ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಪಂದಿಸದಿದ್ದರೆ ಏಪ್ರಿಲ್‌ 1 ರಂದು ಕರಾಳ ದಿನ’

ವಿಜಯ ಬ್ಯಾಂಕ್‌ ವಿಲೀನ ವಿರೋಧಿ ಕಾಂಗ್ರೆಸ್‌ನಿಂದ ಪ್ರತಿಭಟನೆ
Last Updated 10 ಜನವರಿ 2019, 12:25 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯ ಹೆಮ್ಮೆಯಾಗಿರುವ ವಿಜಯ ಬ್ಯಾಂಕ್‌ನ ವಿಲೀನವನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದೇ ಇದ್ದರೆ ಏಪ್ರಿಲ್‌ 1 ರಂದು ಕರಾಳ ದಿನ ಆಚರಿಸಲಾಗುವುದು ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಹರೀಶ್‌ಕುಮಾರ್‌ ಎಚ್ಚರಿಸಿದರು.

ನಗರದ ವಿಜಯ ಬ್ಯಾಂಕ್‌ ಸ್ಥಾಪಕ ಶಾಖೆ ಎದುರು ಗುರುವಾರ ಕಾಂಗ್ರೆಸ್‌ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ವಿಜಯ ಬ್ಯಾಂಕ್‌ ಅನ್ನು ಬ್ಯಾಂಕ್‌ ಆಫ್‌ ಬರೋಡಾದೊಂದಿಗೆ ವಿಲೀನ ಮಾಡುವ ಮೂಲಕ ಶಾಶ್ವತವಾಗಿ ಕರಾವಳಿಯ ಹೆಸರನ್ನು ಅಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದನ್ನು ಕರಾವಳಿಯ ಜನತೆ ಎಂದಿಗೂ ಒಪ್ಪುವುದಿಲ್ಲ ಎಂದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ವಿಜಯ ಬ್ಯಾಂಕ್‌ ವಿಲೀನದ ಕುರಿತು ಇಲ್ಲಿನ ಜನರ ಭಾವನೆಯನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವ ಮೂಲಕ ಅದನ್ನು ತಡೆಯಲು ಕ್ರಮ ಕೈಗೊಳ್ಳದ ಸಂಸದರು, ಮನವಿ ಕೊಡುವ ಮೂಲಕ ಜಿಲ್ಲೆಯ ಜನರಿಗೆ ಮೋಸ ಮಾಡುತ್ತಿದ್ದಾರೆ. ಸಂಸದರಾಗಿ ಮಾಡಬೇಕಾದ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಆರೋಪಿಸಿದರು.

ವಿಜಯ ಬ್ಯಾಂಕ್‌ ಅನ್ನು ಕರಾವಳಿಯ ಜನರು ದುಡಿದ ಹಣವನ್ನು ಉಳಿಸಿ, ಕಟ್ಟಿದ್ದಾರೆ. ಸಂಬಳ ತೆಗೆದುಕೊಳ್ಳದೇ ಕನಿಷ್ಠ ವೇತನ ಪಡೆದು, ಬ್ಯಾಂಕಿನ ಏಳಿಗೆಗಾಗಿ ದುಡಿದಿದ್ದಾರೆ ಎಂದ ಅವರು, ಎ.ಬಿ. ಶೆಟ್ಟಿ ಅವರಿಂದ ಸ್ಥಾಪನೆಯಾದ ಬ್ಯಾಂಕ್‌, ಮೂಲ್ಕಿ ಸುಂದರರಾಮ್‌ ಶೆಟ್ಟಿ ಅವರ ಪರಿಶ್ರಮದಿಂದಾಗಿ ಬಲಿಷ್ಠ ಬ್ಯಾಂಕ್‌ ಆಗಿ ಬೆಳೆದಿದೆ. ಲಾಭದಲ್ಲಿ ಮುನ್ನಡೆಯುತ್ತಿರುವ ಬ್ಯಾಂಕ್ ಅನ್ನು ನಷ್ಟದಲ್ಲಿರುವ ಬ್ಯಾಂಕಿನೊಂದಿಗೆ ವಿಲೀನ ಮಾಡುತ್ತಿರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಐವನ್‌ ಡಿಸೋಜ, ಮಾಜಿ ಶಾಸಕ ಜೆ.ಆರ್‌. ಲೋಬೊ, ಕಳ್ಳಿಗೆ ತಾರಾನಾಥ ಶೆಟ್ಟಿ, ವಿನಯ್‌ರಾಜ್‌, ಪ್ರವೀಣಚಂದ್ರ ಆಳ್ವ, ಟಿ.ಕೆ. ಸುಧೀರ್, ಅಪ್ಪಿ, ಆಶಿತ್‌ ಪಿರೇರಾ, ಆಶಾ ಡಿಸಿಲ್ವ, ರಮಾನಂದ, ಸಲೀಂ, ವಿಶ್ವಾಸ್‌ಕುಮಾರ್‌ ದಾಸ್‌, ನೀರಜ್‌ಪಾಲ್‌ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT