ಮಂಗಳೂರು: ನಗರಕ್ಕೆ ಸಮೀಪವಿರುವ ಪಾವೂರು ಉಳಿಯ, ರಾಣಿಪುರ ಮತ್ತು ಉಳ್ಳಾಲ ಹೊಯ್ಗೆ ದ್ವೀಪವಾಸಿಗಳು ‘ಬದುಕಿನ ರಕ್ಷಣೆಗಾಗಿ ಐಕ್ಯತಾ ಮೆರವಣಿಗೆ’ ಹೆಸರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಗೆ ವಿವಿಧ ಸಂಘಟನೆಯ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಬೆಂಬಲ ಸೂಚಿಸಿದರು.
ಬಲ್ಮಠದ ಸಿಎಸ್‌ಐ ಮೈದಾನದಲ್ಲಿ ಸೇರಿದ ಪ್ರತಿಭಟನಾಕಾರರು ಘೋಷಣಾ ಫಲಕಗಳನ್ನು ಹಿಡಿದುಕೊಂಡು ಜ್ಯೋತಿ ವೃತ್ತದ ಮೂಲಕ ಕ್ಲಾಕ್ ಟವರ್ ವರೆಗೆ ಮೌನ ಮೆರವಣಿಗೆ ನಡೆಸಿದರು.
ಮಿನಿವಿಧಾನಸೌಧದ ಮುಂದೆ ಏರ್ಪಡಿಸಿದ್ದ ಸಾರ್ವಜನಿಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಮಾನ ಮನಸ್ಕ ಸಂಘಟನೆಗಳ ಮುಖಂಡ ಮುನೀರ್ ಕಾಟಿಪಳ್ಳ, ಅಧಿಕಾರಿಗಳು ಮತ್ತು ಆಡಳಿತ ನಡೆಸುವವರು ಮನಸ್ಸು ಮಾಡಿದರೆ ಅಕ್ರಮ ಮರಳುಗಣಿಗಾರಿಯನ್ನು ಒಂದೇ ದಿನದಲ್ಲಿ ತಡೆಯಬಹುದು. ಆದರೆ ಎಲ್ಲರೂ ಶಾಮೀಲಾಗಿ ದಂಧೆ ಮಾಡುತ್ತಿರುವುದರಿಂದ ಇದು ಸಾಧ್ಯವಾಗಲಿಲ್ಲ ಎಂದರು.
‘ಮರಳು ದಂಧೆಕೋರರು ಎಲ್ಲ ಪಕ್ಷಗಳ ಮುಖಂಡರ ಜೊತೆಯೂ ಚೆನ್ನಾಗಿ ಇರುತ್ತಾರೆ. ಅವರಿಗೆ ಎಲ್ಲರೂ ಬೆಂಬಲವಾಗಿ ನಿಲ್ಲುತ್ತಾರೆ. ಇಂಥ ಅಕ್ರಮ ಮುಂದುವರಿಯಲು ಬಿಡುವುದಿಲ್ಲ. ಮರಳುಗಾರಿಕೆ ಮುಂದುವರಿದರೆ ಕೊಣಾಜೆ ಮತ್ತಿತರ ಠಾಣೆಗಳ ಮುಂದೆ ಸಮಾನ ಮನಸ್ಕ ಸಂಘಟನೆಗಳ ಸದಸ್ಯರು ಪ್ರತಿಭಟನೆ ಮಾಡಲಿದ್ದಾರೆ' ಎಂದು ಅವರು ಎಚ್ಚರಿಕೆ ನೀಡಿದರು.
ಮದರ್ ತೆರೆಸಾ ವಿಚಾರ ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ಮಾತನಾಡಿ ಮರಳು ಗಣಿಗಾರಿಕೆಯಲ್ಲಿ ದೊಡ್ಡ ಷಡ್ಯಂತ್ರ ಇದೆ. ರಾಜಕಾರಣಿಗಳು ಮತ್ತು ದಂಧೆಕೋರರ ನಡುವಿನ ಹೊಂದಾಣಿಕೆ ರಾಜಕಾರಣದಿಂದಾಗಿ ದ್ವೀಪವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ನೇತ್ರಾವತಿ ನದಿಗೆ ಅಲ್ಲಲ್ಲಿ ಸಣ್ಣಪುಟ್ಟ ಅಣೆಕಟ್ಟೆಗಳನ್ನು ಕಟ್ಟಿದ್ದಾರೆ. ಅಡ್ಯಾರ್‌ನಲ್ಲಿ ಕೂಡ ಒಂದು ಅಣೆಕಟ್ಟೆ ಇದೆ. ಇದರ ಹಿಂದೆ ಕುತ್ಸಿತ ಮನಸ್ಸುಗಳು ಇವೆ. ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ಭವಿಷ್ಯದಲ್ಲಿ ನೀರು ಬೇಕಾದರೆ ಈ ಅಣೆಕಟ್ಟೆಯ ಬಾಗಿಲುಗಳನ್ನು ಮುಚ್ಚುತ್ತಾರೆ. ಆಗ ನೀರು ತುಂಬಿ ಪಾವೂರು ಉಳಿಯ ದ್ವೀಪ ಮುಳಗಿ ಹೋಗುತ್ತದೆ. ಅಲ್ಲಿ ಇರುವ 42 ಕುಟುಂಬಗಳು ನಾಶವಾಗಲಿವೆ ಎಂದು ಎಚ್ಚರಿಸಿದ ಅವರು ದ್ವೀಪಗಳನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಮದರ್ ತೆರೆಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಜಿಲ್ಲೆಯಲ್ಲಿ ಈ ಹಿಂದೆ ನಡೆದ ಅಕ್ರಮಗಳಿಂದಾಗಿ ಹಲವು ದ್ವೀಪಗಳು ನಾಶವಾಗಿವೆ. ಪಾವೂರು ಉಳಿಯ ದ್ವೀಪವನ್ನು ಉಳಿಸುವುದಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ರಚಿಸಿದ ಸಮಿತಿಯಿಂದ ಯಾವ ಪ್ರಯೋಜನವೂ ಆಗಲಿಲ್ಲ ಎಂದು ದೂರಿದರು.
ಮಂಗಳೂರು ಕೆಥೋಲಿಕ್ ಸಭಾದ ಅಧ್ಯಕ್ಷ ಸಂತೋಷ್ ಡಿಸೋಜ, ಫಾದರ್ ವಿನೋದ್ ಮಸ್ಕರೇನ್ಞಸ್, ಫಾದರ್ ಮನೋಹರ್ ಡಿಸೋಜ, ಸ್ಟ್ಯಾನಿ ಲೋಬೊ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.