ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ, ನೀರು ಒದಗಿಸಿ; ಕಸದ ಸಮಸ್ಯೆಗೆ ಮುಕ್ತಿ ನೀಡಿ

‘ಪ್ರಜಾವಾಣಿ’ ಫೋನ್–ಇನ್ ಕಾರ್ಯಕ್ರಮ: ಡಾ.ಕುಮಾರ್‌ ಬಳಿ ಜನರ ಅಹವಾಲು
Last Updated 7 ಏಪ್ರಿಲ್ 2022, 15:42 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಉದ್ದೇಶದಿಂದ ‘ಪ್ರಜಾವಾಣಿ’ ಗುರುವಾರ ಆಯೋಜಿಸಿದ್ದ ಫೋನ್‌–ಇನ್‌ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲೆಯ ಬೇರೆಬೇರೆ ಭಾಗಗಳಿಂದ ಹಲವು ನಾಗರಿಕರು ಕರೆ ಮಾಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಅವರ ಬಳಿ ತಮ್ಮ ಸಮಸ್ಯೆ ಹೇಳಿಕೊಂಡು, ಪರಿಹಾರ ಪಡೆದರು.

* ಅಬ್ದುಲ್‌ ಹುಸೇನ್‌, ಲಾಯಿಲ, ಬೆಳ್ತಂಗಡಿ
ನೀರಿನ ಸಂಪರ್ಕ ಸಮರ್ಪಕವಾಗಿದ್ದರೂ, ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ ಯಾಕೆ?

–ಪಿಡಿಒ ಗಮನಕ್ಕೆ ತರಲಾಗುವುದು. ಅನಧಿಕೃತ ಸಂಪರ್ಕಗಳನ್ನು ಕಡಿತಗೊಳಿಸಿ, ಸರಿಯಾಗಿ ನೀರು ಪೂರೈಸುವಂತೆ ಸೂಚನೆ ನೀಡಲಾಗುವುದು.

* ಭಾಸ್ಕರ್‌, ಮೂಡುಬಿದಿರೆ
ಪಾಲಡ್ಕದ ಕೊರಗರ ಕಾಲೊನಿಯಲ್ಲಿ ಸೌಲಭ್ಯಗಳು ಮರಿಚಿಕೆಯಾಗಿವೆ. ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಿ.

– ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗುವುದು. ಕೂಡಲೇ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.

* ಪದ್ಮಾಕರ ಭಿಡೆ, ಗುರುಪುರ
ಗುರುಪುರ ಕೈಕಂಬ ರಸ್ತೆಯಲ್ಲಿ ಕಸವನ್ನು ಹಾಕಲಾಗುತ್ತಿದೆ. ಇದನ್ನು ತೆರವುಗೊಳಿಸಿ.

– ಕಸ ಎಸೆಯುವುದು ಅಪರಾಧ. ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ದಂಡ ವಿಧಿಸಲಾಗುತ್ತಿದೆ. ಇರುವ ಕಸವನ್ನು ವಿಲೇವಾರಿ ಮಾಡಲು ಸೂಚನೆ ನೀಡಲಾಗುವುದು. ಹೊಸದಾಗಿ ಕಸ ಹಾಕದಂತೆ ಸಾರ್ವಜನಿಕರು ಜನರಲ್ಲಿ ಜಾಗೃತಿ ಮೂಡಿಸಬೇಕು.

* ಗಣೇಶ್‌, ಸಜಿಪಮುನ್ನೂರು
ನಂದಾವರ–ಕಾಂತಾಲೆಯ ಎಸ್‌ಸಿ, ಎಸ್‌ಟಿ ಕಾಲೊನಿ ಸಂಪರ್ಕ ರಸ್ತೆಯಲ್ಲಿ ಕಸ ಹಾಕಲಾಗುತ್ತಿದೆ.

– ಕಸ ಎಸೆಯುವುದನ್ನು ತಡೆಯಲು ಈಗಾಗಲೇ ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಕಸ ವಿಲೇವಾರಿಗೆ ಸೂಚನೆ ನೀಡಲಾಗುವುದು. ಜನರಲ್ಲೂ ಈ ಬಗ್ಗೆ ಜಾಗೃತಿ ಮೂಡಬೇಕು.

* ಗ್ರೇಸಿ, ಲಾಯಿಲ, ಬೆಳ್ತಂಗಡಿ
ಗ್ರಾಮದಲ್ಲಿ ನಿತ್ಯ ಕಸ ತೆಗೆದುಕೊಳ್ಳಲು ಬರುತ್ತಿಲ್ಲ. ಇದರಿಂದ ಮನೆಯಲ್ಲಿಯೇ ಕಸ ಇಟ್ಟುಕೊಳ್ಳುವಂತಾಗಿದೆ.

– ಗ್ರಾಮದಲ್ಲಿ ಸಮೀಕ್ಷೆ ನಡೆಸಲಾಗುವುದು. ನಿತ್ಯ ಕಸ ಸಂಗ್ರಹ ಆಗುತ್ತಿದ್ದರೆ, ನಿತ್ಯವೂ ಕಸ ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಲಾಗುವುದು. ಕನಿಷ್ಠ ದಿನ ಬಿಟ್ಟು ದಿನವಾದರೂ ಕಸ ಸಂಗ್ರಹ ಮಾಡಲಾಗುವುದು.

* ನಾಜಿಂ, ನೆಲ್ಯಾಡಿ, ಕಡಬ
ಚರಂಡಿ ಸ್ವಚ್ಛ ಮಾಡಿಲ್ಲ. ದುರ್ವಾಸನೆ ಬೀರುತ್ತಿದೆ.

– ಚರಂಡಿಯನ್ನು ಸ್ವಚ್ಛಗೊಳಿಸಿ, ಸ್ಲ್ಯಾಬ್‌ ಹಾಕಲಾಗುವುದು. ಚರಂಡಿಯಲ್ಲಿ ಕಸ ಚೆಲ್ಲದಂತೆ ಸಾರ್ವಜನಿಕರು ಜಾಗೃತಿ ಮೂಡಿಸಬೇಕು.

* ಸತ್ಯಶಾಂತಿ ತ್ಯಾಗಮೂರ್ತಿ, ಜಾಲ್ಸೂರು, ಸುಳ್ಯ
ನೀರಿನ ಸಮಸ್ಯೆ ಇದೆ. ಸ್ವಚ್ಛ ಭಾರತ ಅಭಿಯಾನ ಸಮರ್ಪಕವಾಗಿ ನಡೆಯುತ್ತಿಲ್ಲ.

– ಜಾಲ್ಸೂರು ಗ್ರಾಮವನ್ನು ಜಲಜೀವನ್‌ ಮಿಷನ್ ಅಡಿಯಲ್ಲಿ ಆಯ್ಕೆ ಮಾಡಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು. ಸದ್ಯಕ್ಕೆ ಕೊಳವೆಬಾವಿ ಇದೆ. ಅಲ್ಲಿಂದ ನೀರು ಪೂರೈಕೆ ಮಾಡಲಾಗುವುದು. ಕಸ ಸ್ವಚ್ಛತೆಯ ಬಗ್ಗೆ ಪಿಡಿಒಗೆ ಸೂಚಿಸಲಾಗುವುದು.

* ಚೇತನಕುಮಾರ್‌, ಅಸೈಗೋಳಿ, ಕೊಣಾಜೆ
ಅರ್ಧಗಂಟೆ ನೀರು ಬಿಡುತ್ತಾರೆ. ನೀರಿನ ಸಮಸ್ಯೆ ಇದೆ.

– ಇರುವ ಬೊರವೆಲ್‌ ಅನ್ನು ಫ್ಲಷಿಂಗ್ ಮಾಡಲಾಗುವುದು. ನೀರು ಬರದಿದ್ದರೆ, ಹೊಸ ಬೊರವೆಲ್‌ ಕೊರೆಯಲಾಗುವುದು. ಸಮೀಪದಲ್ಲಿ ಖಾಸಗಿ ಬೊರವೆಲ್‌ಗಳಿದ್ದರೆ, ಅಲ್ಲಿಂದ ಬಾಡಿಗೆ ರೂಪದಲ್ಲಿ ನೀರು ಪಡೆಯಲು ಅವಕಾಶವಿದೆ. ಕೊನೆಯ ಪ್ರಯತ್ನವಾಗಿ ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗುವುದು.

* ಪ್ರದೀಪ್‌ಕುಮಾರ್, ಕಡಬ
ಎಸ್‌ಸಿ, ಎಸ್‌ಟಿ ಕಾಲೊನಿಯ ರಸ್ತೆ ಅಭಿವೃದ್ಧಿಗೆ ಮೀಸಲಿದ್ದ ₹20 ಲಕ್ಷ ಅನುದಾನವನ್ನು ಬೇರೆ ಕಡೆ ವರ್ಗಾಯಿಸಲಾಗಿದೆ.

– ಶೇ 40ಕ್ಕಿಂತ ಹೆಚ್ಚು ಎಸ್‌ಸಿ, ಎಸ್‌ಟಿ ಜನರು ಇರುವಲ್ಲಿಯೇ ಆ ಕಾಮಗಾರಿ ಕೈಗೆತ್ತಿಕೊಳ್ಳಬೇಕು, ಅದನ್ನು ಬೇರೆ ಕಡೆ ವಿನಿಯೋಗಿಸುವಂತಿಲ್ಲ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.

* ಹರೀಶ್, ರಾಮಕೃಷ್ಣ, ಕೊಣಾಜೆ
94 ಸಿಯಲ್ಲಿ ಹಕ್ಕುಪತ್ರ ಮಂಜೂರಾಗಿದ್ದರೂ, ಖಾತೆ ಮಾಡಿಕೊಡಲು ಆರ್‌ಟಿಸಿ ಕೇಳುತ್ತಿದ್ದಾರೆ.

– ಹಕ್ಕುಪತ್ರ ಕೊಟ್ಟಲ್ಲಿ, ಆರ್‌ಟಿಸಿ ಕೇಳುವಂತಿಲ್ಲ. ಈಗಾಗಲೇ ಪಿಡಿಒಗೆ ಸೂಚನೆ ನೀಡಲಾಗಿದೆ. ಅದಾಗ್ಯೂ ಖಾತೆ ಮಾಡುತ್ತಿಲ್ಲ ಎಂದಾದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

* ಯೋಗೇಶ್‌ ನಾಯ್ಕ್‌, ತಣ್ಣೀರು ಪಂತ, ಬೆಳ್ತಂಗಡಿ
ವಸತಿ ಯೋಜನೆಯ ಮಂಜೂರಾತಿ ಯಾವಾಗ?

– ಈಗಾಗಲೇ ಮನೆಗಳು ಮಂಜೂರಾಗಿದ್ದು, ವಸತಿ ನಿಗಮದ ವೆಬ್‌ಸೈಟ್‌ನಲ್ಲಿ ದಾಖಲಿಸಲಾಗುತ್ತಿದೆ. 10–12 ದಿನದಲ್ಲಿ ಮಂಜೂರಾತಿ ದೊರೆಯಲಿದೆ.

* ಆಫಾ, ಲಾಯಿಲ, ಬೆಳ್ತಂಗಡಿ
ಕುಂಟಿನಿಯಲ್ಲಿ ನೀರಿನ ಸಮಸ್ಯೆ ಇದೆ.

– ಪಿಡಿಒ ಜೊತೆ ಮಾತನಾಡುತ್ತೇನೆ. ಆದಷ್ಟು ಶೀಘ್ರ ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.

* ರಾಜಶೇಖರ್‌, ಅಂಡಿಂಜೆ, ಬೆಳ್ತಂಗಡಿ
ಗ್ರಾಮ ಪಂಚಾಯಿತಿಗೆ ಸೇರಿದ 5 ಎಕರೆ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

– ಸರ್ಕಾರಿ ಜಾಗೆ ಇದ್ದರೂ, ಸಾರ್ವಜನಿಕರ ವಿರೋಧ ಇದ್ದಲ್ಲಿ, ಅಂತಹ ಜಾಗದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಆಗುವುದಿಲ್ಲ. ಬೇರೆ ಜಾಗ ಗುರುತಿಸಲಾಗುವುದು.

* ಅಶ್ವಿನಿ, ನೀರುಮಾರ್ಗ, ಮಂಗಳೂರು
ರಸ್ತೆಗೆ ಕಸ ಹಾಕಲಾಗುತ್ತಿದೆ. ಹಾಕಿರುವ ಕಸವನ್ನು ತೆಗೆಯಬೇಕು.

– ಕಸ ಹಾಕುವುದನ್ನು ತಡೆಯಲು ಸಾರ್ವಜನಿಕರೂ ಮುಂದೆ ಬರಬೇಕು. ಕಸ ಹಾಕುವವರ ಬಗ್ಗೆ ಮಾಹಿತಿ ನೀಡಿದಲ್ಲಿ, ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕಸ ವಿಲೇವಾರಿಗೆ ಸೂಚನೆ ನೀಡಲಾಗುವುದು.

* ಜ್ಯೋತಿ, ಸುಜೀತ್‌, ಅಸೈಗೋಳಿ ಕೊಣಾಜೆ
ಅಸೈಗೋಳಿ ಸೈಟ್‌ನಲ್ಲಿ ನೀರು, ಚರಂಡಿ, ರಸ್ತೆ, ಕಸ ವಿಲೇವಾರಿ ಸೇರಿದಂತೆ ಹಲವು ಸಮಸ್ಯೆಗಳಿವೆ ಪರಿಹರಿಸಿ.

– ನಾನೇ ಸ್ವತಃ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತೇನೆ. ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.

* ಶೇಖರ್, ಲಾಯಿಲ
ಕೆಲಸ ಆಗಿರುವ ಕಾಮಗಾರಿಗೆ ಮತ್ತೆ ಟೆಂಡರ್‌ ಕರೆಯಲಾಗಿದೆ.

– ಈ ರೀತಿ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಪಿಡಿಒ ಜೊತೆಗೆ ಮಾತನಾಡುತ್ತೇನೆ.

* ರವಿಚಂದ್ರ, ಮುಂಡಾಜೆ, ಬೆಳ್ತಂಗಡಿ
ಗ್ರಾಮದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಆರಂಭಿಸಿ.

– ಈಗಿರುವ ಜಾಗದ ಬಗ್ಗೆ ಸಾರ್ವಜನಿಕರು ತಕರಾರು ತೆಗೆಯುತ್ತಿದ್ದು, ಬೇರೆ ಜಾಗ ಗುರುತಿಸಿ. ಅಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಆರಂಭಿಸಲಾಗುವುದು.

* ಕರುಣಾಕರ, ಪಾಲ್ತಾಡಿ
ಎಸ್‌ಸಿ, ಎಸ್‌ಟಿ ಕಾಲೊನಿಯ ಬೀದಿ ದೀಪ ಹಾಳಾಗಿವೆ. ಶಾಲೆಗೆ ಹೋಗಲು ರಸ್ತೆ ಇಲ್ಲ.

– ಪಿಡಿಒ ಅವರನ್ನು ಸ್ಥಳಕ್ಕೆ ಕಳುಹಿಸಲಾಗುವುದು. ಯಾವುದಾದರೂ ಯೋಜನೆಯಲ್ಲಿ ಬೀದಿ ದೀಪ, ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT