ಪುತ್ತೂರು: ವಾರ್ಷಿಕ ಹಾಗೂ ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದ್ದ ಒಟ್ಟು 109 ಸುಧಾರಿತ, ಹವಾಮಾನ ಬದಲಾವಣೆಗೆ ಸ್ಪಂದಿಸುವ, ಪೋಷಕಾಂಶ ಸಮೃದ್ಧ ತಳಿಗಳನ್ನು ಕೇಂದ್ರ ಸರ್ಕಾರ 100 ದಿನಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ ಎರಡನೇ ವಾರದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಇವುಗಳಲ್ಲಿ ಇಲ್ಲಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿರುವ ನೇತ್ರಾ ಜಂಬೋ-1 ಮತ್ತು ನೇತ್ರಾ ಗಂಗಾ ಎಂಬ ಸುಧಾರಿತ ಗೇರು ಹೈಬ್ರಿಡ್ ತಳಿಗಳೂ ಸೇರಿವೆ.
ನೇತ್ರಾ ಜಂಬೋ-1 ತಳಿಯನ್ನು ಸಂಸ್ಥೆಯ ಈಗಿನ ನಿರ್ದೇಶಕ ದಿನಕರ ಅಡಿಗ ನೇತೃತ್ವದ ತಂಡ ಅಭಿವೃದ್ಧಿಪಡಿಸಿದೆ. ಕೂಲಿ ಖರ್ಚನ್ನು ಗಮನಾರ್ಹ ಪ್ರಮಾಣದಲ್ಲಿ ಉಳಿಸುವ ಈ ತಳಿಯು ತಲಾ 12 ಗ್ರಾಂ ತೂಗುವ ಬೀಜಗಳನ್ನು ನೀಡಬಲ್ಲುದು. ಶೇ 90ಕ್ಕೂ ಹೆಚ್ಚಿನ ಬೀಜಗಳು ಒಂದೇ ಗಾತ್ರದ್ದಾಗಿರುತ್ತವೆ. 100 ಕೆ.ಜಿ ಬೀಜ ಸಂಸ್ಕರಣೆಯಿಂದ ಸುಮಾರು 29 ರಿಂದ 30 ಕೆ.ಜಿ ತಿರುಳು ಸಿಗಬಲ್ಲುದು. ರಫ್ತು ಗುಣಮಟ್ಟದ ಗ್ರೇಡ್ ಡಬ್ಲ್ಯು 180ಕ್ಕಿಂತ ಜಾಸ್ತಿ ಗ್ರೇಡ್ (ಡಬ್ಲ್ಯು 130) ಈ ತಳಿಯ ತಿರುಳಿನದ್ದು. ಈ ತಳಿ ಪ್ರತಿ ಟನ್ ಬೀಜ ಹೆಕ್ಕುವಾಗ ₹ 16 ಸಾವಿರದಷ್ಟು ಕೂಲಿ ಖರ್ಚನ್ನು ಉಳಿಸುತ್ತದೆ. ಮಾರುಕಟ್ಟೆ ದರದಲ್ಲಿ ಈ ತಳಿಯ ದೊಡ್ಡ ಗಾತ್ರದ ಬೀಜಕ್ಕೆ ಪ್ರತಿ ಟನ್ನಿಗೆ ಸುಮಾರು ₹ 10 ಸಾವಿರ ಜಾಸ್ತಿ ಲಾಭ ಸಿಗುತ್ತದೆ. ಒಟ್ಟು ₹ 26 ಸಾವಿರದಷ್ಟು ಹೆಚ್ಚುವರಿ ಲಾಭ ಒಂದು ಟನ್ನಿನಲ್ಲಿ ಸಿಗುತ್ತದೆ. ಇದರ ತಿರುಳಿನ ಸಿಪ್ಪೆಯನ್ನು ಸುಲಭದಲ್ಲಿ ಬಿಡಿಸಬಹುದು. ಹಾಗಾಗಿ ಕಾರ್ಖಾನೆಯಲ್ಲೂ ಕೂಲಿ ಖರ್ಚನ್ನು ಉಳಿಸುತ್ತದೆ. ಇದರ ತಿರುಳು ತುಂಬಾ ರುಚಿಕರ ಎಂದು ಸಂಶೋಧನಾ ಕೇಂದ್ರವು ತಿಳಿಸಿದೆ.
ನೇತ್ರಾ ಗಂಗಾ ತಳಿಯನ್ನು ಸಂಸ್ಥೆಯ ಹಿಂದಿನ ಪ್ರಭಾರ ನಿರ್ದೇಶಕರಾದ ಗಂಗಾಧರ ನಾಯಕ್ ನೇತೃತ್ವದ ತಂಡ ಅಭಿವೃದ್ಧಿಪಡಿಸಿದೆ. 12 ರಿಂದ 13 ಗ್ರಾಂ ತೂಗಬಲ್ಲ ದೊಡ್ಡ ಗಾತ್ರದ ಬೀಜಗಳು ಇದರ ವಿಶೇಷ. ಆರಂಭದ ಒಂದೆರಡು ವರ್ಷಗಳಲ್ಲೇ ಹೂ ಬಿಡುತ್ತದೆ. ಡಿಸೆಂಬರ್ ನಿಂದ ಏಪ್ರಿಲ್ ತನಕ ದೀರ್ಘಾವಧಿ ಹೂವು ಮತ್ತು ಗೇರು ಬೀಜ ಬಿಡುವ ತಳಿ ಇದು. ತಿರುಳಿನ ಪ್ರಮಾಣ ಶೇ 29.5ರಷ್ಟು ಇರುತ್ತದೆ. ಸವರುವಿಕೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವ ಈ ತಳಿ ಘನ ಸಾಂದ್ರ ಪದ್ಧತಿಯ ಬೇಸಾಯಕ್ಕೆ ಯೋಗ್ಯ. ನಾಟಿ ಮಾಡಿದ ಮೂರನೇ ವರ್ಷದಲ್ಲಿಯೇ ಗಿಡವೊಂದರಿಂದ 5 ಕೆ.ಜಿಗೂ ಹೆಚ್ಚು ಇಳುವರಿ ಪಡೆಯಬಹುದು ಎಂದು ಶಂಶೋಧನಾ ಕೇಂದ್ರದ ಪ್ರಕಟಣೆ ತಿಳಿಸಿದೆ.
ಕೇಂದ್ರವು ಅಭಿವೃದ್ಧಿಪಡಿಸಿರುವ ಭಾಸ್ಕರ, ವಿಆರ್ ಐ-3, ಉಳ್ಳಾಲ -3 ತಳಿಗಳು ಪ್ರಸ್ತುತ ಬಳಕೆಯಲ್ಲಿವೆ. ಇವು ಬಹುತೇಕ ಸಣ್ಣ ಹಾಗೂ ಮಧ್ಯಮ ಗಾತ್ರದವು. ಹಾಗಾಗಿ ಹೊಸತಾಗಿ ಅಭಿವೃದ್ಧಿ ಪಡಿಸಿರುವ ನೇತ್ರಾ ಜಂಬೋ-1 ಮತ್ತು ನೇತ್ರಾ ಗಂಗಾ ಗೇರುಬೀಜದ ತಳಿಗಳು ಒಣಭೂಮಿ ಕೃಷಿಯಲ್ಲಿ ಹೊಸ ಭರವಸೆ ಮೂಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.