ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಫಲಿತಾಂಶ: ದಕ್ಷಿಣ ಕನ್ನಡಕ್ಕೆ ಮತ್ತೆ ಅಗ್ರಸ್ಥಾನ

Last Updated 18 ಜೂನ್ 2022, 14:37 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯು 2021–22ನೇ ಸಾಲಿನ ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಈ ಬಾರಿಯೂ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಕಳೆದ ಸಾಲಿನಲ್ಲೂ ದ್ವಿತೀಯ ಪಿ.ಯು. ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆ ಮೊದಲ ಸ್ಥಾನದಲ್ಲಿತ್ತು.

ಜಿಲ್ಲೆಯಲ್ಲಿ ಈ ವರ್ಷ ಪ್ರಥಮ ಬಾರಿಗೆ ದ್ವಿತೀಯ ಪಿ.ಯು ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಶೇ 88.02 ಮಂದಿ ತೇರ್ಗಡೆಯಾಗಿದ್ದಾರೆ. ಜಿಲ್ಲೆಯು ಕಲಾ ವಿಭಾಗದಲ್ಲಿ ಶೇ 79.4, ವಾಣಿಜ್ಯ ವಿಭಾಗದಲ್ಲಿ ಶೇ 87.07 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ 91.71 ಫಲಿತಾಂಶವನ್ನು ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಹುಡುಗಿಯರಲ್ಲಿ 89.71ರಷ್ಟು ಹಾಗೂ ಹುಡುಗರಲ್ಲಿ ಶೇ 79.18ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ.

ನಗರ ಪ್ರದೇಶದ ಕಾಲೇಜುಗಳಲ್ಲಿ ಶೇ 88.91 ಹಾಗೂ ಗ್ರಾಮೀಣ ಪ್ರದೇಶದ ಕಾಲೇಜುಗಳಲ್ಲಿ ಶೇ 86.16ರಷ್ಟು ಫಲಿತಾಂಶ ಬಂದಿದೆ. ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳೂ ಉತ್ತಮ ಸಾಧನೆ ತೋರಿದ್ದಾರೆ. ಪರಿಶಿಷ್ಟ ಜಾತಿಯ ಶೇ79.13ರಷ್ಟು ವಿದ್ಯಾರ್ಥಿಗಳು ಹಾಗೂ ಪರಿಶಿಷ್ಟ ಪಂಗಡದ ಶೇ 82.75ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಖಾಸಗಿಯಾಗಿ ಪರೀಕ್ಷೆ ಬರೆದ ಶೇ 43.14 ಮಂದಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ ಶೇ 28.07ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ.

‘ವಿದ್ಯಾರ್ಥಿಗಳು, ಉಪನ್ಯಾಸಕರ ಪರಿಶ್ರಮದ ಫಲ’

‘ದಕ್ಷಿಣ ಕನ್ನಡ ಜಿಲ್ಲೆಯು ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದರ ಹಿಂದೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಪರಿಶ್ರಮ ಅಡಗಿದೆ. ಕೋವಿಡ್‌ ಕಾಲದಲ್ಲಿ ಕುಂಠಿತವಾಗಿದ್ದ ಶೈಕ್ಷಣಿಕ ಚಟುವಟಿಕೆಯಿಂದಾಗಿ ಆತ್ಮಸ್ಥೈರ್ಯ ಕಳೆದುಕೊಂಡಿದ್ದ ವಿದ್ಯಾರ್ಥಿಗಳನ್ನು ಮತ್ತೆ ವಿದ್ಯಾಭ್ಯಾಸದತ್ತ ಆಕರ್ಷಿಸುವುದು ಸವಾಲಿನ ವಿಷಯವಾಗಿತ್ತು’ ಎಂದು ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಡಿ.ಜಯಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯ ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂವಾದ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅರಿತು ಸ್ಪಂದಿಸುವ ಕಾರ್ಯಕ್ರಮ ರೂಪಿಸಿದ್ದೆವು. ಅವರಿಗೆ ಉತ್ತೇಜನ ನೀಡುವಂತೆ ಅನೇಕ ಕಾರ್ಯಕ್ರಮಗಳನ್ನು ಕಾಲೇಜುಗಳಲ್ಲಿ ಏರ್ಪಡಿಸಲಾಯಿತು. ಅದೆಲ್ಲದರ ಪರಿಣಾಮನ್ನು ದ್ವಿತೀಯ ಪಿ.ಯು. ಪರೀಕ್ಷೆಯ ಫಲಿತಾಂಶದಲ್ಲಿ ನೋಡುತ್ತಿದ್ದೇವೆ’ ಎಂದರು.

9 ಕಾಲೇಜುಗಳಿಗೆ ಶೇ 100 ಫಲಿತಾಂಶ

ದಕ್ಷಿಣ ಕನ್ನಡ ಜಿಲ್ಲೆಯ ಐದು ಸರ್ಕಾರಿ ಪಿ.ಯು. ಕಾಲೇಜುಗಳು ಸೇರಿ ಒಟ್ಟು ಒಂಬತ್ತು ಪಿ.ಯು.ಕಾಲೇಜುಗಳು ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿವೆ.

ಮೂಡುಬಿದಿರೆ ತಾಲ್ಲೂಕಿನ ತೆಂಕಮಿಜಾರು ಸರ್ಕಾರಿ ಪಿ.ಯು ಕಾಲೇಜು, ಸುಳ್ಯ ತಾಲ್ಲೂಕಿನ ಐವರ್ನಾಡು ಸರ್ಕಾರಿ ಪಿ.ಯು ಕಾಲೇಜು, ಹರಿಹರ ಪಲ್ಲತಡ್ಕದ ಸರ್ಕಾರಿ ಪಿ.ಯು ಕಾಲೇಜು, ಬೆಳ್ತಂಗಡಿ ತಾಲ್ಲೂಕಿನ ಕೊಕ್ರಾಡಿ ಸರ್ಕಾರಿ ಪಿ.ಯು ಕಾಲೇಜು, ಮಂಗಳೂರು ತಾಲ್ಲೂಕಿನ ಕುಳಾಯಿ ಸರ್ಕಾರಿ ಪಿ.ಯು ಕಾಲೇಜು, ಪುತ್ತೂರು ತಾಲ್ಲೂಕಿನ ಪೆರ್ನಾಜೆಯ ಸೀತಾರಾಘವ ಪಿ.ಯು.ಕಾಲೇಜು (ಅನುದಾನಿತ),ಉಳ್ಳಾಲದ ಹಜರತ್‌ ಸಯ್ಯದ್ ಮದನಿ ಮಹಿಳಾ ಪಿ.ಯು. ಕಾಲೇಜು (ಅನುದಾನರಹಿತ), ತಲಪಾಡಿಯ ವಿದ್ಯಾನಗರ ಫಲಾಹ್‌ ಪಿ.ಯು.ಕಾಲೇಜು (ಅನುದಾನರಹಿತ), ಸುಳ್ಯ ನಿಂತಿಕಲ್ಲು ಕೆ.ಎಸ್‌.ಗೌಡ ಪಿ.ಯು. ಕಾಲೇಜು (ಅನುದಾನರಹಿತ) ಈ ಪಟ್ಟಿಯಲ್ಲಿವೆ.

ಎಂಡೋಸಲ್ಫಾನ್‌ ಸಂತ್ರಸ್ತೆ ಉತ್ತಮ ಸಾಧನೆ

ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಎಂಡೋಸಲ‌್ಫಾನ್‌ ಸಂತ್ರಸ್ತೆ ಯು.ಅಪೇಕ್ಷಾ 600ರಲ್ಲಿ 421 ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಸಾಧನೆ ತೋರಿದ್ದಾರೆ. ಕಡಬ ತಾಲ್ಲೂಕಿನ ರಾಮಕುಂಜದಲ್ಲಿರುವ ಸೇವಾಭಾರತಿಯ ವಿದ್ಯಾಚೇತನ ಶಾಲೆಯ ವಿದ್ಯಾರ್ಥಿನಿಯಾಗಿದ್ದ ಅವರು ಉಪೇಂದ್ರ ಆಚಾರ್ಯ ಹಾಗೂ ಶೋಭಾ ದಂಪತಿಯ ಪುತ್ರಿ. ಅವರು ಶ್ವೇತಾ ನೆರವಿನಿಂದ ಪರೀಕ್ಷೆ ಬರೆದಿದ್ದರು.

ಅಂಕಿ ಅಂಶ

29,086:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2021–22ನೇ ಸಾಲಿನ ದ್ವಿತೀಯ ಪಿ.ಯು. ಪರೀಕ್ಷೆಗೆ ಮೊದಲ ಸಲ ಹಾಜರಾದ ಒಟ್ಟು ವಿದ್ಯಾರ್ಥಿಗಳು

25,602:ಉತ್ತೀರ್ಣರಾದ ಒಟ್ಟು ವಿದ್ಯಾರ್ಥಿಗಳು

1,384:ಜಿಲ್ಲೆಯಲ್ಲಿ 2021–22ನೇ ಸಾಲಿನ ದ್ವಿತೀಯ ಪಿ.ಯು. ಪರೀಕ್ಷೆಗೆ ಖಾಸಗಿಯಾಗಿ ಹಾಜರಾದ ವಿದ್ಯಾರ್ಥಿಗಳು

597:ಉತ್ತೀರ್ಣರಾದ ವಿದ್ಯಾರ್ಥಿಗಳು (ಖಾಸಗಿಯಾಗಿ ಹಾಜರಾದವರಲ್ಲಿ)

830:ಜಿಲ್ಲೆಯಲ್ಲಿ 2021–22ನೇ ಸಾಲಿನ ದ್ವಿತೀಯ ಪಿ.ಯು. ಪರೀಕ್ಷೆಗೆ ಹಾಜರಾದ ಪುನರಾವರ್ತಿತ ವಿದ್ಯಾರ್ಥಿಗಳು

233:ಉತ್ತೀರ್ಣರಾದವರು ‌‌‌‌‌‌(ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ)

ದ.ಕ.:ದ್ವಿತೀಯ ಪಿ.ಯು ಫಲಿತಾಂಶ ವಿವರ (ಮೊದಲ ಸಲ ಪರೀಕ್ಷೆ ಬರೆದವರು)

ವಿವರ;ಕಲಾ;ವಾಣಿಜ್ಯ;ವಿಜ್ಞಾನ

ಹಾಜರಾದವರು;3,558;13,676;11,852

ಉತ್ತೀರ್ಣ;2,825;11,908;10,869

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT