ಕರಾವಳಿಗೆ ಅನ್ಯಾಯವಾದರೆ ಸುಮ್ಮನಿರಲ್ಲ

7
ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರೋಧಿ ಸಮಾಲೋಚನಾ ಸಭೆಯಲ್ಲಿ ಶಾಸಕ ಹರೀಶ್ ಪೂಂಜ

ಕರಾವಳಿಗೆ ಅನ್ಯಾಯವಾದರೆ ಸುಮ್ಮನಿರಲ್ಲ

Published:
Updated:
Deccan Herald

ಬೆಳ್ತಂಗಡಿ : ‘ಸರ್ಕಾರಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯು ಪ್ರಯೋಗ ಶಾಲೆ ಆಗಿದೆ. ರಾಷ್ಟ್ರೀಯ ಉದ್ಯಾನ, ಆನೆ ಕಾರಿಡಾರ್ , ಪೆಟ್ರೋಲಿಯಂ ಯೋಜನೆ, ಇದೀಗ ಕಸ್ತೂರಿ ರಂಗನ್ ವರದಿ ಶಿಫಾರಸು ಜಾರಿಗೊಳಿಸುವ ಮೂಲಕ  ಕರಾವಳಿ ಭಾಗದ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿವೆ.  ಜನರಿಗೆ ಅನ್ಯಾಯವಾದರೆ ಸುಮ್ಮನಿರುವುದಿಲ್ಲ’ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಎಚ್ಚರಿಸಿದರು

 ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿಯಮ್ಮ ಸಭಾಭವನದಲ್ಲಿ ಶನಿವಾರ ನಡೆದ ಕಸ್ತೂರಿ ರಂಗನ್ ಅನುಷ್ಠಾನ ವಿರೋಧಿ ಬೆಳ್ತಂಗಡಿ, ಪುತ್ತೂರು, ಸುಳ್ಯ ವ್ಯಾಪ್ತಿಯ ಕಸ್ತೂರಿ ರಂಗನ್ ವರದಿಯಿಂದ ಸಂತ್ರಸ್ತರಾಗುವ ಜನರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು  ಮಾತನಾಡಿದರು.

ಕಾಡಿನ ಮಧ್ಯೆ, ಕಾಡು ಪ್ರದೇಶದ ಬಳಿ ವಾಸಿಸುವ ಆದಿವಾಸಿ ಕುಟುಂಬಗಳ ಬಗ್ಗೆ ಚಿಂತಿಸುವ ಅಗತ್ಯವಿದೆ.  ಜನರಿಗೆ ಕಸ್ತೂರಿ ರಂಗನ್ ವರದಿ  ಶಿಫಾರಸುಗಳ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಮಾಹಿತಿ ನೀಡುವ ಕಾರ್ಯ ನಡೆಯಬೇಕಿದೆ. ಬಳಿಕ ಎಲ್ಲಾ ಜನರೊಂದಿಗೆ ಸೇರಿ ಹೋರಾಟ ಮಾಡಲಾಗುವುದು ಎಂದರು.  ಯೋಜನೆ ಜಾರಿಯಾಗಲು ಬಿಡುವುದಿಲ್ಲ ಎಂದರು.

ರಾಜ್ಯದ 7ಜಿಲ್ಲೆಗಳಲ್ಲಿ 1576 ಗ್ರಾಮಗಳಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು ಸಿದ್ದತೆ ನಡೆಯುತ್ತಿದೆ. ವರದಿಯ ಬಗ್ಗೆ  ಇದೇ 25ರಂದು ಸರ್ಕಾರದಿಂದ ಕೋರ್ಟ್ ವರದಿ ಕೇಳಿದ್ದು ಸರ್ಕಾರ ಕೂಡಲೇ ನೈಜ ಸಮೀಕ್ಷೆಯನ್ನು ಮಾಡಿ ವರದಿ ನೀಡಬೇಕು. ಇಲ್ಲವಾದಲ್ಲಿ ಕೇಂದ್ರದ ಸಚಿವರು, ರಾಜ್ಯದ ಸಂಸದರುಗಳನ್ನು, ಪ್ರಮುಖರುಗಳನ್ನು ಒಟ್ಟು ಸೇರಿಸಿ ಹೋರಾಟ ನಡೆಸಲಾಗುವುದು ಎಂದರು.

ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಮಾತನಾಡಿ ‘ ಜನರಿಗೆ ಬೇಡವಾದ ಯೋಜನೆಗಳನ್ನು ಸರ್ಕಾರಗಳು ಜಾರಿಗೊಳಿಸಬಾರದು. ಕಾಡು ಪ್ರದೇಶದ ಜನ ಕಾಡು ಹಾಗೂ ನಾಡನ್ನು ಉಳಿಸಿ ಬೆಳೆಸುವವರು. ಇವರ ಹಿತದೃಷ್ಟಿಯನ್ನು ರಕ್ಷಿಸಬೇಕು. ಅಗತ್ಯವಿದ್ದರೆ ಹೋರಾಟಗಾರರೊಂದಿಗೆ ಪ್ರಧಾನಿಯನ್ನು ಭೇಟಿಯಾಗಲು ಸಿದ್ಧ’ ಎಂದರು.

ಮಲೆನಾಡು ಹಿತರಕ್ಷಣಾ ಸಮಿತಿಯ ದಾಮೋದರ ಗುಂಡ್ಯ, ಕೃಷ್ಣಪ್ಪ ಗೌಡ ಬೆಂಗಲ ಮಾತನಾಡಿದರು. ನವೀನ್ ನೆರಿಯ ಸ್ವಾಗತಿಸಿ , ಸೂರ್ಯನಾರಾಯಣ ಭಟ್ ಶಿಶಿಲ  ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !