದಾಖಲಿಸಿದರೆ ಸಾಲದು. ಪೊಲೀಸರು ತಪ್ಪಿತಸ್ಥ ವೈದ್ಯರನ್ನು ಬಂಧಿಸಬೇಕು. ಉಪವಿಭಾಗಾಧಿಕಾರಿ, ತಹಶೀಲ್ದಾರ್ ಅಥವಾ ಶಾಸಕರು ಬಂದು ನಮ್ಮ ಮನವಿ ಸ್ವೀಕರಿಸುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದರು.
ಪುತ್ತೂರು ನಗರಠಾಣೆ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ಮಾತನಾಡಿ, ಘಟನೆ ಸಂಬಂಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಪ್ರತಿಭಟನೆ ವಾಪಸ್ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಸ್ಪಂದಿಸದ ಪ್ರತಿಭಟನಕಾರರು, ವೈದ್ಯರನ್ನು ಬಂಧಿಸಿದ ಮೇಲೆ ಪ್ರತಿಭಟನೆ ಹಿಂತೆಗೆದುಕೊಳ್ಳುತ್ತೇವೆ. ವೆಂಟಿಲೇಟರ್ ವ್ಯವಸ್ಥೆ ಇಲ್ಲದ ಆಸ್ಪತ್ರೆಯಲ್ಲಿ ಯಾಕೆ ದಾಖಲಿಸಿಕೊಂಡಿರುವುದು ಏಕೆ ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ತತ್ವರಕ್ಷಣಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸುಂದರ ಪಾಟಾಜೆ, ಕಾಂಗ್ರೆಸ್ ಮುಖಂಡ ಅಭಿಷೇಕ್ ಬೆಳ್ಳಿಪ್ಪಾಡಿ, ದಲಿತ್ ಸೇವಾ ಸಮಿತಿ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಚಂದ್ರಶೇಖರ್ ಯು.ವಿಟ್ಲ, ಜಿಲ್ಲಾ ಸಂಚಾಲಕ ಧನಂಜಯ ಬಲ್ನಾಡು, ತಾಲ್ಲೂಕು ಸಮಿತಿ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಭಾಗವಹಿಸಿದ್ದರು.
ಮೃತಪಟ್ಟ ಬಾಲಕನಿಗೆ ಒಂದು ವಾರದಿಂದ ಹೊಟ್ಟೆನೋವು ಸಮಸ್ಯೆ ಇತ್ತು. ಎರಡು ದಿನಗಳಿಂದ ತೀವ್ರ ಸ್ವರೂಪಕ್ಕೆ ಬದಲಾಗಿ ವಾಂತಿ ಸಮಸ್ಯೆ ಎದುರಾಗಿತ್ತು. ಆತ ಸುಳ್ಯದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಆಗಬೇಕು ಎಂದು ಸೂಚಿಸಿದ ಕಾರಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಬಂದು, ಬಳಿಕ ಅಲ್ಲಿಂದ ಶನಿವಾರ ಮಧ್ಯರಾತ್ರಿ 1 ಗಂಟೆಯ ವೇಳೆಗೆ ಇಲ್ಲಿಗೆ ಬಂದು ದಾಖಲಾಗಿದ್ದ. ಆತನಿಗೆ ದೊಡ್ಡಕರುಳು ಸುತ್ತಿಕೊಂಡು ಕೊಳೆಯುವ (ಸಿದ್ಮಾಯ್ಡ್ ವಾಲ್ಯೂಲಸ್-ಗ್ಯಾಂಗ್ರೀನ್ ) ಸಮಸ್ಯೆ ಇದ್ದುದರಿಂದ ಭಾನುವಾರ ಸಂಜೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ 10 ಗಂಟೆಗಳ ತನಕ ಯಾವುದೇ ಸಮಸ್ಯೆ ಇರಲಿಲ್ಲ. ಬಳಿಕ ವಿಪರೀತ ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಇಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಮಂಗಳೂರಿಗೆ ಕರೆದೊಯ್ಯಲು ಸೂಚಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ಬ್ಯಾಕ್ಟಿರಿಯಾ ರಕ್ತಕ್ಕೆ ಸೇರಿಕೊಂಡ ಕಾರಣ ಸಾವು ಸಂಭವಿಸಿದೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಪ್ರಕಾಶ್ ಮತ್ತು ಚೇತನಾ ಆಸ್ಪತ್ರೆಯ ವೈದ್ಯ ಜೆ.ಸಿ.ಅಡಿಗ ತಿಳಿಸಿದ್ದಾರೆ.
ಪ್ರಕರಣ ದಾಖಲು: ಸುಳ್ಯ ತಾಲ್ಲೂಕಿನ ಪೈಚಾರು ಗ್ರಾಮದ ಶಾಂತಿನಗರ ನಿವಾಸಿ ಸಂಜೀವ-ಪ್ರೇಮ ದಂಪತಿಯ ಪುತ್ರ ಶ್ರೀಜಿತ್‌ನನ್ನು ಆ.12ರ ಮಧ್ಯರಾತ್ರಿ ಪುತ್ತೂರಿನ ಚೇತನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನನ್ನು ಪರೀಕ್ಷಿಸಿದ್ದ ವೈದ್ಯರು ಆ.13ರಂದು ಬೆಳಿಗ್ಗೆ ಶಸ್ತ್ರಚಿಕಿತ್ಸೆ ಮಾಡುವುದಾಗಿ ತಿಳಿಸಿ, ಸಂಜೆ 6 ಗಂಟೆಗೆ ಶಸ್ತ್ರಚಿಕಿತ್ಸೆ ಮುಗಿಸಿ ಐಸಿಯು ವಾರ್ಡ್‌ಗೆ ದಾಖಲಿಸಿದ್ದರು. ಆ.14ರಂದು ಬೆಳಿಗ್ಗೆ 9 ಗಂಟೆಗೆ ಬಂದು ಬಾಲಕನನ್ನು ನೋಡಿಕೊಳ್ಳಲು ನಮ್ಮಲ್ಲಿ ಸಮರ್ಪಕ ಉಪಕರಣಗಳಿಲ್ಲ. ಮಂಗಳೂರಿಗೆ ಕರೆದೊಯ್ಯುವಂತೆ ತಿಳಿಸಿದ್ದರು. ಅದರಂತೆ ಮಂಗಳೂರಿನ ಜ್ಯೋತಿ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿಗೆ ತಲುಪುವಾಗ ಮಧ್ಯಾಹ್ನ 12 ಗಂಟೆ ಆಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಪುತ್ತೂರಿನ ಚೇತನಾ ಆಸ್ಪತ್ರೆಯ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಬಾಲಕನ ದೊಡ್ಡಪ್ಪ ಕೃಷ್ಣ ಜಿ.ಅವರು ಪುತ್ತೂರು ನಗರಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.