ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಗೇರ ಸಂಘದ ನೇತೃತ್ವದಲ್ಲಿ ಹಕ್ಕೊತ್ತಾಯ ಚಳವಳಿ

ನಕಲಿ ದಾಖಲೆ ಸೃಷ್ಟಿಸಿ ‘ಪರಿಶಿಷ್ಟ ಜಾತಿ ಮೊಗೇರ’ ಜಾತಿ ಪ್ರಮಾಣಪತ್ರ: ಆರೋಪ
Last Updated 10 ಮೇ 2022, 15:07 IST
ಅಕ್ಷರ ಗಾತ್ರ

ಮಂಗಳೂರು: ‘ಪ್ರವರ್ಗ 1ರಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮೊಗೇರರು ನಕಲಿ ದಾಖಲೆ ಸೃಷ್ಟಿಸಿ ‘ಪರಿಶಿಷ್ಟ ಜಾತಿ ಮೊಗೇರ’ ಜಾತಿ ಪ್ರಮಾಣ ಪತ್ರ ಪಡೆದು, ನೈಜ ಮೊಗೇರರ ಸಾಂವಿಧಾನಿಕ ಮೀಸಲಾತಿ ಕಸಿದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿ ತಾಲ್ಲೂಕು ಮೊಗೇರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಮಂಗಳೂರು ತಹಶೀಲ್ದಾರ್ ಕಚೇರಿ ಮುಂಭಾಗ ಹಕ್ಕೊತ್ತಾಯ ಚಳವಳಿ ನಡೆಯಿತು.

ತಾಲ್ಲೂಕು ಮೊಗೇರ ಸಂಘದ ಅಧ್ಯಕ್ಷ ಸೀತಾರಾಮ ಕೊಂಚಾಡಿ ಮಾತನಾಡಿ, ‘ಮೊಗೇರ ಜಾತಿಯವರಿಗೆ ನೀಡುತ್ತಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಇತರರಿಗೆ ಮತ್ತು ರಾಜ್ಯದ ಹಿಂದುಳಿದ ಜಾತಿ ಪಟ್ಟಿಯ ಪ್ರವರ್ಗ 1ರ ಮೀನುಗಾರ ಮೊಗೇರರಿಗೆ ನೀಡುತ್ತಿರುವುದು ಅಕ್ಷಮ್ಯ. ಸಂವಿಧಾನ ಹಾಗೂ ದೇಶದ ಮೀಸಲಾತಿ ಕಾನೂನಿಗೆ ಮಾಡಿರುವ ದ್ರೋಹ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರವು ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕು. ಅಸ್ಪೃಶ್ಯ ಮೊಗೇರರಿಗೆ ನೀಡುವ ಜಾತಿ ಮೀಸಲಾತಿಯನ್ನು ಪರಿಶಿಷ್ಟ ಸಮುದಾಯದವರಿಗೆ ಮಾತ್ರ ನೀಡಬೇಕು. 1922ರಿಂದ 2010ರವರೆಗೆ ಸುಳ್ಳು ದಾಖಲೆ ನೀಡಿ, ಮೋಸದಿಂದ ಪಡೆದಿರುವ ಪ್ರಮಾಣ ಪತ್ರಗಳನ್ನು ರದ್ದುಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಸಂಚಾಲಕ ಎಂ. ದೇವದಾಸ್ ಮಾತನಾಡಿ, ‘ಮೀಸಲಾತಿ ಪರಿಶಿಷ್ಟರ ಹಕ್ಕು ವಿನಾ ಭಿಕ್ಷೆ ಅಲ್ಲ. ಸಂವಿಧಾನ ರಚನೆಯಾಗಿ 70 ವರ್ಷಗಳ ಬಳಿಕವೂ ಸಂವಿಧಾನದತ್ತವಾದ ಹಕ್ಕನ್ನು ಅರ್ಹರಿಂದ ಕಸಿಯುವ ಕಾರ್ಯ ನಡೆಯುತ್ತಲೇ ಸಾಗಿದೆ’ ಎಂದು ಆರೋಪಿಸಿದರು.

ಮುಖಂಡರಾದ ಎಸ್.ಪಿ. ಆನಂದ, ಅಶೋಕ್ ಕೊಂಚಾಡಿ ಮಾತನಾಡಿದರು. ನಾಯಕರಾದ ಗಿರಿಯಪ್ಪ ಎಸ್, ಹರೀಶ್ ಪಣಂಬೂರು, ನಾರಾಯಣ ಉಳ್ಲಾಲ್, ಸದಾನಂದ ಬೊಂದೇಲ್, ರಮೇಶ್ ಕೊಂಚಾಡಿ, ಜಗದೀಶ್ ಪಾಂಡೇಶ್ವರ, ಸುಧಾಕರ ಬೋಳೂರು, ರಮೇಶ್ ಕಾವೂರು, ರಾಕೇಶ್ ಕುಂದರ್, ಪ್ರೇಮ್ ಬಳ್ಳಾಲ್‌ಬಾಗ್, ರುಕ್ಮಯ್ಯ ಅಮೀನ್, ಗೀತಾ ಕರಂಬಾರು, ಪದ್ಮನಾಭ ನರಿಂಗಾನ, ಶಿವಾನಂದ ಬಳ್ಳಾಲ್‌ಬಾಗ್ ಇದ್ದರು. ಪ್ರತಿಭಟನೆಯ ಬಳಿಕ ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT