ಗುರುವಾರ , ಅಕ್ಟೋಬರ್ 24, 2019
21 °C
ಖಾತೆ ಬದಲಾವಣೆಗಾಗಿ ಲಂಚದ ಬೇಡಿಕೆ

ಪುತ್ತೂರು: ಗ್ರಾಮಕರಣಿಕ ಎಸಿಬಿ ಬಲೆಗೆ

Published:
Updated:
Prajavani

ಪುತ್ತೂರು: ಖಾತಾ ಬದಲಾವಣೆಗೆ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು, ಕಡಬ ತಾಲ್ಲೂಕಿನ ರಾಮಕುಂಜ ಮತ್ತು ಹಳೆನೇರಂಕಿ ಗ್ರಾಮದ ಗ್ರಾಮಕರಣಿಕ ದುರ್ಗಪ್ಪ ಎಂಬಾತನನ್ನು ಬಂಧಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಬತ್ತನ ಹಳ್ಳಿಯ ದುರ್ಗಪ್ಪ, ಇಲ್ಲಿ ಗ್ರಾಮ ಕರಣಿಕನಾಗಿದ್ದಾನೆ. ಹಳೆನೇರಂಕಿ ಗ್ರಾಮದ ಕಾಪಿಕಾಡು ನಿವಾಸಿ ಶರತ್ ಪಿ.ಎನ್ ಎಂಬವರಿಂದ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದಾನೆ.

ಖಾತೆ ಬದಲಾವಣೆಗಾಗಿ ಫೆಬ್ರುವರಿ 20ರಂದು ಶರತ್‌ ಅರ್ಜಿ ಸಲ್ಲಿಸಿದ್ದರು. ಈ ಪ್ರಕ್ರಿಯೆಗಾಗಿ ಸೆ.12ರಂದು ಅರ್ಜಿದಾರರಿಗೆ ನೋಟಿಸ್ ನೀಡಲಾಗಿತ್ತು. ಅಲ್ಲದೇ, ₹ 20ಸಾವಿರ ನೀಡುವಂತೆ ದುರ್ಗಪ್ಪ ಬೇಡಿಕೆ ಇಟ್ಟಿದ್ದನು. ಈ ಪೈಕಿ ₹5 ಸಾವಿರ ನೀಡಲಾಗಿತ್ತು. ಆದರೆ, ಮತ್ತೆ ಹಣಕ್ಕಾಗಿ ದುರ್ಗಪ್ಪ ಬೇಡಿಕೆ ಇಟ್ಟಿದ್ದನು. ಈ ಹಿನ್ನೆಲೆಯಲ್ಲಿ ಶರತ್ ಎಸಿಬಿಗೆ ದೂರು ನೀಡಿದ್ದರು.

ಅರ್ಜಿದಾರ ಶರತ್ ಅವರನ್ನು ಗುರುವಾರ ದುರ್ಗಪ್ಪ ತನ್ನ ಬೈಕ್‍ನಲ್ಲಿ ಕುಳ್ಳಿರಿಸಿಕೊಂಡು ಬಂದು, ಪುತ್ತೂರು ನಗರದ ಮುಖ್ಯ ರಸ್ತೆಯ ಕರ್ಣಾಟಕ ಬ್ಯಾಂಕ್ ಬಳಿ ₹3 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಬಿ ಪ್ರಭಾರ ಎಸ್ಪಿ ಸುಧೀರ್ ಹೆಗ್ಡೆ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಶ್ಯಾಮ ಸುಂದರ್ ಮತ್ತು ಯೋಗೀಶ್, ಸಿಬ್ಬಂದಿ ರಾಧಾಕೃಷ್ಣ, ರಾಧಾಕೃಷ್ಣ ಎ.ಇ, ಉಮೇಶ್, ರಾಕೇಶ್, ರಾಜೇಶ್, ಪ್ರಶಾಂತ್, ವೈಶಾಲಿ ಮತ್ತು ಗಣೇಶ್  ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವರದಕ್ಷಿಣೆಗಾಗಿ ಕೊಲೆ ಬೆದರಿಕೆ

ಉಜಿರೆ: ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಮೋಹನ ಗೌಡ ವರದಕ್ಷಿಣೆಗಾಗಿ ತನ್ನ ಪತ್ನಿ ಮಾಲಾಶ್ರೀ ಮತ್ತು ಮಗುವಿನ ಮೇಲೆ ದೈಹಿಕ ಹಲ್ಲೆ ಮಾಡಿರುವ ಹಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು, ಮದುವೆ ವೇಳೆ ಕೊಡುವುದಾಗಿ ಹೇಳಿದ್ದ 15 ಪವನ್ ಚಿನ್ನ ತರುವಂತೆ ಪತಿ, ಅತ್ತೆ ಮತ್ತು ಮಾವ ಹಲ್ಲೆ ನಡೆಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪತ್ನಿಯನ್ನು ಕೊಂದ ಪತಿ: ಶವಕ್ಕಾಗಿ ಶೋಧ

ಕಾಸರಗೋಡು :  ಕೊಲ್ಲಂ ಜಿಲ್ಲೆಯ ಇರುವಿಪುರಂನ, ಕಾಸರಗೋಡಿನಲ್ಲಿ ಸಪ್ಲೈ ಆಫೀಸಿನಲ್ಲಿ ಸ್ವೀಪರ್ ಆಗಿರುವ ಪ್ರಮೀಳಾ (30 ) ಎಂಬಾಕೆಯನ್ನು ಆಕೆಯ ಪತಿ, ಕಣ್ಣೂರು ಆಲಕ್ಕೋಡಿನ ಚಾಲಕ ಸೆಲ್ಜೋ ಜಾನ್ ಕೊಲೆ ಮಾಡಿ ತೆಕ್ಕಿಲ್ ಸೇತುವೆ ಬಳಿ ನದಿಗೆ ಎಸೆದಿರುವ ಬಗ್ಗೆ ದೂರು ದಾಖಲಾಗಿದ್ದು, ಶವಕ್ಕಾಗಿ ಶೋಧ ಮುಂದುವರಿದಿದೆ. 

ಈ ದಂಪತಿ ವಿದ್ಯಾನಗರ ಪನ್ನಿಪಾರೆ ಎಂಬಲ್ಲಿ ವಾಸವಾಗಿದ್ದರು. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಸೆಪ್ಟೆಂಬರ್ 19 ರಂದು ರಾತ್ರಿ , ಸೆಲ್ಜೋ ಜಾನ್ ಹೆಂಡತಿಯನ್ನು ಹೊಡೆದು ಕೊಲೆ ಮಾಡಿದ್ದು, ಹೆಣವನ್ನು ಗೋಣಿ ಚೀಲದಲ್ಲಿ ತುಂಬಿಸಿ ತೆಕ್ಕಿಲ್ ಸೇತುವೆಗೆ ಹಾಕಿದ್ದ ಎಂದು ದೂರಲಾಗಿದೆ.

ಮಂಜೇಶ್ವರದಲ್ಲಿ ಇಬ್ಬರಿಗೆ ಚೂರಿ ಇರಿತ 

ಕಾಸರಗೋಡು: ಮಂಜೇಶ್ವರ ತಾಲ್ಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರಿಗೆ ಚೂರಿ ಇರಿಯಲಾಗಿದೆ.

ಮೀಂಜ ಪಂಚಾಯಿತಿಯ ಮೀಯಪದವು ಲಕ್ಷಂ ವೀಡು ಕಾಲನಿಯ ಬಳಿ ಬುಧವಾರ ರಾತ್ರಿ  ಎಸ್.ಡಿ.ಪಿ.ಐ. ಕಾರ್ಯಕರ್ತ ಮುಹಮ್ಮದ್ ಫೈಜಲ್ (25) ಹಾಗೂ ಗುರುವಾರ ನಸುಕಿನ ಜಾವ ಉಪ್ಪಳ ಪತ್ವಾಡಿಯಲ್ಲಿ ದಡ್ದಂಗಡಿಯ ಪ್ರಣವ್ (25) ಎಂಬವರಿಗೆ ಇರಿಯಲಾಗಿದೆ. ಎರಡೂ ಪ್ರಕರಣಗಳಲ್ಲೂ ಬೈಕಿನಲ್ಲಿ ಬಂದ ಮುಸುಕುಧಾರಿ ವ್ಯಕ್ತಿಗಳು ಇರಿದಿದ್ದಾರೆ. ಗಾಯಾಳುಗಳನ್ನು ಮಂಗಳೂರಿನಲ್ಲಿ  ಆಸ್ಪತ್ರೆ ದಾಖಲಿಸಲಾಗಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)