ಶನಿವಾರ, ಜನವರಿ 28, 2023
20 °C

ಜಾತ್ಯತೀತ ಸಿದ್ಧಾಂತ ಹೊಂದಿರುವ ವ್ಯಕ್ತಿಗೆ ಟಿಕೆಟ್‌ ನೀಡಿ: ಹೇಮನಾಥ ಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುತ್ತೂರು: ‘ಜಾತ್ಯತೀತ ಸಿದ್ಧಾಂತ ಹೊಂದಿರುವ ವ್ಯಕ್ತಿಗಳನ್ನು ಕಾಂಗ್ರೆಸ್‌ನ ಶಾಸಕ ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕೇ ಹೊರತು ಕಾಂಗ್ರೆಸ್ ಟಿಕೆಟನ್ನು ಬಿಜೆಪಿಗೆ ಮಾರಲು ಹೊರಟಿರುವುದು ಸರಿಯಲ್ಲ’ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿ ಶನಿವಾರ ನಗರದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಬಿಜೆಪಿಯಿಂದ ಬಂದ ಶಕುಂತಳಾ ಶೆಟ್ಟಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಗೆಲ್ಲಿಸಿದರೂ ಅವರಿಗೆ ಬಿಜೆಪಿಯಲ್ಲಿನ ತನ್ನ ವಿಚಾರಗಳಿಂದ ಹೊರಬದಲು ಸಾಧ್ಯವಾಗದ ಕಾರಣ, ಜಾತ್ಯತೀತ ಸಿದ್ಧಾಂತದ ಕಾಂಗ್ರೆಸ್ ಪಕ್ಷಕ್ಕೆ ಅವರಿಂದ ತೊಂದರೆಯಾಗಿತ್ತು. ಇದೀಗ ಅಶೋಕ್ ಕುಮಾರ್ ರೈ ಅವರಿಗೆ ಕಾಂಗ್ರೆಸ್‌ ಟಿಕೆಟ್ ನೀಡಿದಲ್ಲಿ ಪಕ್ಷವನ್ನು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿಸಿದಂತಾಗುತ್ತದೆ’ ಎಂದು ಹೇಳಿದರು.

‘ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಈಗಾಗಲೇ 13 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಒಬ್ಬರಿಗೆ ಅವಕಾಶ ಕಲ್ಪಿಸದೆ ಇತರರಿಗೆ ನೀಡುವುದು ಸರಿಯಲ್ಲ. ಅದರಲ್ಲಿಯೂ ಅರ್ಜಿಯನ್ನೇ ನೀಡದ ಬಿಜೆಪಿಯ ಅಶೋಕ್ ಕುಮಾರ್ ರೈ ಅವರಿಗೆ ಅವಕಾಶ ನೀಡುವುದರಿಂದ ಪಕ್ಷದ ಸಿದ್ಧಾಂತ ಮತ್ತು ವರ್ಚಸ್ಸಿಗೆ ಧಕ್ಕೆಯಾಗಲಿದೆ. ಅಶೋಕ್ ರೈ ಅವರನ್ನು ಕಾಂಗ್ರೆಸ್ ಗೆಲ್ಲಿಸಿದರೆ ಬಿಜೆಪಿಯ ಪ್ರಥಮ ಅಪರೇಶನ್‌ಗೆ ಅವರು ಗುರಿಯಾಗಲಿದ್ದಾರೆ. ಈ ಅಪಾಯಗಳ ಬಗ್ಗೆ ಈಗಾಗಲೇ ಮುಖಂಡರಾದ ರಮಾನಾಥ ರೈ ಮತ್ತು ವಿನಯಕುಮಾರ್ ಸೊರಕೆ ಅವರಿಗೆ ಮನವರಿಕೆ ಮಾಡಲಾಗಿದೆ’ ಎಂದರು.

‘ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ಹಾಗೆಂದು ಇಬ್ಬರ ಜಗಳದಲ್ಲಿ ಮೂರನೆಯವರು ಲಾಭ ಪಡೆಯಲು ಕಾರ್ಯಕರ್ತರು ಅವಕಾಶ ನೀಡುವುದಿಲ್ಲ. ನಮ್ಮಲ್ಲಿ ಸಮಸ್ಯೆಗಳಿದೆ ಎಂದು ಕಾಂಗ್ರೆಸ್ ಟಿಕೇಟನ್ನು ಬಿಜೆಪಿಗೆ ಮಾರಲು ಹೊರಟಿರುವುದು ಸರಿಯಲ್ಲ. ಪಕ್ಷದ ಸಿದ್ಧಾಂತ, ಜಾತ್ಯತೀತ ತತ್ವವನ್ನು ಉಳಿಸುವ ತಾಕತ್ತು ಇದ್ದವರು ಇಲ್ಲಿನ ಶಾಸಕರಾಗಬೇಕು ಎಂದರು.

ಪುತ್ತೂರು ಪುರಸಭೆಯ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಮಾತನಾಡಿ, ‘ಪ್ರತಿಯೊಬ್ಬ ಕಾರ್ಯಕರ್ತರೂ ಬಿಜೆಪಿ ವಿರುದ್ಧ ದುಡಿಯುತ್ತಿದ್ದಾರೆ. ಆದರೆ, ಅವರ ಮೇಲೆ ಬಿಜೆಪಿಗರನ್ನು ಮತ್ತೊಮ್ಮೆ ಹೇರಿಕೆ ಮಾಡುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಾಯಕರು ಕಾರ್ಯಕರ್ತರ ಭಾವನೆಗಳನ್ನು ಅರ್ಥಮಾಡಿಕೊಂಡು ಅವರ ನಿಲುವನ್ನು ಬೆಂಬಲಿಸಬೇಕು. ಅಶೋಕ್ ರೈ ಅವರು ಬಿಜೆಪಿಗಾಗಿ ಸಾಕಷ್ಟು ಕೆಲಸ ಮಾಡಿದ್ದರೂ ಅವರ ಪಕ್ಷವೇ ಅವರಿಗೆ ಟಿಕೆಟ್ ನೀಡಿಲ್ಲ. ಅವರಿಗೆ ಬೇಡವಾದವರು ಕಾಂಗ್ರೆಸ್‌ಗೆ ಯಾಕೆ ಬೇಕು’ ಎಂದು ಪ್ರಶ್ನಿಸಿದರು.

ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಜಿಲ್ಲಾ ಪಂಚಾಯಿತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಮುಖಂಡರಾದ ರವಿಪ್ರಸಾದ್ ಶೆಟ್ಟಿ, ಗಣೇಶ್ ರಾವ್, ಬೂಡಿಯಾರ್ ಪುರುಷೋತ್ತಮ ರೈ, ಆಸ್ಕರ್ ಆಲಿ, ಫಾರೂಕ್ ಬಾಯಬ್ಬೆ, ಕಿಟ್ಟಣ್ಣ ಗೌಡ, ಎಂ.ಪಿ. ಅಬೂಬಕ್ಕರ್, ಕೇಶವ ಪೂಜಾರಿ, ಜಯಪ್ರಕಾಶ್ ರೈ ನೂಜಿಬೈಲು, ಲ್ಯಾನ್ಸಿ ಮಸ್ಕರೇನಸ್, ಹನೀಫ್ ಬಗ್ಗುಮೂಲೆ, ಅನ್ವರ್ ಖಾಸಿಂ, ಇಸಾಕ್ ಸಾಲ್ಮರ, ಪರಮೇಶ್ವರ ಬಲ್ಯಾಯ, ಅಶೋಕ್ ಕುಮಾರ್ ಸಂಪ್ಯ, ಫೌಝಿಯಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು